5 ಕಿ.ಮೀ ನಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿದ ಕೂಲಿ ಕಾರ್ಮಿಕ: ಕಥೆ ಕೇಳಿದರೆ ಅಯ್ಯೋ ಅನ್ಸತ್ತೆ!
ವಿದ್ಯಾರ್ಥಿಗಳಿಗೆ ಹಲವು ಶಾಲೆಗಳಲ್ಲಿ ಸ್ಕೂಲ್ ಬಸ್‌ಗಳ ವ್ಯವಸ್ಥೆ ಇರುತ್ತದೆ. ಮುಂಜಾನೆ ಆ ಬಸ್ ಅವರ ಮನೆ ಮುಂದೆಯೇ ಬಂದು ಪಿಕ್‌ಅಪ್ ಮಾಡಿ, ಸಾಯಂಕಾಲ ಶಾಲೆ ಮುಗಿಸಿದ ಮೇಲೆ ಮನೆ ಬಾಗಿಲಿಗೆ ತಂದು ಬಿಡುತ್ತಾರೆ. ಆದರೆ ಈಗಲೂ ಸಹ ಈ ಸೌಲಭ್ಯಗಳಿಲ್ಲದೆ ಕಿಲೋ ಮೀಟರ್‌ಗಟ್ಟಲೆ ನಡೆದುಕೊಂಡು ಹೋಗುವ ವಿಧ್ಯಾರ್ಥಿಗಳೂ ಇದ್ದಾರೆ.
ಇಲ್ಲೊಂದು ಕಡೆ ಕೂಲಿ ಕಾರ್ಮಿಕನೊಬ್ಬ (Labour), ತನ್ನ ಹಳ್ಳಿಯ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪಡುತ್ತಿರುವ ಕಷ್ಟವನ್ನು ನೋಡಲಾಗದೆ, ತಾನು ಕೂಲಿ ನಾಲಿ ಮಾಡಿ ಕೂಡಿಟ್ಟ ಹಣದಲ್ಲಿ ಸುಮಾರು 11 ಸೈಕಲ್ ಕೊಡಿಸಿ ಅವರ ವಿಧ್ಯಾಭ್ಯಾಸಕ್ಕೆ ಸಹಕರಿಸಿದ ಘಟನೆಯೊಂದು ವರದಿಯಾಗಿದೆ. ಇದೀಗ ಈ ಕುರಿತಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮತ್ತು ಗ್ರಾಮಸ್ಥರಿಂದ ಭರಪೂರ ಪ್ರಶಂಸೆಗಳು ಹರಿದು ಬರುತ್ತಿದೆ.

ಹೌದು, ರಾಯಚೂರಿನ (Raichur) ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಎಂಬಲ್ಲಿ ಈ ಘಟನೆ ನಡೆದಿದ್ದು, ೧೧ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಿದ ವ್ಯಕ್ತಿಯನ್ನು ಆಂಜನೇಯ ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಈ ಯುವಕ ಅಂದರೆ ಆಂಜನೇಯನಿರುವ ಗ್ರಾಮ ಮಲ್ಕಂದಿನ್ನಿಯಲ್ಲಿ ಪ್ರೌಢಶಾಲೆ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕಾಗಿ ಸುಮಾರು 5 ಕಿಮೀ ದೂರವಿರುವ ಹೇಮನೂರಿಗೆ ಹೋಗಬೇಕಾಗಿದೆ.
ಹೀಗೆ ಪ್ರೌಢ ಶಿಕ್ಷಣಕ್ಕೆ ಹೋಗಲಯ ವಿದ್ಯಾರ್ಥಿಗಳು ಪ್ರತಿ ದಿನವೂ ನಡೆದುಕೊಂಡೇ ಹೋಗಬೇಕಾಗಿದೆ ಎಂದು ತಿಳಿದು ಬಂದಿದೆ. ಇನ್ನು ದಿನ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಆಂಜನೇಯ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ್ದಾನೆ. ವಿದ್ಯಾರ್ಥಿಗಳ ಕಷ್ಟ ನೋಡಲಾಗದೇ, ಕೂಲಿ ಕೆಲಸ ಮಾಡಿ ತಾನು ಸ್ವಲ್ಪ ಸ್ವಲ್ಪವೇ ಕೂಡಿಟ್ಟ ಹಣವನ್ನು ತೆಗೆದುಕೊಂಡು ಸುಮಾರು 11 ಸೈಕಲ್ ಖರೀದಿಸಿದ ಆಂಜನೇಯ, ಅದನ್ನು ನೇರವಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆಗೆ ತೆಗೆದುಕೊಂಡು ಹೋಗಿದ್ದಾರೆ.
11 ಸೈಕಲ್ ಅನ್ನು ಸಹ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜ ಮತ್ತು ಇತರ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ' ಬಸ್ ಮತ್ತು ಇತರ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಯಾರೂ ಸಹ ಶಿಕ್ಷಣದಿಂದ ವಂಚಿತವಾಗಬಾರದು. ಈ ಕಾರಣದಿಂದ ನಾನು ನನ್ನ ಕೈಯಲ್ಲಾದ ಅಲ್ಪ ಸಹಾಯವನ್ನು ಮಾಡುತ್ತಿದ್ದೇನೆ" ಎಂದು ಆಂಜನೇಯ ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ.
ಇನ್ನು ಆಂಜನೇಯ ಸುಮಾರು 11 ಸೈಕಲ್‌ಗಳನ್ನು (Bicycles) ಖರೀದಿಸಲು 60000 ರರೂಗಳನ್ನು ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಾಪ, ತಾನು ಕೂಲಿ ನಾಲಿ ಮಾಡಿ ಕೂಡಿಟ್ಟ ಕಾಸನ್ನು ಹೀಗೆ ವಿದ್ಯಾರ್ಥಿಗಳ ಕ್ಷೇಮಕ್ಕೆ ವೆಚ್ಚ ಮಾಡಿರುವುದು ಯುವ ಪೀಳಿಗೆಗೆ ಒಂದು ಉದಾಹರಣೆ ಎಂದು ಹಲವರು ಈತನ ಗುಣಗಾನ ಮಾಡುತ್ತಿದ್ದಾರೆ.
ಆರು ಹೆಣ್ಣು ಮಕ್ಕಳಿಗೆ ಮತ್ತು 5 ಗಂಡುಮಕ್ಕಳಿಗೆ ಈ ಸೈಕಲ್ ದೊರಕಿದ್ದು, ಇನ್ನು ಮುಂದೆ ಶಾಲೆಗೆ ಆರಾಮವಾಗಿ ಹೋಗಬಹುದು ಎಂದು ಖುಷಿಪಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಹಲವಾರು ದುಶ್ಚಟಗಳಿಗೆ ಸಿಲುಕಿ ಹಣವನ್ನು ದುಂದುವೆಚ್ಚ ಮಾಡುತ್ತಿರುವ ಯುವಕರ ಮಧ್ಯೆ ಆಂಜನೇಯನಂತಹ ಯುವಕರು, ಇಂದಿನ ಸಮಾಜಕ್ಕೆ ಬೆಳಕಾಗಲಿದ್ದಾರೆ ಎಂಬ ಮಾತನ್ನು ನಾವು ಅಲ್ಲಗೆಳೆಯುವಂತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications