Rahul Gandhi: ಲಾರಿ ಹತ್ತಿದ ರಾಹುಲ್ ಗಾಂಧಿ.. ಕಾರಣವೇನು? ವಿಡಿಯೋ ವೈರಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾನ್ಯ ಜನರೊಂದಿಗೆ ಆಗಾಗ ಬೆರೆತು ಅವರ ಕಷ್ಟ ಸುಖಗಳನ್ನು ಆಲಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ, ಲಾರಿಯಲ್ಲಿ ಪ್ರಯಾಣಿಸಿದ್ದು, ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ರಾಹುಲ್ ಕಂಡ ಕ್ಷಣ ಲಾರಿ ಚಾಲಕರು ಕೆಲಕಾಲ ಆಶ್ಚರ್ಯಚಕಿತರಾಗಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ತಮ್ಮ ತಾಯಿ ಹಾಗೂ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬದೊಂದಿಗೆ ಸಮಯ ಕಳೆಯಲು ರಾಹುಲ್ ಗಾಂಧಿ ದೆಹಲಿಯಿಂದ ಪ್ರಯಾಣ ಬೆಳೆಸಿದ್ದರು ಎಂದು ಹೇಳಲಾಗಿದೆ. ಈ ವೇಳೆ, ಹರಿಯಾಣದ ಸೋನಿಪತ್ ಹೆದ್ದಾರಿಯಲ್ಲಿರುವ ಧಾಬಾದಲ್ಲಿ ನಿನ್ನೆ ರಾತ್ರಿ ಟ್ರಕ್ ಡ್ರೈವರ್‌ಗಳನ್ನು ಭೇಟಿಯಾಗಿದ್ದಾರೆ. ಬಳಿಕ, ಅಂಬಾಲಾವರೆಗೆ ಲಾರಿಯಲ್ಲಿ ತೆರಳಲು ನಿರ್ಧರಿಸಿ, ಅದನ್ನು ಹತ್ತಿದ್ದಾರೆ. ಆ ವೇಳೆ ಚಾಲಕನ ಪಕ್ಕದಲ್ಲಿ ಕುಳಿತು ಆತನೊಂದಿಗೆ ಮಾತನಾಡಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ರಕ್ ನಲ್ಲಿ ರಾಹುಲ್ ಗಾಂಧಿ ಅವರು, ಪ್ರಯಾಣ ಬೆಳೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡು 'ಮಾಧ್ಯಮಗಳ ವರದಿ ಪ್ರಕಾರ, ಸುಮಾರು 90 ಲಕ್ಷ ಚಾಲಕರು ಭಾರತದ ರಸ್ತೆಗಳಲ್ಲಿ ವಿವಿಧ ವಾಹನಗಳನ್ನು ಓಡಿಸುತ್ತಿದ್ದಾರೆ.. ಅವರಿಗೆ ಅವರದೇ ಆದ ಸಮಸ್ಯೆಗಳಿವೆ. ರಾಹುಲ್ ಜಿ ಅವರ 'ಮನ್ ಕಿ ಬಾತ್' ಅನ್ನು ಆಲಿಸಿದರು' ಎಂದು ಬರೆಯಲಾಗಿದೆ.
ರಾಹುಲ್ ಗಾಂಧಿ ಲಾರಿಯಲ್ಲಿ ಪ್ರಯಾಣಿಸಿದ ವಿಡಿಯೋವನ್ನು ಕಾಂಗ್ರೆಸ್ ಮುಖಂಡರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ. ಸಂಸದ ಇಮ್ರಾನ್ ಪ್ರತಾಪ್‌ಘರ್ಹಿ ಅವರು, ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಟ್ರಕ್‌ನೊಳಗೆ ಕುಳಿತಿರುವಾಗ ಅಭಿಮಾನಿಗಳತ್ತ ಕೈ ಬೀಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದು, 'ರಾಹುಲ್ ಗಾಂಧಿ ಟ್ರಕ್ ಚಾಲಕರ ಸಮಸ್ಯೆ ತಿಳಿದುಕೊಳ್ಳಲು ಅವರೊಂದಿಗೆ ಸಮಯ ಕಳೆದಿದ್ದಾರೆ' ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಟ್ರಕ್ ನಲ್ಲಿ ಪ್ರಯಾಣಿಸಿದ್ದ ವಿಡಿಯೋಗೆ ನೆಟ್ಟಿಗರು ಸಹ ತಮಗೆ ತೋಚಿದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು '2024ರ ನಂತರ ಇದು ಅವರ ಹೊಸ ಕೆಲಸವಾಗಲಿದೆ' ಎಂದು ಹೇಳಿದ್ರೆ, ಮತ್ತೊಬ್ಬ, 'ಚಂಡೀಗಢ ನಂತರ ಶಿಮ್ಲಾದ ಬೇಸಿಗೆ ಮನೆಗೆ ಹೋದರು?' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಲಾರಿ ಚಾಲಕರು ಶೀಘ್ರದಲ್ಲೇ ಮುಷ್ಕರ ನಡೆಸಲಿದ್ದಾರೆ' ಎಂದು ಹೇಳಿದ್ದಾರೆ.
ಇನ್ನು, ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯು ರಾಹುಲ್ ಗಾಂಧಿ ಬಿಎಂಟಿಸಿ ಬಸ್ ನಲ್ಲಿ ಸಾಮಾನ್ಯರಂತೆ ಪ್ರಯಾಣಿಸುವ ಮೂಲಕ ಮಹಿಳಾ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದ್ದರು. ಅದಕ್ಕೂ ಮೊದಲು ಅವರು, ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ನಡೆಸಿದ 'ಭಾರತ್ ಜೋಡೋ ಯಾತ್ರೆ' ನಂತರ, ರಾಹುಲ್ ಗಾಂಧಿ, ಸಾಮಾನ್ಯ ಜನರೊಂದಿಗೆ ಹೆಚಾಗಿ ಬೆರೆತು ಸಂವಾದ ನಡೆಸುತ್ತಿದ್ದಾರೆ. ಇದೀಗ, ಲಾರಿಯಲ್ಲಿ ಪ್ರಯಾಣಿಸಿದ್ದು, ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು 'ಮನ್ ಕಿ ಬಾತ್' ಎಂದೇ ಬಿಂಬಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications