ಈ ರಾಜ್ಯದಲ್ಲಿ 76 ಲಕ್ಷ ರೂಪಾಯಿ ಮೌಲ್ಯದ ರೇಂಜ್ ರೋವರ್ ಕೇವಲ 100 ರೂಪಾಯಿಗೆ? ಇದು ನಿಜ ರೀ..!
ಬಹುತೇಕರಿಗೆ ಜೀವನದಲ್ಲಿ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಎಷ್ಟೋ ಮಂದಿಯ ಬದುಕಿನಲ್ಲಿ ಅದು ಕನಸಾಗಿಯೇ ಉಳಿಯುತ್ತದೆ. ಅಸ್ಸಾಂ (Assam) ಜನರಿಗೆ ಮಾತ್ರ ಅಂತಹ ಆಸೆ ಈಡೇರಲಿದ್ದು, ಅದಕ್ಕಾಗಿ 100 ರೂಪಾಯಿ ಹಾಗೂ ಅದೃಷ್ಟ ಬೇಕಷ್ಟೆ!
ಅಸ್ಸಾಂನಲ್ಲಿ 96ನೇ ಹೌಲಿ ರಾಸ್ ಉತ್ಸವ (Howly Raas Festival) ಭಾಗವಾಗಿ ಸಂಘಟಕರು, ಲಾಟರಿ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಇದರ ಮೊದಲ ಬಹುಮಾನವಾಗಿ 76 ಲಕ್ಷ ರೂಪಾಯಿ ಮೌಲ್ಯದ ರೇಂಜ್ ರೋವರ್ (Range Rover), ದ್ವಿತೀಯ ಬಹುಮಾನವಾಗಿ 50 ಲಕ್ಷ ರೂಪಾಯಿಯ ಟೊಯೊಟಾ ಫಾರ್ಚುನರ್ (Toyota Fortuner) ಕಾರು ಇದೆ.

ನಂತರದ ಬಹುಮಾನವಾಗಿ ಮಹೀಂದ್ರಾ ಸ್ಕಾರ್ಪಿಯೊ (Mahindra Scorpio), ಸ್ಕೋಡಾ ಕುಶಾನ್ (Skoda Kuchak), ಟಾಟಾ ನೆಕ್ಸಾನ್ (Tata Nexon) ಕಾರುಗಳನ್ನು ನೀಡಲಾಗುತ್ತದೆ. ಲಾಟರಿಯೊಂದಕ್ಕೆ ಕೇವಲ ರೂ.100 ಬೆಲೆಯಿದೆ. ಉತ್ಸವ ಭಾಗವಾಗಿ ಲಾಟರಿ ಸ್ಪರ್ಧೆಯನ್ನು ಆಯೋಜಿಸಿದ್ದು, ಟಿಕೆಟ್ ಮಾರಾಟದಿಂದ ಬಂದ ಹಣವನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ಅಸ್ಸಾಂನ ಹೌಲಿಯಲ್ಲಿ ಈ ಗಿಫ್ಟ್ ಕೂಪನ್ ನೀಡುತ್ತಿರುವ ಸ್ಥಳದಲ್ಲಿ ಜನರು ನಾಮುಂದು, ತಾಮುಂದು ಎಂಬಂತೆ ಖರೀದಿಸುತ್ತಿದ್ದು, ವಿಜೇತರ ಹೆಸರನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗುತ್ತದೆ. ಇಲ್ಲಿನ ಬರ್ಪೇಟಾ ಜಿಲ್ಲೆಯಲ್ಲಿರುವ ಹೌಲಿ ಪಟ್ಟಣದಲ್ಲಿ ರಾಸ್ ಉತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು, ಶ್ರೀಕೃಷ್ಣ ಮತ್ತು ರಾಧೆ ನಡುವಿನ ಪ್ರೀತಿಗಾಗಿ ಮೀಸಲಾಗಿರುವ ಹಬ್ಬವಾಗಿದೆ. ಪ್ರತಿ ವರ್ಷ ಹಿಂದೂ ಮಾಸದ ಕಾಟಿಯಲ್ಲಿ ಪೂರ್ಣಿಮಾ ತಿಥಿಯಲ್ಲಿ ಆಚರಿಸಲಾಗಿತ್ತದೆ.

ಈ ವರ್ಷ ನವೆಂಬರ್ 24 ರಿಂದ ಡಿಸೆಂಬರ್ 10 ರವರೆಗೆ ರಾಸ್ ಉತ್ಸವವನ್ನು ಸಡಗರದಿಂದ ನಡೆಸಲಾಗುತ್ತದೆ. ಲಾಟರಿ ಸ್ಪರ್ಧೆ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ವರ್ಷ ಉತ್ತರ ಗುವಾಹಟಿಯ ಪೊಲೀಸ್ ಅಧಿಕಾರಿ ಜನಾರ್ದನ್ ಬೊರೊ ಅವರು, ಮೊದಲ ಬಹುಮಾನವಾದ ಆಡಿ ಕಾರನ್ನು ಪಡೆದಿದ್ದರು. 2022 ರಲ್ಲಿ, 3.2 ಲಕ್ಷ ಲಾಟರಿ ಟಿಕೆಟ್ ಮಾರಾಟವಾಗಿದ್ದವು. ಈ ವರ್ಷ 4 ಲಕ್ಷ ಟಿಕೆಟ್ ಮಾರಾಟಕ್ಕೆ ನಿರ್ಧರಿಸಲಾಗಿದೆ.
ಮೊದಲ ಬಹುಮಾನವಾಗಿ ಇಟ್ಟಿರುವ ರೇಂಜ್ ರೋವರ್ ಕಾರುಗಳು, ದೇಶೀಯ ಮಾರುಕಟ್ಟೆಯಲ್ಲಿ ರೂಪಾಂತರಕ್ಕೆ ಅನುಗುಣವಾಗಿ ರೂ.2 ಕೋಟಿ ವರೆಗೆ ಬೆಲೆಯನ್ನು ಹೊಂದಿವೆ. ಆದರಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಮಾತ್ರ ರೂ.72.09 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು, 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನೊಂದಿಗೆ ಖರೀದಿಗೆ ಸಿಗಲಿದ್ದು, ದರಕ್ಕೆ ತಕ್ಕಂತೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ದ್ವಿತೀಯ ಬಹುಮಾನವಾಗಿಟ್ಟಿರುವ ಟೊಯೋಟಾ ಫಾರ್ಚುನರ್ ರೂ.33.43 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 7 ಆಸನ ಆಯ್ಕೆಯಲ್ಲಿ ದೊರೆಯುವ ಈ ಕಾರು, 2.7 - ಲೀಟರ್ ಪೆಟ್ರೋಲ್, 2.8 - ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವಿಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಒಳಗೊಂಡಿದೆ.
ಟೊಯೋಟಾ ಫಾರ್ಚುನರ್ 10.0 kmpl ಮೈಲೇಜ್ ನೀಡಲಿದ್ದು, ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲಿನ್ ಶೈನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6 - ಸ್ಪೀಕರ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications