ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಭಾರತ: 'ಮತ್ಸ್ಯ 6000' ತಯಾರಾಗುತ್ತಿದೆ.. ವಿಶೇಷತೆಗಳೇನು?
ಬಾಹ್ಯಾಕಾಶದ ಮೇಲೆ ದೃಷ್ಟಿ ನೆಟ್ಟಿದ್ದ ಭಾರತ, ಇದೀಗ ತನ್ನ ಗಮನವನ್ನು ಸಮುದ್ರದ ಆಳಕ್ಕೆ ಹರಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿ ಯಶಸ್ವಿಯಾಗಿದ್ದು, 'ಸಮುದ್ರಯಾನ' ಮಿಷನ್‌ನೊಂದಿಗೆ 6 ಕಿಲೋಮೀಟರ್ ಸಾಗರದಾಳದಲ್ಲಿ ಸಂಶೋಧನೆಗೆ ಸಿದ್ಧತೆಗಳು ಶುರುವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ಕೇಂದ್ರ ಭೂ ವಿಜ್ಞಾನ (Earth Sciences) ಸಚಿವ ಕಿರೆನ್ ರಿಜಿಜು (Kiren Rijiju) ಅವರು, ಸಮುದ್ರದಾಳದಲ್ಲಿ ಚಲಿಸಲು ಸಾಮರ್ಥ್ಯವಿರುವ ಅತ್ಯಾಧುನಿಕ ಸಬ್‌ಮರ್ಸಿಬಲ್ (submersible) ಮತ್ಸ್ಯ 6000 (MATSYA 6000) ಅನ್ನು ಬಹಿರಂಗಪಡಿಸಿದ್ದಾರೆ. ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (National Institute of Ocean Technology) ಈ ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಿದೆ.

ಮತ್ಸ್ಯ 6000, ಮೂರು ಜನರನ್ನು (ನಾವಿಕ) ಸುಲಭವಾಗಿ ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಸಾಗರದ ಆಳದ ಸಂಪನ್ಮೂಲ ಹಾಗೂ ಜೀವವೈವಿಧ್ಯತೆಯ ಕುರಿತು ಅಧ್ಯಯನ ಮಾಡಲಾಗುತ್ತದೆ. ಸಚಿವ ಕಿರೆನ್ ರಿಜಿಜು ಅವರು ಹೇಳುವಂತೆ, 'ಪ್ರಧಾನಿ ನರೇಂದ್ರ ಮೋದಿ ಆಶಯವಾಗಿರುವ ಬ್ಲೂ ಎಕಾನಮಿ ಅನ್ನು ಬೆಂಬಲಿಸುವ ಗುರಿಯನ್ನು ಈ ಮಿಷನ್ ಹೊಂದಿದೆ' ಎಂದಿದ್ದಾರೆ.
'ಭಾರತದ ಆರ್ಥಿಕ ಪ್ರಗತಿ ಹಾಗೂ ಉದ್ಯೋಗ ಸೃಷ್ಟಿಗೆ ಸಾಗರದ ಆಳದ ಸಂಪನ್ಮೂಲವನ್ನು ಹೊರತೆಗೆಯುವಿಕೆಯ ಗುರಿಯನ್ನು ಹೊಂದಲಾಗಿದೆ. ಜೊತೆಗೆ, ಸಮುದ್ರದೊಳಗಿನ ಪರಿಸ್ಥಿತಿಯನ್ನು ತಿಳಿಯಲು ನೇರವಾಗುತ್ತದೆ' ಎಂದು ರಿಜಿಜು ಹೇಳಿದ್ದಾರೆ. ಮುಖ್ಯವಾಗಿ ಸಮುದ್ರದೊಳಗೆ ಸಿಗುವ ನಿಕಲ್, ಕೋಬಾಲ್ಟ್, ಮ್ಯಾಂಗನೀಸ್, ಸಲ್ಫೈಡ್ ಮತ್ತು ಗ್ಯಾಸ್ ಹೈಡ್ರೇಟ್ ಖನಿಜಗಳನ್ನು ಹುಡುಕುವ ಉದ್ದೇಶವನ್ನು ಈ ವಿಷನ್ ಹೊಂದಿದೆ ಎಂದು ಹೇಳಲಾಗಿದೆ. 2024ರಲ್ಲಿ ಪ್ರಾಯೋಗಿಕ ಕಾರ್ಯಗಳು ಶುರುವಾಗುವ ನೀರಿಕ್ಷೆಯಿದೆ.

ಮೂರು ಜನರನ್ನು ಹೊತ್ತಯ್ಯಬಲ್ಲ ಮತ್ಸ್ಯ 6000 ಜಲಾಂತರ್ಗಾಮಿ ನೌಕೆ, 2.1 ಮೀಟರ್ ವ್ಯಾಸ ಹೊಂದಿದ್ದು, ಗೋಳದ ಆಕಾರದಲ್ಲಿದೆ. 80 ಎಂಎಂ ದಪ್ಪದ ಟೈಟಾನಿಯಂ ಮಿಶ್ರಲೋಹದಿಂದ ಮಾಡಲಾಗಿದೆ. ಸಮುದ್ರದ ಆಳದಲ್ಲಿ 12 ಗಂಟೆ ತನಕ ಸುಧೀರ್ಘ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಪಡೆದಿದೆ. ಕಳೆದ ಜೂನ್ ತಿಂಗಳಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದ 'ಟೈಟಾನ್' ಸಬ್ ಮೆರೀನ್ ದುರಂತಕ್ಕೆ ಒಳಗಾದ ಹಿನ್ನೆಲೆ, ವಿಜ್ಞಾನಿಗಳು ಮತ್ತಷ್ಟು ಎಚ್ಛೆತ್ತುಕೊಂಡಿದ್ದಾರೆ.
ಕೇವಲ ಎರಡು ವಾರಗಳ ಹಿಂದೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಈ ಮಿಷನ್ ನಲ್ಲಿ ಪ್ರತಿದಿನ ಸೂರ್ಯನ 1440 ಚಿತ್ರಗಳನ್ನು ಸೆರೆಯಿಡಿಯಲಾಗುತ್ತದೆ. ಸೂರ್ಯನ ಮೇಲ್ಮೈ, ತಾಪಮಾನ, ಸೌರಜ್ವಾಲೆ, ವಾತಾವರಣದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.
ಇನ್ನು, ಚಂದ್ರಯಾನ - 3ರ ಯಶಸ್ಸಿನ ನಂತರ, ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. 'ಸಮುದ್ರಯಾನ' ಮಿಷನ್‌ನೊಂದಿಗೆ ದೇಶದ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಆ ಕಾರಣಕ್ಕೆ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಸಮುದ್ರದ ಆಳದಲ್ಲಿ ವಿವಿಧ ಅಧ್ಯಯನವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿ ಈ ನೌಕೆ ಸಮುದ್ರದ ಆಳಕ್ಕೆ ಇಳಿಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications