ಬೆಂಗಳೂರಿನಲ್ಲಿ ಮಧ್ಯರಾತ್ರಿ ನಕಲಿ ಅಪಘಾತ ಪ್ರಕರಣ: ಕಾರು ನಿಲ್ಲಿಸಿದಾಗ ತಾಯಿ ಮಗಳ ಮೇಲೆ ದಾಳಿಗೆ ಯತ್ನ
ಭಾರತದಲ್ಲಿ ಮಹಿಳೆಯರ ಸುರಕ್ಷತೆ ಇಂದಿಗೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ. ಹಲವಾರು ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಮತ್ತು ಅದರಲ್ಲಿ ಕೆಲವೇ ಕೆಲವಷ್ಟೇ ಜನರೆದುರು ತಲುಪುತ್ತಿದೆ. ಇದೀಗ ಬೆಂಗಳೂರಿನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಿರುವ ಘಟನೆಗಳು ವರದಿಯಾಗುತ್ತಿದೆ. ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಅಪರಿಚಿತರು ಆಕ್ರಮಿಸಲು ಪ್ರಯತ್ನಿಸಿದ್ದಾರೆ.
ಹೌದು, ಕಿಪೀ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಘಟನೆಯ ಕುರಿತಾದ ವಿಡಿಯೋ ಶೇರ್ ಮಾಡಲಾಗಿದ್ದು ವಿಡಿಯೋ ತಲೆಬರಹದಲ್ಲಿ ಘಟನೆಯ ಕುರಿತಾಗಿ ಪ್ರಸ್ತಾಪ ಮಾಡಿದ್ದಾರೆ. ವಿಡಿಯೋ ತಲೆಬರಹ ಈ ರೀತಿ ಇದೆ. “ನಾನು ಮತ್ತು ನನ್ನ ತಾಯಿ ರಾತ್ರಿ ವೇಳೆ ನನ್ನ ಗೆಳೆಯರ ಮನೆಯಲ್ಲಿ ಊಟ ಮುಗಿಸಿ ಮನೆಗೆ ವಾಪಸಾಗುತ್ತಿದ್ದೆವು. ಬರುವ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ನನ್ನ ಕಾರಿಗೆ ಅಡ್ಡಗಟ್ಟಿ ನಮ್ಮನ್ನು ಆಕ್ರಮಿಸಲು ಪ್ರಯತ್ನಿಸಿದ್ದಾರೆ.
Today when me and my mother were driving home after dinner at a friend's, we were attacked by miscreant riders who purposefully tried to collide with my car. When we stopped they tried to break and window and blocked the front and rear of my car. We managed to drive away unhurt. pic.twitter.com/QaneYjMjdl
— kipii (@kipii9) March 2, 2023
ಅವರು ಇಬ್ಬರೂ ನಮ್ಮ ಕಾರಿನ ಕಿಟಕಿಯನ್ನು ಒಡೆಯಲು ಪ್ರಯತ್ನಿಸಿದ್ದರು. ಹೇಗೋ ನಾವು ಅಲ್ಲಿಂದ ಪಾರಾದೆವು” ಎಂದು ತಿಳಿಸಿದ್ದಾರೆ. ಇನ್ನು ಘಟನೆಯ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ವಿಡಿಯೋದಲ್ಲಿ ಇಬ್ಬರೂ ಆರೋಪಿಗಳ ಮುಖ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಘಟನೆಗೆ ಸಂಭಂಧಿಸಿದಂತೆ ಆಕೆ ಇನ್ನೊಂದು ವಿಡಿಯೋ ಸಹ ಪೋಸ್ಟ್ ಮಾಡಿದ್ದು ಅದರಲ್ಲಿ ಅಪರಿಚಿತರು ಆಕೆಯ ಕಾರಿಗೆ ಅಡ್ಡಲಾಗಿ ಬೈಕ್ ತಂದು ಇಡುವುದನ್ನು ನಾವು ಕಾಣಬಹುದಾಗಿದೆ.
ಇನ್ನು ವಿಡಿಯೋದಲ್ಲಿ ಆಕೆಯ ಸಂಭಾಷಣೆಯಿಂದ ತಿಳಿದು ಬರುವ ವಿಷಯವೆಂದರೆ ಅಪರಿಚಿತರು ಆಕೆಯ ಕಾರಿಂದ ತಮ್ಮ ಬೈಕ್‌ಗೆ ಗುದ್ದಿದ್ದಾಗಿಯೂ, ಅದನ್ನು ಕೇಳುವುದಕ್ಕಾಗಿ ಅಡ್ಡ ಹಾಕಿರುವುದಾಗಿ ತಿಳಿಯುತ್ತದೆ. ವಿಡಿಯೋದಲ್ಲಿ ಏನೂ ತಾಗಿಲ್ಲ, ಏನೂ ಆಗಿಲ್ಲ ಎಂಬ ಮಾತನ್ನು ಮಹಿಳೆಯು ಹೇಳುತ್ತಿದ್ದು, ಅಪರಿಚಿತರು ಅದನ್ನು ಕೇಳದೆ ಕಾರಿಗೆ ಹಾನಿ ಮಾಡಲು ಮುಂದಾಗುತ್ತಿರುವುದನ್ನು ಕಾಣಬಹುದಾಗಿದೆ. ಅದನ್ನು ಲೆಕ್ಕಿಸದೆ ಈಕೆಯನ್ನು ಆಕ್ರಮಿಸಲು ಪ್ರಯತ್ನಸಿದಾಗ ಪೊಲೀಸ್‌ಗೆ ಕರೆ ಮಾಡಲು ತನ್ನ ತಾಯಿಯ ಬಳಿ ಹೇಳುತ್ತಿರುವುದನ್ನು ನೋಡಬಹುದು.

ಘಟನೆಯು ಬೆಂಗಳೂರಿನ ಅರಕೆರೆ ಬಳಿಯ ಅನುಗ್ರಹ ಲೇಔಟ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ನನ್ನ ತಾಯಿಯು ಅವರ ಬಳಿ ಏನೂ ಮಾಡದಿರುವಂತೆ ಕೋರಿಕೊಳ್ಳುತ್ತಿದ್ದು, ಅವರು ಅದನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಈ ಘಟನೆಯ ಆಘಾತದಿಂದ ವೃದ್ಧೆಯಾಗಿರುವ ನನ್ನ ತಾಯಿ ಇನ್ನೂ ಹೊರಬಂದಿಲ್ಲ. ಅಪಘಾತವೇನೂ ಆಗದೆಯೇ ನಮ್ಮನ್ನು ಆಕ್ರಮಿಸಲು ಪ್ರಯತ್ನಿಸಿದ ಅವರು, ಇನ್ನು ಅಪಘಾತವಾಗಿದ್ದಿದ್ದರೆ ನಮಗೆ ಏನು ಮಾಡುತ್ತಿದ್ದರು ಎಂದು ಆಲೋಚಿಸಲೂ ಭಯವಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ.
ಇನ್ನು ಬೆಂಗಳೂರು ಸಿಟಿ ಪೊಲೀಸರನ್ನು ಸಹ ಟ್ಯಾಗ್ ಮಾಡಲಾಗಿದ್ದು ದಯವಿಟ್ಟು ಈ ಕುರಿತಾಗಿ ತನಿಖೆ ನಡೆಸಿ ಎಂದು ಕೇಳಿಕೊಂಡಿದ್ದಾರೆ. ಅನುಗ್ರಹಾ ಲೇಔಟ್‌ನ ಸೋಮೇಶ್ವರ ದೇವಸ್ಥಾನದಿಂದ ಮೀನಾಕ್ಷಿ ಮಾಲ್ ತನಕ ಮಧ್ಯರಾತ್ರಿ 12:30-40 ರ ಸಮಯದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದರೆ ಯಾವ ರೀತಿಯಾಗಿ ಅಪರಿಚಿತರು ತಮ್ಮ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ ಎಂಬಿತ್ಯಾದಿ ಘಟನೆಯ ಸಂಪೂರ್ಣ ಮಾಹಿತಿ ದೊರಕುತ್ತದೆ ಎಂದು ಅವರು ಇದೇ ಸಂಧರ್ಭದಲ್ಲಿ ವಿಡಿಯೋ ತಲೆಬರಹದಲ್ಲಿ ತಿಳಿಸಿದ್ದಾರೆ.
ಇನ್ನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆಯು, ಅಪರಿಚಿತರು ಉದ್ದೇಶ ಪೂರ್ವಕವಾಗಿ ತಮ್ಮ ಕಾರಿನ ಗಾಜುಗಳನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಹಿಂಬಾಲಿಸಿಕೊಂಡು ಬಂದು ಕಾರನ್ನು ತಡೆದು ನಿಲ್ಲಿಸಿ ಪ್ರಾಣಹಾಣಿ ಮಾಡಲು ಪ್ರಯತ್ನಿಸಿದ್ದಾರೆ. ಇನ್ನು ಅವರಿಂದ ತಪ್ಪಿಸಿಕೊಂಡು ಬರುವ ಸಮಯದಲ್ಲು ಹುಳಿಮಾವು ಎಂಬ ಪ್ರದೇಶದ ವರೆಗೂ ಅಪರಿಚಿತರು ನಮ್ಮನ್ನು ಹಿಂಬಾಲಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳ ಬಂಧನಕ್ಕಾಗಿ ಅವರು ಇದೇ ಸಂಧರ್ಭದಲ್ಲಿ ಪೊಲೀಸರ ಬಳಿ ಆಗ್ರಹಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ರಾತ್ರಿಹೊತ್ತು ಪ್ರಯಾಣ ಮಾಡುವಾಗ ದರೋಡೆಕೋರರಿಂದ ಎಚ್ಚರವಾಗಿರಬೇಕು. ಅದೂ ಕೂಡ ನಿರ್ಜನ ಪ್ರದೇಶದಲ್ಲಿ ವಾಹನವನ್ನು ಅಡ್ಡಹಾಕಿ ಕಾರು ಮಾಲಿಕರಿಂದ ಹಣವನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಈ ರೀತಿಯ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ ಯಾರೇ ಆದರೂ ರಾತ್ರಿ ಹೊತ್ತು ಪ್ರಯಾಣ ಮಾಡುವಾಗ ಅಪರಿಚಿತರು ಯಾರಾದರೂ ವಾಹನಕ್ಕೆ ಅಡ್ಡ ಹಾಕಿದರೆ ವಾಹನವನ್ನು ನಿಲ್ಲಿಸದೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.


Click it and Unblock the Notifications