ಬಡವರ ಸಾವು: CCTVಯಲ್ಲಿ ಹೃದಯ ವಿದ್ರಾವಕ ದೃಶ್ಯ ಸೆರೆ, ರೋಲ್ಸ್ ರಾಯ್ಸ್ ರಣಭೀಕರ ವೇಗದಲ್ಲಿ ಟ್ಯಾಂಕರ್‌ಗೆ ಡಿಕ್ಕಿ!
ಹರಿಯಾಣದ ಉಮ್ರಿ ಗ್ರಾಮದ ಸಮೀಪ ಹಾದು ಹೋಗುವ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ (Delhi - Mumbai Expressway)ಯಲ್ಲಿ ಮಂಗಳವಾರ ರೋಲ್ಸ್ ರಾಯ್ಸ್ ಕಾರು ಹಾಗೂ ಆಯಿಲ್ ಟ್ಯಾಂಕರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದರು.
ರೋಲ್ಸ್ ರಾಯ್ಸ್ ಕಾರಿನಲ್ಲಿದ್ದವರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆರಂಭದಲ್ಲಿ, ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಚಲಿಸುತ್ತಿದ್ದ ಆಯಿಲ್ ಟ್ಯಾಂಕರ್ ಹಾಗೂ ರೋಲ್ಸ್ ರಾಯ್ಸ್ ಫ್ಯಾಂಟಮ್ ನಡುವೆ ಮುಖ ಮುಖಿಯಾಗಿದ್ದು, ಟ್ಯಾಂಕರ್ ಚಾಲಕನ ಅಜಾಗರೂಕ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಬಿಂಬಿಸಲಾಗಿತ್ತು.

ಸದ್ಯ, ಈ ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳು ದೊರೆತ್ತಿವೆ. ಅದನ್ನು ಗಮನಿಸಿದಾಗ ಅಪಘಾತ ನಡೆದ ಸ್ಥಳದಲ್ಲಿ ಯುಟರ್ನ್ ಪಡೆಯುವುದಕ್ಕೆ ಜಾಗವಿತ್ತು. ಅಲ್ಲಿ ಡೀಸೆಲ್ ತುಂಬಿದ ಈ ಟ್ಯಾಂಕರ್ ಯುಟರ್ನ್ ತೆಗೆದುಕೊಳ್ಳುವಾಗ ಹಿಂಬದಿಯಿಂದ ವೇಗವಾಗಿ ಬಂದ ರೋಲ್ಸ್ ರಾಯ್ಸ್ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಕಾರು, ಗಂಟೆಗೆ 200 ಕಿಮೀ.ಗೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿತ್ತು.
ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಪಲ್ಟಿಯಾಗಿವೆ. ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದವರನ್ನು ಮತ್ತೊಂದು, ಕಾರಿನಲ್ಲಿ ಹಿಂದೆ ಬರುತ್ತಿದ್ದ ಅವರ ಸಂಬಂಧಿಕರು ರಕ್ಷಣೆ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾಹಿತಿ ಪ್ರಕಾರ, ಟ್ಯಾಂಕರ್‌ಗೆ ಅಗ್ನಿ ಅವಘಡಕ್ಕೆ ತುತ್ತಾಗಿಲ್ಲ.
ಎಕ್ಸ್‌ಪ್ರೆಸ್‌ವೇಯಲ್ಲಿ ತೆರಳುತ್ತಿದ್ದ ಇತರೆ ವಾಹನ ಸವಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. 10 ನಿಮಿಷದೊಳಗೆ ಪೊಲೀಸರು ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಜೊತೆಗೆ ಅಗ್ನಿಶಾಮಕ ವಾಹನಗಳು ಬಂದಿವೆ. ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಅಷ್ಟರಲ್ಲಿ ಬಡ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಮೃತಪಟ್ಟಿದ್ದಾರೆ.
ಹರಿಯಾಣ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಅಪಘಾತಕ್ಕೆ ಒಳಗಾಗಿರುವ ರೋಲ್ಸ್ ರಾಯ್ಸ್ ಕಾರು ಪ್ರಮುಖ ಉದ್ಯಮಿಯೊಬ್ಬರಿಗೆ ಸೇರಿದೆ. ಆ ಕಾರಣಕ್ಕೆ ಗಂಭೀರ ಪ್ರಕರಣವೆಂದು ಪರಿಗಣಿಸಿದ್ದು, ತನಿಖೆಗಾಗಿ ವಿಶೇಷ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಈ ಕಾರು, ಕುಬೇರ್ ಗ್ರೂಪ್ ನಿರ್ದೇಶಕ, ಕೈಗಾರಿಕೋದ್ಯಮಿ ವಿಕಾಸ್ ಮಾಲು ಅವರದ್ದು ಎಂದು ವರದಿಯಾಗಿದೆ.
ಘಟನೆಯ ದಿನ, ವಿಕಾಸ್ ಮಾಲು ಅವರು ಕೂಡ ರೋಲ್ಸ್ ರಾಯ್ಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನುಹ್ ಪೊಲೀಸ್ ವರಿಷ್ಠಾಧಿಕಾರಿ ನರೇಂದರ್ ಬಿಜರ್ನಿಯಾ ಅವರು, 'ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ರೋಲ್ಸ್ ರಾಯ್ಸ್ ಕಾರಿನಲ್ಲಿದ್ದರೂ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಹೇಳಿಕೆಗಳನ್ನು ಸದ್ಯಕ್ಕೆ ಪಡೆಯಲಾಗಿಲ್ಲ. ಕಾರನ್ನು ಓಡಿಸುತ್ತಿದ್ದರೂ ಯಾರು ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ' ಎಂದು ಹೇಳಿದ್ದಾರೆ.
ಇನ್ನು, ಕುಬೇರ್ ಗ್ರೂಪ್ ಆಡಳಿತ ಮಂಡಳಿ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರೋಲ್ಸ್ ರಾಯ್ಸ್ ಕಾರಿನ ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಇಬ್ಬರು ಅಮಾಯಕರ ಬಲಿಯಾಗಿರುವುದು ದುರದೃಷ್ಟ ಸಂಗತಿಯಾಗಿದೆ. ಈ ಘಟನೆಯಲ್ಲಿ ಪೊಲೀಸರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications