ಹೊಸ ವಾಹನ ತಯಾರಿ ಘಟಕ ನಿರ್ಮಾಣಕ್ಕೆ ಬೇಡಿಕೆ... ಗೌರಿಬಿದನೂರು ಸೇರಿದಂತೆ ಎರಡು ಕಡೆ ಸ್ಥಳ ಪರಿಶೀಲನೆ!
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅದರಲ್ಲೂ ನಮ್ಮ ಬೆಂಗಳೂರು ಮೂಲದ ಓಲಾ, ಎಥರ್, ಸಿಂಪಲ್ ಒನ್ ಇವಿ ತಯಾರಕ ಕಂಪನಿಗಳಿಗೆ ಭಾರೀ ಬೇಡಿಕೆ ಇದೆ. ಈ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ವಿಸ್ತರಿಸುತ್ತಾ ಮುನ್ನುಗ್ಗುತ್ತಿವೆ. ಇದೀಗ ಇದೇ ಸಾಲಿಗೆ ಹೊಸ ಸ್ಟಾರ್ಟ್ ಅಪ್ ಆಗಿರುವ 'ರಿವರ್ ಇಂಡಿ' ಎಂಟ್ರಿಕೊಟ್ಟಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿರುವ ರಿವರ್ ಇಂಡಿ, ಗ್ರಾಹಕರಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಇದೀಗ ತಯಾರಕರು ತಮ್ಮ ವಾಹನಗಳ ನಿರ್ಮಾಣ ಪ್ರಮಾಣದ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ತಯಾರಿಕಾ ಪ್ರಮಾಣವನ್ನು ಹೆಚ್ಚಿಸಲು ಕಂಪನಿಗೆ ಅಗತ್ಯ ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ರಿವರ್ ಇಂಡಿ ಸಿಇಒ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಂಪನಿಯು ಪ್ರಸ್ತಾವಿಸಿರುವ ಹೊಸ ಉತ್ಪಾದನಾ ಸೌಲಭ್ಯದ ಮೂಲಕ ವರ್ಷಕ್ಕೆ 5 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಿಸಿಲು ಯೋಜಿಸಿದೆ. ಪ್ರಸ್ತುತ ಹೊಸಕೋಟೆ ಬಳಿ ಇರುವ ಉತ್ಪಾದನಾ ಘಟಕವು ವರ್ಷಕ್ಕೆ ಅಂದಾಜು 1 ಲಕ್ಷ ಇವಿಗಳ ತಯಾರಿ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿರುವ ಕಾರಣ ಸೂಕ್ತ ಸ್ಥಳಕ್ಕಾಗಿ ಬೇಡಿಕೆ ಇಡಲಾಗಿದೆ.
ವರದಿಗಳ ಪ್ರಕಾರ ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಬಯಸಿದ ಪ್ರಕಾರ ಭೂಮಿ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಇವಿ ಕ್ಷೇತ್ರದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶಗಳಿವೆ. ಸರಕಾರ ಕೂಡ ಉತ್ತೇಜನವನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇವಿಗಳು ಜನಪ್ರಿಯವಾಗಲಿವೆ ಎಂದರು.

ಕಂಪನಿಯು ಇ.ವಿ. ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸಲಿದ್ದು, 400 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ತಿಳಿದುಬಂದಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ, ಅಲ್ಲಿ ನಿರ್ಮಾಣಗೊಳ್ಳಲಿರುವ ಉತ್ಪಾದನಾ ಸ್ಥಾವರದಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್ ಪಾರ್ಕ್ ಸ್ಥಾಪಿಸಲಾಗುವುದು ಎಂದ ಸಚಿವ ಎಂ.ಬಿ.ಪಾಟೀಲ, ಜಪಾನ್, ದಕ್ಷಿಣ ಕೊರಿಯಾಗಳ ಮಾದರಿಯಲ್ಲಿ ಈ ಸ್ಟಾರ್ಟ್‌ಅಪ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ ಕೊಡಲಾಗುತ್ತದೆ. ಸಕಲ ಸೌಲಭ್ಯ ಸಜ್ಜಿತ, ಬಳಕೆಗೆ ಸಿದ್ಧ ಇರುವ ಕಚೇರಿಗಳು ಇಲ್ಲಿ ಇರಲಿವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ರಿವರ್ ಇಂಡಿ ಸ್ಕೂಟರ್ ವಿಶೇಷತೆಗಳು: ಸ್ಕೂಟರ್ ದೊಡ್ಡ 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಯಿಂದ 120 ಕಿ.ಮೀ. ರೇಂಜ್ ನೀಡುವುದಾಗಿ ಕಂಪನಿ ಹೇಳಿದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 5 ಗಂಟೆಗಳಲ್ಲಿ ಶೇ 80 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ರಿವರ್ಸರ್ ಮೋಡ್ ಸೇರಿದಂತೆ ಬಹು ಸವಾರಿ ವಿಧಾನಗಳನ್ನು ಸ್ಕೂಟರ್ ಒಳಗೊಂಡಿದೆ.
ಫೀಚರ್‌ಗಳ ಕುರಿತು ಹೇಳುವುದಾದ್ರೆ, ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಇಂಚಿನ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಸಿಬಿಎಸ್ ಬ್ರೇಕಿಂಗ್, USB ಚಾರ್ಜರ್, 12-ಲೀಟರ್ ಗ್ಲೋವ್ ಬಾಕ್ಸ್, 43-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.


Click it and Unblock the Notifications








