ವಂದೇ ಭಾರತ್ ಆಯ್ತು: ಕೇಂದ್ರದ ಬೃಹತ್ ಯೋಜನೆ.. ಶೀಘ್ರವೇ ಪರಿಸರ ಸ್ನೇಹಿ ಹೈಡ್ರೋಜನ್ ರೈಲು ಸಂಚಾರ!
ಭಾರತದಲ್ಲಿ ರೈಲುಗಳು ಹಲವರ ಜೀವನದ ಅವಿಭಾಗ್ಯ ಅಂಗವಾಗಿವೆ. ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರಲು ಇವುಗಳನ್ನೇ ಅವಲಂಭಿಸುರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಶೂನ್ಯ ಹೊರಸೂಸುವಿಕೆ ವಾಹನಗಳ ಮೂಲಕ ಶುದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ತಕ್ಕಂತೆ ಡೀಸೆಲ್ ಚಾಲಿತ ರೈಲುಗಳನ್ನು ಅತ್ಯಾಧುನಿಕರಣಗೊಳಿಸುತ್ತಿದೆ.
ರೈಲ್ವೆ ಇಲಾಖೆಯು ಸುದೀರ್ಘ ಕಾರ್ಯಸಾಧ್ಯತೆ ಅಧ್ಯಯನದ ಬಳಿಕ, ಹೈಡ್ರೋಜನ್ ಫಾರ್ ಹೆರಿಟೇಜ್ (Hydrogen for Heritage) ಯೋಜನೆಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಅದರ ಭಾಗವಾಗಿ ಬೆಟ್ಟ - ಗುಡ್ಡದ ನಡುವಿನ ದುರ್ಗಮ ಹಾದಿಯಲ್ಲಿನ ಪಾರಂಪರಿಕ ತಾಣಗಳಿಗೆ ಹೋಗುವ ಪ್ರವಾಸಿ ರೈಲುಗಳಲ್ಲಿ ಡೀಸೆಲ್ ಬದಲಿಗೆ ಹೈಡ್ರೋಜನ್ ಇಂಧನ ಬಳಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಲೋಕಸಭೆಯ ರೈಲ್ವೆ ಸ್ಥಾಯಿ ಸಮಿತಿ (2022 - 23) ತನ್ನ ವರದಿಯಲ್ಲಿ ಪ್ರತಿ ರೈಲಿಗೆ ಸರಿ ಸುಮಾರು ರೂ.80 ಕೋಟಿ ಅಂದಾಜು ವೆಚ್ಚದಲ್ಲಿ 35 ಹೈಡ್ರೋಜನ್ ರೈಲು ಓಡಿಸಲು ಪ್ರಸ್ತಾಪಿಸಿದ್ದು, ಆ ರೈಲುಗಳ ಒಂದೊಂದು ಮಾರ್ಗ ಅಭಿವೃದ್ಧಿಗೆ ರೂ.70 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಕೆಲವೇ ವರ್ಷಗಳಲ್ಲಿ ಈ ರೈಲುಗಳು ಸಂಚರಿಸಲಿವೆ.
ಪ್ರಮುಖವಾಗಿ, ಮಾಥೆರಾನ್ ಹಿಲ್, ಡಾರ್ಜಿಲಿಂಗ್, ಕಲ್ಕಾ ಶಿಮ್ಲಾ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾಘೈ, ಪಾತಪಲ್ಪಾನಿ ಕಲಾಕುಂಡ್, ನೀಲಗಿರಿ ಮೌಂಟೇನ್, ಮಾರ್ವಾರ್ - ಗೋರಂ ಘಾಟ್ ಮಾರ್ಗವಾಗಿ 35 ಹೈಡ್ರೋಜನ್ ಟ್ರೈನ್ ಚಲಿಸಲಿವೆ. ಪ್ರತಿಯೊಂದು, ರೈಲುಗಳು, ಆರು ಬೋಗಿಗಳನ್ನು ಒಳಗೊಂಡಿರಲಿವೆ. ಜೊತೆಗೆ, ಈ ರೈಲುಗಳು ಪರಿಸರ ಸ್ನೇಹಿಯಾಗಿರುವುದರಿಂದ ಇಲ್ಲಿನ ಬೆಟ್ಟ - ಗುಡ್ಡಗಳಿಗೆ ಸೂಕ್ತವಾಗಿವೆ.
ದೇಶದಲ್ಲಿ ಮೊದಲ ಹೈಡ್ರೋಜನ್ ಚಾಲಿತ ರೈಲು, ಜೂನ್ 2024ರಲ್ಲಿ ಕಾರ್ಯಚರಣೆ ಶುರು ಮಾಡುವ ನೀರಿಕ್ಷೆಯಿದೆ. ಈ ಮೂಲಕ ರೈಲ್ವೆ ಇಲಾಖೆಯು ದೊಡ್ಡ ಇತಿಹಾಸ ನಿರ್ಮಿಸಲು ಮುಂದಾಗಿದೆ. ಬಹುನಿರೀಕ್ಷಿತ ಹೈಡ್ರೊಜನ್ ರೈಲು ಹರಿಯಾಣದ ಜಿಂದ್ ರೈಲ್ವೆ ನಿಲ್ದಾಣದಿಂದ ಸೋನಿಪತ್ ವರಗೆ ಓಡಾಟ ಆರಂಭಿಸಲಿದ್ದು, ಇದು ಭಾರತದ ಪ್ರಪ್ರಥಮ ಪರಿಸರ ಸ್ನೇಹಿ ರೈಲು ಆಗಲಿದೆ.
ಆಮ್ಲಜನಕ ಮತ್ತು ಜಲಜನಕವನ್ನು ಒಟ್ಟುಗೂಡಿಸಿ, ಪವರ್ ಉತ್ಪಾದನೆಯೊಂದಿಗೆ ಹೈಡ್ರೋಜನ್ ರೈಲುಗಳು ಸಂಚರಿಸಲಿವೆ. ಸಾಂಪ್ರದಾಯಿಕ ಡೀಸೆಲ್ ಚಾಲಿತ ರೈಲು ಎಂಜಿನ್ ಗಳಿಗೆ ಹೋಲಿಸಿದರೆ, ಹೈಡ್ರೋಜನ್ ಚಾಲಿತ ಎಂಜಿನ್ ಹೊಂದಿರುವ ರೈಲುಗಳು ಪರಿಸರಕಾರಿಯಾಗಿದ್ದು, ಅಪಾಯಕಾರಿ ಮಾಲಿನ್ಯವನ್ನು ಹೊರಹಾಕುವುದಿಲ್ಲ. ಇದರಿಂದ ಶುದ್ಧ ವಾತಾವರಣ ನಿರ್ಮಾಣವಾಗಲು ನೆರವಾಗುತ್ತದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ರೈಲುಗಳನ್ನು ಮಾಲಿನ್ಯ ರಹಿತವಾಗಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಸದ್ಯ, ಕೇಂದ್ರ ಸರ್ಕಾರ ಹೈದರಾಬಾದ್ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ಏಳು ಪ್ರಮುಖ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು (ಬುಲೆಟ್) ಓಡಾಟಕ್ಕೆ ಯೋಜನೆ ರೂಪಿಸಿದೆ. ಚೆನ್ನೈ - ಬೆಂಗಳೂರು - ಮೈಸೂರು, ದೆಹಲಿ - ವಾರಣಾಸಿ, ದೆಹಲಿ - ಅಹಮದಾಬಾದ್, ದೆಹಲಿ - ಅಮೃತಸರ, ಮುಂಬೈ - ನಾಗ್ಪುರ, ವಾರಣಾಸಿ - ಹೌರಾ ನಗರಗಳ ಮಧ್ಯೆಯೂ ಕೆಲವೇ ವರ್ಷಗಳಲ್ಲಿ ಹೈಸ್ಪೀಡ್ ರೈಲು ಸಂಚರಿಸಲಿದೆ.
ಮುಂಬೈ - ಅಹಮದಾಬಾದ್ ನಗರಗಳ ನಡುವೆ ಜಪಾನ್ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಸರ್ಕಾರ, ಬುಲೆಟ್ ರೈಲು ಯೋಜನೆಯನ್ನು ಕೈಗೊಳ್ಳುತ್ತಿದ್ದು, 2027ರ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ, ಭಾರತದ ವಿವಿಧ ನಗರಗಳಲ್ಲಿ ಹೈಸ್ಪೀಡ್ ರೈಲುಗಳಾಗಿ ಕಾರ್ಯಚರಣೆ ನಡೆಸುತ್ತಿರುವ 'ವಂದೇ ಭಾರತ್ ಎಕ್ಸ್‌ಪ್ರೆಸ್' 160 ಕಿಮೀ.ಗೆ ಸಂಚಾರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ ಸೇರಿದಂತೆ ಹಲವು ಸೌಲಭ್ಯಗಳಿದ್ದು, ಎಸಿಯಿರುವ ವ್ಯವಸ್ಥೆಯಿದ್ದು, ಸೀಟುಗಳು ಆರಾಮದಾಯವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications