ಸಾಮಾನ್ಯರಂತೆ ಪ್ರಯಾಣ: ಸ್ಟೇಡಿಯಂನಂತಾದ ವಿಮಾನ: ಗೊಂದಲದಲ್ಲಿ ವಿದೇಶಿಗರು!
ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತನಗೊಂದು ಪುಟವನ್ನು ಸೃಷ್ಟಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ಅವರು, ಇತ್ತೀಚೆಗೆ ತುಂಬಾ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿ ಎಲ್ಲರ ಗಮನ ಸೆಳೆದಿದ್ದು, ಈ ಕುರಿತ ವಿಡಿಯೋ ಸಖತ್ ವೈರಲ್ ಆಗಿದೆ.
ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಇತ್ತೀಚೆಗೆ ಸಾಮಾನ್ಯರಂತೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದು, ಏಕಾಏಕಿ ಕ್ರಿಕೆಟ್ ದೇವರನ್ನು ಕಂಡು ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ಸಚಿನ್ ವಿಮಾನದೊಳಗೆ ಕಾಲಿಡುತ್ತಿದ್ದಂತೆ ಸಹ ಪ್ರಯಾಣಿಕರು ಚಪ್ಪಾಳೆ ತಟ್ಟಿ ಅವರ ಹೆಸರನ್ನು ಕೂಗುತ್ತಿದ್ದರು. ಪ್ರಯಾಣಿಕರ ಅಭಿಮಾನಕ್ಕೆ ಭಾವುಕರಾಗಿ ಎಲ್ಲರಿಗೂ ಕೈಮುಗಿದರು.
ಇನ್ನೊಂದೆಡೆ ಸಚಿನ್ ಯಾರೆಂದು ತಿಳಿಯದ ವಿದೇಶಿ ಪ್ರಯಾಣಿಕರು ಗೊಂದಲದಲ್ಲಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಏಕೆಂದರೆ ಇಡೀ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ತಮ್ಮ ಫೋನ್‌ಗಳನ್ನು ಹಿಡಿದು ಸಚಿನ್ ಅವರನ್ನು ವಿಡಿಯೋ ಮಾಡುತ್ತಿದ್ದಾಗ ಆಶ್ಚರ್ಯಕರ ರೀತಿಯಲ್ಲಿ ವಿದೇಶಿಗರು ನೋಡುತ್ತಿದ್ದರು. ಜೊತೆಗೆ ಎಲ್ಲರೂ ಸಚಿನ್ ಸಚಿನ್ ಎಂದು ಜಪಿಸುವುದನ್ನು ಕಂಡು ಅಚ್ಚರಿಗೊಂಡಿದ್ದರು.
ಹಿಮದಲ್ಲಿ ಸಿಲುಕಿದ್ದ ಸಚಿನ್ ತೆಂಡೂಲ್ಕರ್: ಇತ್ತೀಚೆಗೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಮೂಲಕ ಸುಂದರವಾದ ಕಾಶ್ಮೀರ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಹಿಮಭರಿತ ಪರ್ವತಗಳಲ್ಲಿ ಸಾಹಸ ಮಾಡುವಾಗ ಅವರ ಟೊಯೋಟಾ ಫಾರ್ಚುನರ್ ಸಿಲುಕಿಕೊಂಡಿತ್ತು. ಈ ಕುರಿತ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಸಚಿನ್ ತೆಂಡೂಲ್ಕರ್ ಅವರ ಟೊಯೊಟಾ ಫಾರ್ಚೂನರ್ ಪರ್ವತದ ಮೇಲೆ ಹಿಮಪಾತದ ಸಮಯದಲ್ಲಿ ಸಿಲುಕಿರುವ ವೀಡಿಯೊವನ್ನು ಆಸಿಫ್ ರಶೀದ್ ಎಂಬುವರು ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಜನರು ಈ ಕಾರಿನ ಮುಂಭಾಗದಿಂದ ಐಸ್ ಅನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದು, ಫಾರ್ಚುನರ್ ಪಕ್ಕದಲ್ಲಿ ಹಲವರು ಸೇನಾಧಿಕಾರಿಗಳು ನಿಂತಿದ್ದರು.
ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಇದು ಸಚಿನ್ ತೆಂಡೂಲ್ಕರ್ ಅವರ ಫಾರ್ಚೂನರ್ ಎಂದು ಹೇಳಿಕೊಂಡಿದ್ದಾರೆ. ಅವರು ಸಚಿನ್‌ನನ್ನು ಒಳಗೆ ಕುಳಿತಿರುವುದನ್ನು ತೋರಿಸಲು ಫಾರ್ಚುನರ್ ಹತ್ತಿರ ಬರುತ್ತಿದ್ದಾಗ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಅವರು ಕುಳಿತಿರುವುದನ್ನು ಕಾಣಬಹುದು. ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಕಾರಿನ ಬಳಿ ಬರುತ್ತಿದ್ದಂತೆಯೇ ಚಾಲಕ ತಕ್ಷಣ ವೀಂಡೋ ಮುಚ್ಚಿದ್ದನ್ನು ಗಮನಿಸಬಹುದು.
ಭಾರತದಲ್ಲಿ ಹೆಚ್ಚಿನ ಕ್ರಿಕೆಟ್ ಆಟಗಾರರಿಗೆ ಇದೇ ರೀತಿಯಲ್ಲಿ ಸ್ವಾಗತ ಸಿಗುವುದು ಹಾಗೂ ಅಭಿಮಾನಿಗಳು ಕೂಗಾಡುವುದು ಸಾಮಾನ್ಯ. ಆದರೆ ಸಚಿನ್ ನಿವೃತ್ತಿ ಪಡೆದು ದಶಕವೇ ಕಳೆದ್ರೂ ಅವರ ಶಾಶ್ವತ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ. ಸಚಿನ್ ತೆಂಡೂಲ್ಕರ್ ಅವರು ಹೋದಲ್ಲೆಲ್ಲಾ 'ಸಚಿನ್ ಸಚಿನ್' ಎಂಬ ಘೋಷಣೆಗಳೊಂದಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ನವೆಂಬರ್ 1989 ರಲ್ಲಿ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಮಾಡಿದ ಅವರು ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಕೆಲವು ದಾಖಲೆಗಳ ಹತ್ತಿರ ಯಾರೂ ಕೂಡ ಈವರೆಗೂ ಬಂದಿಲ್ಲ.

ಸಚಿನ್ 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರಾಗಿದ್ದರು. 2014 ರಲ್ಲಿ, ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಲಾಯಿತು. ಇಂತಹ ಗೌರವಕ್ಕೆ ಪಾತ್ರರಾದ ದೇಶದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ.


Click it and Unblock the Notifications