ಸಾರ್ವಜನಿಕರ ಹಿತಾಸಕ್ತಿಯಲ್ಲೂ ರಾಜಕಾರಣಿಗಳ ರಾಜಕೀಯ?

By ಮಹಾಂತ ವಕ್ಕುಂದ, ಮ್ಯುನಿಕ್ - ಜರ್ಮನಿ

ಜುಲೈ 10, 2013ರ ಕನ್ನಡ ಪ್ರಭ ಅಂಕಣದಲ್ಲಿ ''ಹಗಲು ದರೋಡೆ ಮಾಡುತ್ತಿವೆಯೇ ನಮ್ಮ ಆಟೋಗಳು'' ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಅದೇ ರೀತಿ ಸಾಮಾಜಿಕ ವೆಬ್ ತಾಣಗಳಲ್ಲಿ ಬೆಳಗಾವಿ ಹಾಗು ಉತ್ತರ ಕರ್ನಾಟಕದ ಇತರ ಭಾಗಗಳಲ್ಲಿ ಆಟೋ ಮೀಟರ್ ಅಳವಡಿಕೆಯಾಗದ ವಿಷಯವಾಗಿ ಸಾರ್ವಜನಿಕರ ಕೂಗು ತಾರಕಕ್ಕೇರಿತ್ತು . ಇದಕ್ಕೆ ಪ್ರತ್ತ್ಯುತ್ತರವಾಗಿ ಒಂದು ಪರಿಹಾರ ಕಂಡುಕೊಳ್ಳಲು ನಮ್ಮ ಜಿಲ್ಲಾ ಪೋಲಿಸ್ ಕಮಿಷನರ್ ಹಾಗು ಜಿಲ್ಲಾಧಿಕಾರಿಗಳು ಸಭೆ ಸೇರಿ ಚರ್ಚಿಸಿ ಆಟೋಗಳಿಗೆ ಒಂದು ನ್ಯಾಯವಾದ ಬೆಲೆಯನ್ನು ನಿಗದಿ ಪಡಿಸಿ ಜುಲೈ 15, 2013 ರಿಂದ ಅನುಮೋದನೆಯಾಗುವಂತೆ ಕನಿಷ್ಠ 20 ರುಪಾಯಿ (ಮೊದಲ 2 ಕಿ, ಮೀ ) ನಂತರ ಪ್ರತಿ ಕಿಲೋ ಮೀಟರ್ ಗೆ 10 ರುಪಾಯಿಯಂತೆ ಬಾಡಿಗೆಗೆ ಬರಲು ಆದೇಶಿಸಿದರು. ಬೆಳಗಾವಿ ದೊಡ್ಡ ನಗರವೇ ಆದರೆ ಬೆಂಗಳೂರಿನಷ್ಟಲ್ಲ. ಆದರೂ ಈ ಬೆಲೆ ನಮ್ಮ ರಾಜಧಾನಿ ಬೆಂಗಳೂರಿನ ಆಟೋ ದರಗಳಿಗೆ ಸರಿ ಸಮಾನವಾಗಿ ನಿಗದಿ ಪಡಿಸಲಾಗಿತ್ತು. ಖರ್ಚು ವೆಚ್ಚಗಳು, ಜೀವನ ಶೈಲಿ ಬೆಂಗಳೂರಿಗಿಂತ ಸ್ವಲ್ಪ ಅಗ್ಗ ಎಂಬುದು ಇಲ್ಲಿಯ ತಾತ್ಪರ್ಯ.

ಆದರೆ ಇದನ್ನೋಪ್ಪದ ಆಟೋ ಚಾಲಕರು ಹಾಗೂ ಆಟೋ ಸಂಘಗಳು ತಮಗೆ ಕನಿಷ್ಠ 30 ರುಪಾಯಿ ಹಾಗು ಕೀ.ಮೀಗೆ 15 ರುಪಾಯಿಯಂತೆ ಬಾಡಿಗೆ ನಿಗದಿಪಡಿಸಲು ಆಗ್ರಹಿಸಿ ಧರಣಿ ನಡೆಸಿದರು. ಅದೆಷ್ಟೋ ಜಟಾಪಟಿಗಳ ನಂತರ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಟರು ಕನಿಷ್ಠ 20 ರುಪಾಯಿ (ಮೊದಲ 2 ಕೀ.ಮೀ) ನಂತರ ಪ್ರತಿ ಕಿಲೋ ಮೀಟರ್‌ಗೆ 10 ರುಪಾಯಿಯಂತೆ ಬಾಡಿಗೆಗೆ ಬರಲು ಆದೇಶಿಸಿದರು. ಆದರೆ ಜುಲೈ 15ರ ಬದಲಾಗಿ ಆಗಸ್ಟ್ ೧ರ ವರೆಗೆ ಆಟೋ ಮೀಟರ್ ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಯಿತು.

Mahantesh Vakkund

ಇಷ್ಟು ಕಾಲವಾಕಾಶ ಸಿಕ್ಕಿದ್ದೇ ತಡ ಪ್ರತಿ ನಿತ್ಯ ಒಂದೊಂದು ಆಟೋ ಸಂಘಟನೆಗಳು ಒಂದೊಂದು ನೆಪ ಹೇಳಿಕೊಂಡು ಜಿಲ್ಲಾಧಿಕಾರಿಗೆ ಮೀಟರ್ ಅಳವಡಿಕೆಯನ್ನು ರದ್ಧುಗೊಳಿಸುವಂತೆ ಮನವಿ ಸಲ್ಲಿಸಿದವು. ಈ ಆಟೋ ಚಾಲಕರಿಗೆ ಬೆಂಬಲವೆಂಬಂತೆ ಜಯ ಕರ್ನಾಟಕ ಸಂಘಟನೆ, ದಲಿತ ಸಂಘ ಇನ್ನು ಅದು ಇನ್ಯಾನ್ಯಾರೋ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ ಇದಕ್ಕೆಲ್ಲ ಒಪ್ಪದ ಅಧಿಕಾರಿಗಳು ಆಗಸ್ಟ್ 1ರಿಂದ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಆದೇಶಿಸಿದ್ದರು. ಆದರೆ ಇಷ್ಟು ದಿನ ಕಳೆದರೂ ಆ ಆದೇಶಕ್ಕಾಗಲಿ, ಜನರ ಕೋರಿಕೆಗಾಗಲಿ ಈ ಆಟೋ ಚಾಲಕರು ಹಾಗೂ ಆಟೋ ಸಂಘದವರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.

ಆದೇಶ ಭದ್ಧರಾದಂತೆ ಪೋಲಿಸ ಇಲಾಖೆಯವರು ಈ ತಿಂಗಳ ಮೊದಲ ಒಂದೆರಡು ದಿನ ಮೀಟರ್ ರಹಿತ ಆಟೋಗಳನ್ನು ಪರಿಶೀಲಿಸಿ ದಂಡ ವಿಧಿಸುವ ಸಾಹಸಕ್ಕೆ ಕೈ ಹಾಕಿದರು. ಇದನ್ನರಿತ ಆಟೋ ಚಾಲಕರು ಮೀಟರ್ ಅಳವಡಿಕೆಯ ವಿರುದ್ಧ ಪ್ರತಿಭಟನೆ ಶುರು ಮಾಡಿ ಸುಮಾರು 3 ದಿನಗಳ ಕಾಲ ಆಟೋ ಸಂಚಾರ ಸ್ಥಗಿತಗೊಳಿಸಿದರು. ಶನಿವಾರ ಸಂಜೆ (3ನೇ ಆಗಸ್ಟ್) ಇವರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಇನ್ನೇನು ನಾಳೆಯಿಂದ ಮೀಟರ್ ಲೆಕ್ಕದಲ್ಲಿ ಆಟೋಗಳು ಓಡಾಡುತ್ತವೆ ಎಂದು ಸಾರ್ವಜನಿಕರು ನಿಟ್ಟುಸಿರು ಬಿಟ್ಟರು. ಆದರೆ ಈಗ ನಡೆಯುತ್ತಿರುವುದೇ ಬೇರೆ .

ಅಧಿಕಾರಿಗಳು ಹಾಗೂ ಸರ್ಕಾರದ ಪ್ರಕಾರ ಆಗಸ್ಟ್ 1ರಿಂದ ಆಟೋ ಮೀಟರ್ ಕಡ್ಡಾಯವಾಗಿದೆ. ಆದರೆ ಇಂದಿಗೂ ಯಾವ ಒಬ್ಬ ಆಟೋ ಚಾಲಕನೂ ಮೀಟರ್ ಲೆಕ್ಕದಲ್ಲಿ ಆಟೋ ಓಡಿಸುತ್ತಿಲ್ಲ. 2ಕಿಲೋ ಮೀಟರ್ ಪ್ರಯಾಣಕ್ಕೆ ಅದೇ ಹಳೆ ಬಾಯಿ ಲೆಕ್ಕ 60-70 ರುಪಾಯಿ. ಮೀಟರ್ ಹಾಕಪ್ಪಾ ಅಂದರೆ ''ಬೇಕಾದರೆ ಬಸ್ಸಲ್ಲಿ ಹೋಗಿ, ಮೀಟರ್ ಇಲ್ಲ'' ಅನ್ನೋ ಉಡಾಪೆ ಉತ್ತರ. ಮೀಟರ್ ಅಳವಡಿಸಲು ಹಾಗೂ ಹಳೆ ಮೀಟರ್ ಗಳನ್ನೂ ದುರಸ್ಥಿ ಮಾಡಲು ಬೆಂಗಳೂರು ಹಾಗು ಹುಬ್ಬಳ್ಳಿಯಿಂದ ಬಂದಿರುವ ಕಾರ್ಮಿಕರಿಗೆ ಧಮಕಿ, ಅವಾಜು. ಬರಿ ಇಂತಹದ್ದೇ. ಇಷ್ಟರ ಮೇಲಾಗಿ ಇನ್ನು ಅದೆಷ್ಟೋ ಜನ ಆಟೋ ಚಾಲಕರಿಗೆ ಸರ್ಕಾರ ನಿಗದಿ ಪಡಿಸಿರುವ ಬೆಲೆ ಏನು ಎನ್ನುವುದೂ ಗೊತ್ತಿಲ್ಲ. ಹೀಗಿದೆ ನೋಡಿ ಸ್ವಾಮಿ ನಮ್ಮ ಇಂದಿನ ಪರಿಸ್ಥಿತಿ.

ಆದೇಶ ನೀಡಿದ ಜಿಲ್ಲಾಧಿಕಾರಿಗಳಾದ ಜಯರಾಮ್ ಆಗಲಿ, ಸಾರಿಗೆ ಸಂಸ್ಥೆಯ ಅಧಿಕಾರಿಯಾದ ಹೀಮಾದ್ರಿಯವರಾಗಲಿ, ಎಸ್ ಪಿ ಚಂದ್ರಗುಪ್ತ ಅವರಾಗಲಿ ಈ ಬಗ್ಗೆ ಈಗ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಆರಂಭದಲ್ಲಿ ಎಲ್ಲೆಂದರಲ್ಲಿ ಆಟೋ ನಿಲ್ಲಿಸಿ ಪರೀಕ್ಷಿಸುವ ನಾಟಕವಾಡಿದ ಪೋಲಿಸ ಇಲಾಖೆಗೂ ಇದರ ತಲೆ ಬಿಸಿ ಇಲ್ಲ. ಇವರನ್ನು ನಂಬಿ ಇಂದೋ ನಾಳೆಯೋ ಮೀಟರ್ ಖಾತ್ರಿಯಾಗುತ್ತದೆ ಎಂದು ಕಾಯುವ ಸಾರ್ವಜನಿಕರ ಪಾಡು ಮಾತ್ರ ಆ ದೇವರಿಗೆ ಪ್ರೀತಿ. ಯಾಕೆ ಹೀಗೆ ? ಏನಾಗಿದೆ ನಮ್ಮ ವ್ಯವಸ್ಥೆಗೆ ?

ಅಧಿಕಾರಿಗಳು ಒಂದೇ ವಾರಕ್ಕೆ ಈ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ. ಯಾಕೆ ? ಮೀಟರ್ ಬೇಕು ಎಂದು ಪ್ರತಿ ದಿನ ಆಟೋ ಲೂಟಿ ಹಾಗೂ ದರೋಡೆಯ ವಿರುದ್ಧ ಕೂಗಾಡುತ್ತಿರುವ ಜನರ ಪರವಾಗಿ ಮಾತನಾಡಲು ನಮ್ಮ ಕ್ಷೇತ್ರದ ಯಾವ ಜನಪ್ರತಿನಿಧಿಯೂ ಮುಂದೆ ಬರಲಿಲ್ಲ. ಹೇಳಿಕೊಳ್ಳುವುದಕ್ಕೆ ಬೆಳಗಾವಿ ನಗರದಿಂದಲ್ಲೇ 3 ಜನ MLA ಹಾಗು ಇಬ್ಬರು MPಗಳಿದ್ದಾರೆ. ಏನು ಪ್ರಯೋಜನ ? ಜನಸಾಮಾನ್ಯನ ಬದುಕಿನ ಬಗ್ಗೆ ಯೋಚಿಸುವ ಬದಲು ಇಂತಹ ಸಂದಿಗ್ಧ ಪರಿಸ್ಥಿಯಲ್ಲೂ ಜನರ ಸಹಾಯಕ್ಕೆ ಬರದೆ 'ವೋಟು ಬ್ಯಾಂಕ್' ರಾಜಕಾರಣ ಮಾಡುತ್ತಿರುವ ನಮ್ಮ ಫೈರೋಜ್ ಶೆಟ್ ಆಗಲಿ, ಸಂಜಯ್ ಪಾಟೀಲ ಅಥವಾ ಸಂಭಾಜಿ ಪಾಟೀಲರು ಸಾಮಾಜಿಕ ಕಾಳಜಿ ವಹಿಸದೆ ತಟಸ್ಥರಾಗಿರುವುದು ನಿಜಕ್ಕೂ ವಿಪರ್ಯಾಸ.

ಸುಮಾರು 6500 ಆಟೋಗಳು ಬೆಳಗಾವಿಯಲ್ಲಿ ದಿನ ನಿತ್ಯ ಓಡಾಡುತ್ತವೆ. ಅದರಲ್ಲಿ ಸಾವಿರಕ್ಕಿಂತ ಅಧಿಕ ಆಟೋಗಳು ಇನ್ನೂ ಕಾನೂನು ರೀತ್ಯಾ ನೋಂದಾಯಿಸಲ್ಪಟ್ಟಿಲ್ಲ. ಅದೇನೇ ಇರಲಿ. ಒಬ್ಬ ಆಟೋ ಚಾಲಕನ ಮನೆಯಿಂದ ಸರಾಸರಿ 3 ವೋಟು ಎಂದುಕೊಳ್ಳಿ .ಆಟೋ ಚಾಲಕರು ಹಾಗೂ ಅವರ ಸಂಸಾರದಿಂದಲೇ ಬರುವ ಸುಮಾರು 20,000 ವೋಟುಗಳು ಅಭ್ಯರ್ಥಿಯ ಭವಿಷ್ಯ ಬರೆಯಬಲ್ಲ ವೋಟುಗಳೇ. ಹೀಗಿರುವಾಗ ಈ ಆಟೋಚಾಲಕರ ವಿರುದ್ಧ ಮಾತನಾಡಿದಲ್ಲಿ ಅವರು ಮುಂದಿನ ಚುನಾವಣೆಯಲ್ಲಿ ಒಬ್ಬ MLA ಅಥವಾ MP ಯ ಹಣೆಬರಹ ಬದಲಿಸಬಲ್ಲರೆನೋ ಎಂಬ ಭಯ ಕಾಡುತ್ತಿದೆಯೇನೋ ನಮ್ಮ ರಾಜಕಾರಣಿಗಳಿಗೆ?

ಇವುಗಳ ಮಧ್ಯದಲ್ಲಿ ನಮ್ಮ ರಸ್ತೆ ಸಾರಿಗೆ ಸಂಸ್ಥ್ಯೆ(KSRTC )ಯ ಅದೆಷ್ಟೋ ವಾಹನ ಚಾಲಕರು ನಿರ್ವಾಹಕರು ಈ ಆಟೋ ಚಾಲಕರ ಜೊತೆ ಕೈ ಸೇರಿಸಿ ಅವರಿಗೆ ಕೆಲಸ ನೀಡಿದ ಸಂಸ್ಥೆಗೆ ಹಾಗೂ ಸಾರ್ವಜನಿಕರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂಬ ಅದೆಷ್ಟೋ ಆರೋಪಗಳು ಇದಾಗಲೇ ವೆಬ್ ತಾಣಗಳಲ್ಲಿ ಹರಿದಾಡುತ್ತಿವೆ. ಇದಾಗಲೇ ಈ ಬಗ್ಗೆ ಹಲವಾರು ಜನ ಫೇಸ್‌ಬುಕ್‌ನಂತಹ ಸಾಮಾಜಿಕ ವೆಬ್ ತಾಣಗಳಲ್ಲಿ KSRTC ನೌಕರರ ನಿಯತ್ತಿನ ಬಗ್ಗೆ ಮಾತನಾಡುತ್ತಿರುವುದು ಅವರನ್ನು ತೆಗಳುತ್ತಿರುವುದು ಕಂಡುಬರುತ್ತಿದೆ. ನಗರದ ರೈಲ್ವೆ ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಬೇಕಾದ ಬಸ್ ಚಾಲಕರು ಸಮಯಕ್ಕೆ ತಕ್ಕ ಹಾಗೆ ವಾಹನ ಓಡಿಸುವುದಿಲ್ಲ. ಕೇಳಿದರೆ ''ಅರ್ಜೆಂಟ್ ಇದ್ದರೆ ಆಟೋನಲ್ಲಿ ಹೊಗರಿ'' ಎಂದು ಜನಸಾಮಾನ್ಯರನ್ನು ಗದರಿಸುತ್ತಾರೆ. ಸಮಯಕ್ಕೆ ತಕ್ಕಂತೆ ಓಡಿಸಬಾರದು ಎಂಬ ಆಟೋ ಚಾಲಕರ ಮನವಿಗೆ ಹಾಗೂ ಅವರು ಕೊಡಬಹುದಾದ ಅಲ್ಪ ಗಿಂಬಳಕ್ಕೆ ನಮ್ಮ ಸಂಸ್ಥೆಯ ನೌಕರರು ಮಾರು ಹೋಗಿದ್ದಾರೆನೋ...

ನಿಯತ್ತಿನ ಮೀಟರ್ ಬೆಲೆ, ನಿಯಮ ಬದ್ಧ ಸಾರಿಗೆ ವ್ಯವಸ್ಥೆ ಕೇಳುತ್ತಿರುವ ನಮ್ಮೂರಿನ ಜನಕ್ಕೆ ಈ ಅಧಿಕಾರಿಗಳು, ರಾಜಕಾರಣಿಗಳು ಯಾವ ಸಹಕಾರವನ್ನು ನೀಡುತ್ತಿಲ್ಲ . ಮಕ್ಕಳು ಮರಿ ಕಟ್ಟಿಕೊಂಡು ಸಂಸಾರ ಸಮೇತರಾಗಿ ಓಡಾಡುವ ಜನರ ಪರಿಸ್ಥಿತಿ ಏನೆಂಬುದು ಆ ಜನರಿಗೆ ಗೊತ್ತು. ಬಿಟ್ಟು ಬಿಡದೆ ಸಿಕ್ಕ ಸಿಕ್ಕವರನ್ನೆಲ್ಲ ಲೂಟಿ ಮಾಡುವ ಈ ಆಟೋ ಚಾಲಕರ ದೌರ್ಜನ್ಯಕ್ಕೆ ಅದೆಂದು ಮುಕ್ತಿ ಸಿಗುವುದೋ ಗೊತ್ತಿಲ್ಲ. ಇವುಗಳಿಗೆಲ್ಲ ಕೊನೆ ಹೇಳಿ ಸಮಾಜದ ಪ್ರತಿಯೊಬ್ಬ ನಾಗರಿಕನೂ ಈ ವ್ಯವಸ್ಥೆಯನ್ನು ಹಕ್ಕು ಬಧವಾಗಿ ಅನುಭವಿಸುವಂತೆ ಮಾಡುವ ಜವಾಬ್ದಾರಿ ಹೊತ್ತವರೇ ತೆಪ್ಪಗೆ ಜಾರಿಕೊಂಡರೆ ಹೇಗೆ ?

ಇದಾಗಲೇ ಸಾಮಾನ್ಯ ಜನರೇ ಅಲ್ಲಿ ಇಲ್ಲಿ ಚಿಕ್ಕ ಪುಟ್ಟ ಪ್ರತಿಭಟನೆ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ಒಂದೇ ಸ್ಥಳದಲ್ಲಿ ಅಲ್ಲದಿದ್ದರೂ ತಮ್ಮ ತಮ್ಮ ಅನಿಸಿಕೆಯನ್ನು ತೋಡಿಕೊಳ್ಳುತ್ತಿದ್ದಾರೆ. ಹೀಗೆ ಹೋದರೆ ಒಂದಿನ ಎಲ್ಲರೂ ರಸ್ತೆಗಿಳಿದು ಧಣಿ ಎತ್ತುವುದು ನಿಶ್ಚಿತ. ಇದನ್ನೆಲ್ಲ ಕಂಡು ಕಾಣದಂತೆ ಕುಳಿತಿರುವ ಸಾರಿಗೆ ಸಚಿವರು, ಅಧಿಕಾರಿ ವರ್ಗ, ರಾಜಕಾರಣಿಗಳು ಇಷ್ಟರಲ್ಲೇ ಜನರ ಕೆಂಗಣ್ಣಿಗೆ ಗುರಿಯಾಗುವುದು ಖಚಿತ. ಕೊನೆಯದಾಗಿ ನಾನು ಕಳಕಳಿಯಿಂದ ಸಂಬಂಧಪಟ್ಟವರನ್ನೆಲ್ಲ ಕೇಳಿಕೊಳ್ಳುವುದೇನೆಂದರೆ ''ಇನ್ನಾದರೂ ನಿಮ್ಮ ನಿಮ್ಮ ಸ್ವಾರ್ಥ ಬಿಟ್ಟು ಸಾಮಾನ್ಯ ಜನರಿಗಾಗಿ ಏನೋ ಒಂದಾದರೂ ಸಣ್ಣ ಉಪಕಾರ ಮಾಡಿ. ನಿಮ್ಮನ್ನು ಚುನಾಯಿಸಿರುವುದು ಜನರು, ಆಟೋ ಚಾಲಕರಲ್ಲ. ಅಧಿಕಾರಿಗಳೇ ನೀವು ದುಡಿಯಬೇಕಾಗಿರುವುದೂ ಕೂಡ ಸಮಾಜಕ್ಕಾಗಿ, ರಿಕ್ಷಾ ಓಡಿಸುವವರ ಅನುಕೂಲಕ್ಕಲ್ಲ. ದಯಮಾಡಿ ಜನರ ಕೋರಿಕೆಗೆ ಸ್ಪಂದಿಸಿ ಅತಿ ಸಾಮಾನ್ಯನಿಗೂ ಕಿಂಚಿತ್ತಾದರೂ ನ್ಯಾಯ ದೊರಕುವಂತಾಗಲಿ. ಆಟೋ ಚಾಲಕರಿಗೆನೂ ಸಮಸ್ಸೆಗಳೇ ಇಲ್ಲ ಎನ್ನುವುದು ಮಾತಲ್ಲ ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಪ್ರತಿಯೊಬ್ಬರನ್ನು ಲೂಟಿ ಮಾಡುವುದು ಮಹಾಪರಾಧ. ದಯಮಾಡಿ ಮುಂದೆ ಬನ್ನಿ, ಸರ್ವ ಸಮ್ಮತ ಬೆಲೆಯನ್ನು ಸೌಲಭ್ಯಗಳನ್ನು ಪಡೆಯಲಿಚ್ಚಿಸುವ ಎಲ್ಲ ನಾಗರಿಕರಿಗೆ ನಿಮ್ಮ ನೆರವು ಅತ್ಯಾವಶ್ಯಕ''.

ಇವನ್ನೂ ಓದಿರಿ: ಆಟೋಮೊಬೈಲ್ ದಿಗ್ಗಜರ ಶಿಸ್ತು ಹಾಗೂ ಸಹಕಾರ ಜೀವನ

ಇಂತಿ,
ಮಹಾಂತ ವಕ್ಕುಂದ,
ಮ್ಯುನಿಕ್ - ಜರ್ಮನಿ

More from DriveSpark

Article Published On: Thursday, August 29, 2013, 12:20 [IST]
English summary
This article has been posted in the sense of public interest, Encourage the people of Belgaum and North Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+