Vande Bharat: 6 ಗಂಟೆ ತಡವಾಗಿ ಚಲಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್.. ಕಾರಣವೇನು?, ಪ್ರಯಾಣಿಕರ ಪರದಾಟ
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈ - ಸ್ವೀಡ್ ರೈಲಾಗಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕರಿಗೆ ವೇಗವಾಗಿ ಗಮ್ಯ ಸ್ಥಾನವನ್ನು ತಲುಪಿಸುವ ಮೂಲಕ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಸದ್ಯ, ಇದೇ ರೈಲು ತಡವಾಗಿ ಚಲಿಸಿದೆ ಎಂದು ವರದಿಯಾಗಿದೆ.
ಸಿಕಂದರಾಬಾದ್ (Secunderabad) - ತಿರುಪತಿ (Tirupati) ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೋಮವಾರ ಆರು ಗಂಟೆ ತಡವಾಗಿ ಚಲಿಸಿದ್ದು, ಸಿಕಂದರಾಬಾದ್ (ಹೈದರಾಬಾದ್) ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ತಾಂತ್ರಿಕ ಕಾರಣದಿಂದ ಬೆಳಗ್ಗೆ 6:15 ಕ್ಕೆ ಹೊರಡಬೇಕಿದ್ದ ಈ ರೈಲಿನ ಸಮಯವನ್ನು ಐದು ಬಾರಿ ಬದಲಾಯಿಸಲಾಯಿತು. ಕಡೆಗೆ 6 ಗಂಟೆ ವಿಳಂಬವಾಗಿ ತಿರುಪತಿಯತ್ತ ಪ್ರಯಾಣ ಶುರು ಮಾಡಿತು.

ದಕ್ಷಿಣ ಮಧ್ಯ ರೈಲ್ವೆ (South Central Railway) ಅಧಿಕಾರಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ವೊಂದರ ಸ್ಪ್ರಿಂಗ್ ಫಾಯಿಲ್‌ನಲ್ಲಿ ತಾಂತ್ರಿಕ ದೋಷದಿಂದ ರೈಲು ತಡವಾಗಿದೆ. ಬೇರೆ ರೈಲುಗಳಂತೆ ಇದರ ಕೋಚ್‌ಗಳನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ರಿಪೇರಿ ಮಾಡಲು ನಿಧಾನವಾಗಿದ್ದು, ರೈಲ್ವೆ ಸಿಬ್ಬಂದಿ ಹೆಚ್ಚಿನ ಸಮಯಾವಕಾಶವನ್ನು ತೆಗೆದುಕೊಂಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಾಹ್ನ 12:15 ಕ್ಕೆ ಪ್ರಯಾಣ ಆರಂಭಿಸಿದ ಕಾರಣ, ರಾತ್ರಿ 8 ಗಂಟೆ ಸುಮಾರಿಗೆ ತಿರುಪತಿಗೆ ಆಗಮಿಸಿದೆ. ಇಲ್ಲಿಂದ ಮಧ್ಯಾಹ್ನ 3:15 ಕ್ಕೆ ಹೊರಡುತ್ತಿದ್ದ ಅದೇ ರೈಲು ರಾತ್ರಿ 8:15 ಕ್ಕೆ ಸಿಕಂದರಾಬಾದ್ ರೈಲು ನಿಲ್ದಾಣದತ್ತ ಸಂಚಾರ ಆರಂಭಿಸಬೇಕಾಯಿತು. ಆದರೆ, ಪ್ರಯಾಣಿಕರ ಪಾಡು ಮಾತ್ರ ಹೇಳತೀರದು. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಗಂಟೆ ಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗಾಗಿ ಪ್ರಯಾಣಿಕರು ಕಾದು - ಕಾದು ಬೇಸತ್ತು ಹೋಗಿ, ರೈಲು
ಸಂಚಾರ ಆರಂಭಿಸುತ್ತದೆಯೋ, ಇಲ್ಲವೋ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ಸ್ಟೇಷನ್ ಮಾಸ್ಟರ್ ಕಚೇರಿಯೊಳಗೆ ನುಗ್ಗಿದರು. ರೈಲ್ವೇ ಪೊಲೀಸರು ಮಧ್ಯಪ್ರವೇಶಿಸಿ ಪ್ರಯಾಣಿಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ರೈಲಿನ ತಾಂತ್ರಿಕ ದೋಷ ಸರಿಯಾಗುವವರೆಗೂ ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ತಂಗುವ ವ್ಯವಸ್ಥೆಯನ್ನು ಮಾಡಲಾಗಿತ್ತು.
ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಹಲವರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಕೆಲವು ಪ್ರಯಾಣಿಕರು ತಮ್ಮ ಪೂಜಾ ಕಾರ್ಯಗಳಿಗೆ ನಿಗದಿಪಡಿಸುವ ಸಮಯವೂ ತಪ್ಪಿ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ವಯಸ್ಸಾದ ಪ್ರಯಾಣಿಕರು, ನಾವು ತಿಂಡಿ ತಿಂದ ನಂತರ ಔಷಧಿ ತೆಗೆದುಕೊಳ್ಳುತ್ತವೆ. ಅದು ಕೂಡ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಈ ರೈಲು ಚಲಿಸಲು ಪ್ರಾರಂಭಿಸಿದ ನಂತರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಯಾಣಿಕರಿಗೆ ಊಟದ ಸಮಯದಲ್ಲಿ ತಿಂಡಿಯನ್ನು ನೀಡಲಾಯಿತು. ಒಂದಷ್ಟು ಸಮಯ ರೈಲಿನ ಶೌಚಾಲಯದಲ್ಲಿ ಸರಿಯಾಗಿ ನೀರು ಸಹ ಬರಲಿಲ್ಲ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಯನ್ನು ಶುರು ಮಾಡಿತ್ತು. ಸದ್ಯ, 14 ಕೋಚ್‌ಗಳನ್ನು ಹೊಂದಿದ್ದು, 1,128 ಮಂದಿ ಪ್ರಯಾಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications