ಮಧ್ಯಮ ವರ್ಗದವರ ಆ ಕಷ್ಟ ನೋಡಿದ್ದ ರತನ್ ಟಾಟಾ.. ನ್ಯಾನೋ ಕಾರನ್ನು ತಂದು ಬಿಟ್ಟಿದ್ರು, ನಿಮಗೆ ಗೊತ್ತಿರದ ಕಥೆ!
ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ, ಆಟೋಮೊಬೈಲ್ ಕ್ಷೇತ್ರದ ದಂತಕಥೆ ಟಾಟಾ ಸಮೂಹದ (Tata Sons) ಗೌರವ ಅಧ್ಯಕ್ಷ ರತನ್ ಟಾಟಾ (Ratan Tata) ಬುಧವಾರ ನಿಧಾನರಾಗಿದ್ದಾರೆ. ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ರತನ್ ಟಾಟಾ ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors), ದೇಶೀಯ ವಾಹನ ಮಾರುಕಟ್ಟೆಗೆ ಮಹತ್ತರವಾದ ಕೊಡುಗೆ ನೀಡಿದ್ದು, ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಕಂಪನಿಯ ಕಾರುಗಳು ನಿರ್ಮಾಣ ಗುಣಮಟ್ಟದಿಂದಲೇ ಗ್ರಾಹಕರ ಮನ ಗೆದ್ದಿವೆ.
ನ್ಯಾನೋ ಕಾರಿನ ಹಿಂದಿನ ಕಥೆ ಏನು: ದಶಕಗಳ ಹಿಂದೆ, ಒಮ್ಮೆ ರತನ್ ಟಾಟಾ ಕಾರಿನಲ್ಲಿ ಪ್ರಯಾಣಿಸುವಾಗ ಹೊರಭಾಗದಲ್ಲಿ ವಿಪರೀತವಾದ ಮಳೆಯಾಗುತ್ತಿತ್ತು. ಅದೇ ಮಳೆಯನ್ನು ಲೆಕ್ಕಿಸದೆ ದಂಪತಿ ಹಾಗೂ ಮಕ್ಕಳು ದ್ವಿಚಕ್ರ ವಾಹನವೊದರಲ್ಲಿ ಹೋಗುತ್ತಿದ್ದರು. ಆದರೆ, ಅವರೆಲ್ಲರ ಬಟ್ಟೆಗಳು ನೆಂದು ಒದ್ದೆಯಾಗಿ ಬಿಟ್ಟಿದ್ದವು. ಇದನ್ನು ಕಣ್ಣಾರೆ ಕಂಡ ರತನ್ ಟಾಟಾ ಅವರಿಗೆ ಮಧ್ಯಮ ವರ್ಗದ ಜನರಿಗಾಗಿ ಏನನ್ನಾದರೂ ಮಾಡಬೇಕು ಎಂದು ಆಲೋಚಿಸುತ್ತಿದ್ದರು.

ಈ ಸಂಬಂಧ ರತನ್ ಟಾಟಾ ಹಲವರೊಂದಿಗೆ ಚರ್ಚೆಯನ್ನು ನಡೆಸಿದ್ದರು. ಅಂತಿಮವಾಗಿ ರೂ.1 ಲಕ್ಷ ಆಸುಪಾನ ಬೆಲೆ ಹೊಂದಿರುವ ಕಾರನ್ನು ಮಾರಾಟಕ್ಕೆ ತರಲು ಯೋಜನೆ ರೂಪಿಸಿದ್ದರು. ದೇಶಾದ್ಯಂತ ರತನ್ ಟಾಟಾ ಅವರು ಅತಿಕಡಿಮೆ ಬೆಲೆಗೆ ಹೊಸ ಕಾರನ್ನು ಬಿಡುಗಡೆಗೊಳಿಸುತ್ತಾರೆ ಎಂಬ ಸುದ್ದಿ ವೇಗವಾಗಿ ಹಬ್ಬಿತ್ತು. ಅಂದಿನ ಗ್ರಾಹಕರಿಗೆ ನೂತನ ಕಾರಿಗೆ ಬಗ್ಗೆ ನಿರೀಕ್ಷೆಗಳು ಕೂಡ ದುಪ್ಪಟ್ಟಾಗಿದ್ದವು.
2008 ರಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ರತನ್ ಟಾಟಾ ಅವರ ಕನಸಿನ ಕಾರದ ಟಾಟಾ ನ್ಯಾನೋವನ್ನು ಪ್ರದರ್ಶಿಸಲಾಗಿತ್ತು. ಮರು ವರ್ಷ ಅಂದರೆ 2009 ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಪರಿಚಯಿಸಲಾಗಿತ್ತು. ಪತ್ರಿಕೆ ಹಾಗೂ ಟಿವಿಗಳಲ್ಲಿ ಬರುತ್ತಿದ್ದ ನ್ಯಾನೋ ಕಾರಿನ ಜಾಹೀರಾತುಗಳು ಸಾಮಾನ್ಯ ಜನರನ್ನು ಸೆಳೆದಿದ್ದವು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿಯೂ ನ್ಯಾನೋ ಕಾರುಗಳು ಮಾರಾಟವಾಗಿದ್ದವು.

ಟಾಟಾ ನ್ಯಾನೋ ಕಾರು ಹೇಗಿತ್ತು: ಟಾಟಾ ನ್ಯಾನೋ (Tata Nano) ಪುಟ್ಟ ಕಾರಾಗಿದ್ದರೂ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿತ್ತು. ಈ ಕಾರಿನಲ್ಲಿ 4 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದಾಗಿತ್ತು. 624 ಸಿಸಿ ಸಾಮರ್ಥ್ಯದ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿತ್ತು. ಈ ಕಾರು ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 21.9 ರಿಂದ 36 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತಿತ್ತು.
ಟಾಟಾ ನ್ಯಾನೋ ಅತ್ಯಂತ ಕಡಿಮೆ ಬೆಲೆಯ ಕಾರೆಂಬ ಹಿರಿಮೆಗೆ ಪಾತ್ರವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ. ನಾನಾ ಕಾರಣಗಳಿಗೆ ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಕುಸಿತವಾಗುತ್ತಲೇ ಇತ್ತು. ಈ ಹಿನ್ನೆಲೆ, 2018ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆಗ ರೂ.2.47 ಲಕ್ಷ ಬೆಲೆಯನ್ನು ಹೊಂದಿತ್ತು.
ಭಾರತೀಯ ಮನ ಗೆದ್ದಿದ್ದ ಇಂಡಿಕಾ: ಟಾಟಾ ನ್ಯಾನೋ ಮಾರಾಟಕ್ಕೆ ಬರುವ ಮೊದಲ ಟಾಟಾ ಇಂಡಿಕಾ (Tata Indica), ದೇಶದ ಜನರ ಮನೆಗಳನ್ನು ತಲುಪಿತ್ತು. 1998ರ ಜವನರಿಯಲ್ಲಿ ಇಂಡಿಕಾ ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಆಗಿನ ಕಾಲಕ್ಕೆ ಬರೋಬರಿ 100,000 ಬುಕ್ಕಿಂಗ್ ಪಡೆಯುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿತ್ತು.
2018ರ ಏಪ್ರಿಲ್ ತಿಂಗಳಲ್ಲಿ ಟಾಟಾ ಇಂಡಿಕಾ ಹ್ಯಾಚ್‌ಬ್ಯಾಕ್ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕಡೆಯದಾಗಿ ಈ ಕಾರು ರೂ.2.77 ಲಕ್ಷದಿಂದ ರೂ.4.26 ಬೆಲೆಯನ್ನು ಹೊಂದಿತ್ತು. 1405 ಸಿಸಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನ್ನು ಪಡೆದಿತ್ತು. ಜೊತೆಗೆ 13.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು. ಈಗಲೂ ಇಂಡಿಕಾ ರಸ್ತೆಯಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುತ್ತಿರುತ್ತದೆ.
ಇನ್ನು, ರತನ್ ಟಾಟಾ ಇನ್ನು ನೆನಪು ಮಾತ್ರ! ಆದರೆ, ಆಟೋಮೊಬೈಲ್ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಹಾಗೂ ತೆಗೆದುಕೊಂಡಿದ್ದ ನಿರ್ಧಾರಗಳು ಎಂದಿಗೂ ಅಜರಾಮರ. ರತನ್ ಟಾಟಾ ಕನಸಿನ ಕಾರದ ನ್ಯಾನೋ ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದು ನಿಜವಾಗಲಿ ಎಂದು ಬಹುತೇಕರ ಆಶಯವಾಗಿದೆ.


Click it and Unblock the Notifications