ಕಷ್ಟ ಕಾಲದಲ್ಲಿ ಮಾರಾಟವಾಗಿದ್ದ ಅದೇ ಬೈಕ್ 26 ವರ್ಷಗಳ ಬಳಿಕ ಮಾಲೀಕನ ಹುಡುಕಿ ಬಂತು!
ನಮ್ಮಲ್ಲಿ ಹಲವರು ತಮ್ಮ ಮೊದಲ ಬೈಕ್ ಅಥವಾ ಕಾರುಗಳಿಗೆ ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಕೊಟ್ಟಿರುತ್ತಾರೆ. ಕಾಲಾನಂತರದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಆ ವಾಹನಗಳನ್ನು ಇತರರಿಗೆ ಮಾರುತ್ತಾರೆ. ಆದ್ರೂ ಕೂಡ ವರ್ಷಗಳು ಕಳೆದರೂ ಆ ವಾಹನಗಳನ್ನು ಮರೆಯುವುದಿಲ್ಲ. ಆ ವಾಹನಗಳನ್ನು ಮರಳಿ ಖರೀದಿಸಿದವರು ಕೂಡ ಹಲವರಿದ್ದಾರೆ. ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿದ್ದು, ಸುಮಾರು 26 ವರ್ಷಗಳ ಹಿಂದೆ ಮಾರಾಟವಾದ ತನ್ನ ತಂದೆಯ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ (Royal Enfield Bullet) ಅನ್ನು ಮಗ ಮರಳಿ ಖರೀದಿಸಿ ಅಪ್ಪನನ್ನು ಅಚ್ಚರಿಗೊಳಿಸಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಜೋಜೊ ಕೊಟ್ಟೂರ್ ಎಂಬಾತ ಹಂಚಿಕೊಂಡಿದ್ದು, ಇವರ ತಾಯಿ 1979 ರಲ್ಲಿ ತಮ್ಮ ತಂದೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ದಂಪತಿ ಈ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. ವಿಡಿಯೋ ಹಂಚಿಕೊಂಡಿರುವ ಜೋಜೊ ಕೂಡ ತಮ್ಮ ಸಣ್ಣ ವಯಸ್ಸಿನಲ್ಲಿ ಆಗಾಗ್ಗೆ ಈ ಮೋಟಾರ್ ಸೈಕಲ್‌ನ ಟ್ಯಾಂಕ್ ಮೇಲೆ ಕೂತು ಪ್ರಯಾಣಿಸುತ್ತಿದ್ದರು.

ದುರದೃಷ್ಟವಶಾತ್, ಈ ಬೈಕ್ ಅನ್ನು 1998 ರಲ್ಲಿ ಮಾರಾಟ ಮಾಡಲಾಯಿತು. ಕಾಲಾನಂತರದಲ್ಲಿ ಕುಟುಂಬವು ಹೊಸ ಕಾರನ್ನು ಖರೀದಿಸಿದ್ದರೂ, ತಂದೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಹೇಗಾದರೂ ಮಾಡಿ ತಂದೆಗೆ ಇದನ್ನು ಹಿಂದಿರುಗಿಸಬೇಕಲ್ಲವೇ ಎಂದುಕೊಂಡ ಮಗ ಬೈಕಿನ ಬಗ್ಗೆ ಆನ್‌ಲೈನ್‌ನಲ್ಲಿ ಪರಿಶೀಲಿಸಿದ್ದರು. ಅದು ಇನ್ನೂ ಬಳಕೆಯಲ್ಲಿದೆ ಎಂದು ಕಂಡುಕೊಂಡರು.
ಕೊನೆಗೂ ಬೈಕ್ ಬಳಸುತ್ತಿರುವ ಮಾಲೀಕರನ್ನು ಸಂಪರ್ಕಿಸುವಲ್ಲಿ ಜೊಜೊ ಯಶಸ್ವಿಯಾದರು. ಬಳಿಕ ಬೈಕ್ ಜೊತೆಗೆ ಅವರಿಗಿರುವ ಸಂಬಂಧವನ್ನು ಹಂಚಿಕೊಂಡು ಮರಳಿ ತಮಗೆ ಮಾರಾಟ ಮಾಡಲು ಕೇಳಿಕೊಂಡರು. ಇದಕ್ಕೆ ಮಾಲೀಕ ಒಪ್ಪಿದ್ದೇ ತಡ, ಜೊಜೊ ತಮ್ಮ ತಂದೆಯ ಹಳೆಯ ಬೈಕ್ ಅನ್ನು ಸಂಪೂರ್ಣ ಹೊಸ ಬೈಕ್‌ನಂತೆ ಮಾಡಿಫೈಗೊಳಿಸಿದ್ದಾರೆ. ಹಳೆಯ ವಿಂಟೇಜ್ ಬುಲೆಟ್ ಲುಕ್ ಅನ್ನು ಸಂಪೂರ್ಣ ಬದಲಿಸಿ ಆಧುನಿಕ ಆವೃತ್ತಿಯನ್ನು ಹೋಲುವಂತೆ ಕಸ್ಟಮೈಸ್ ಮಾಡಿಸಿಬಿಟ್ಟರು.

ಹೊಸ ರಾಯಲ್ ಎನ್‌ಫೀಲ್ಡ್ ಲೋಗೊ ಒಳಗೊಂಡಿರುವ ಔಟರ್ ಬಾಡಿ ಪ್ಯಾನೆಲ್, ಹೊಸ ಡಿಸ್ಕ್ ಬ್ರೇಕ್, ಹೆಡ್‌ಲ್ಯಾಂಪ್, ಸ್ಪೋಕ್ ವೀಲ್‌ಗಳೊಂದಿಗೆ ಬ್ಲ್ಯಾಕ್-ಔಟ್ ಸ್ಟೀಲ್ ರಿಮ್‌ಗಳು, ಕ್ರೋಮ್ ಒಆರ್‌ವಿಎಂಗಳು ಸೇರಿದಂತೆ ಆಧುನಿಕ ವೈಶಿಷ್ಟ್ಯಗಳನ್ನು ಬೈಕ್‌ನಲ್ಲಿ ಅಳವಡಿಸಿದ್ದಾರೆ. ಒಟ್ಟಾರೆ 26 ವರ್ಷಗಳ ಹಳೆಯ ಬುಲ್ಲೆಟ್ ಅನ್ನು ಸಂಫೂರ್ಣ ರೆಟ್ರೋ ಲುಕ್‌ನಲ್ಲಿ ಹೊರತಂದಿದ್ದಾರೆ.
ಅಪ್ಪನಿಗೆ ಬೈಕ್ ಕೊಡುವ ಸಂರ್ಭದಲ್ಲಿ ದಂಪತಿಯ ಮುಖದಲ್ಲಿನ ಸಂತೋಷವು ಬೆಲೆಕಟ್ಟಲಾಗದ್ದು, ಏಕೆಂದರೆ ಈ ಅನುಭವವು ಅವರ ಹಳೆಯ ದಿನಗಳನ್ನು ನೆನಪಿಸಿದ್ದವು. ಅನೇಕರು ಬೈಕ್ ಮೊದಲು ಇದ್ದ ಹಾಗೆಯೇ ಇರಬೇಕಿತ್ತು ಎಂದು ಸಲಹೆ ನೀಡಿದರಾದರೂ, ತಂದೆಗೆ ಹೊಸ ಲುಕ್ ಸಖತ್ ಇಷ್ಟವಾಗಿದೆಯಂತೆ. ಏನೇ ಆಗಲಿ ತಂದೆಯ ಮುಖದಲ್ಲಿ ನಗುವನ್ನು ನೋಡಲು ಮಗನ ಕಷ್ಟಕ್ಕೆ ನೆಟ್ಟಿಗರು ಮೆಚ್ಚಿದ್ದಾರೆ.
ಅದೊಂದು ಅದ್ಭುತ ಪ್ರಯಾಣ, ಹೆತ್ತವರ ಮುಖದಲ್ಲಿ ನಗುವನ್ನು ನೋಡುವುದೇ ದೊಡ್ಡ ಸಾಧನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಹಲವರ ನೆನಪುಗಳನ್ನು ಮರಳಿ ನೆನಪಿದ್ದಾರೆ. ಕೊನೆಯ ದಿನಗಳಲ್ಲಿ ತಂದೆ - ತಾಯಿಯ ಆಸೆಗಳನ್ನು ಈಡೇರಿಸುವ ಮಕ್ಕಳು ನಿಜವಾಗಿಯು ಪುಣ್ಯವಂತರು ಎಂಬೆಲ್ಲಾ ಕಮೆಂಟ್‌ಗಳು ವಿಡಿಯೋಗೆ ವ್ಯಕ್ತವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications