ವೈದ್ಯಕೀಯ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಸ್ಟಾರ್ಟ್ ಅಪ್ ಕಂಪನಿ
ಕರೋನಾ ವೈರಸ್ ಮಾನವ ಜನಾಂಗಕ್ಕೆ ದೊಡ್ಡ ಸವಾಲನ್ನು ಒಡ್ಡಿದೆ. ತಾವೇ ದೊಡ್ಡವರು ತಮಗಿಂತ ಯಾರೂ ಇಲ್ಲವೆಂದು ಇದ್ದವರಿಗೆಲ್ಲಾ ಕರೋನಾ ಸರಿಯಾದ ಪೆಟ್ಟು ನೀಡಿದೆ. ಈ ಮಾರಣಾಂತಿಕ ವೈರಸ್ ಗೆ ಯಾವುದೇ ಚಿಕಿತ್ಸೆ ಇಲ್ಲ. ಈ ರೋಗ ಹರಡದಂತೆ ತಡೆಯುವುದು ಮಾತ್ರವೇ ಇದಕ್ಕಿರುವ ಏಕೈಕ ಮದ್ದು.

ಪ್ರಪಂಚದ ಎಲ್ಲಾ ರಾಷ್ಟ್ರಗಳು ಕರೋನಾದ ವಿರುದ್ಧ ಯುದ್ದ ಸಾರಿವೆ. ಕರೋನಾವನ್ನು ನಿರ್ಮೂಲನೆ ಮಾಡಲು ಎಲ್ಲಾ ದೇಶಗಳು ಕೈಜೋಡಿಸಿವೆ. ಈ ಹಿಂದೆ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಹಂಚಿಕೆ ಮಾಡಿದ್ದ ದೇಶಗಳು, ಈಗ ವೈದ್ಯಕೀಯ ಹಾಗೂ ಆರೋಗ್ಯ ರಕ್ಷಣೆಗೆ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿವೆ.

ಇದೇ ವೇಳೆ ಕರೋನಾ ವಿರುದ್ಧದ ಹೋರಾಟಕ್ಕಾಗಿ ದೊಡ್ಡ ಮೊತ್ತವನ್ನು ನೀಡುತ್ತಿವೆ. ಒಟ್ಟಿನಲ್ಲಿ ಇಷ್ಟು ದಿನ ದುಡ್ಡು, ಅಧಿಕಾರದ ಹಿಂದೆ ಬಿದ್ದವರಿಗೆಲ್ಲಾ ಕರೋನಾ ವೈರಸ್ ದೊಡ್ಡ ಪಾಠವನ್ನು ಕಲಿಸಿದೆ. ಸದ್ಯಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ದೇವರ ಸಮಾನರಾಗಿದ್ದಾರೆ.

ಈ ಕಾರಣಕ್ಕೆ ವಿವಿಧ ಸರ್ಕಾರಗಳು ಹಾಗೂ ಎನ್ ಜಿಒಗಳು ವೈದ್ಯಕೀಯ ಸಿಬ್ಬಂದಿಗೆ ವಿವಿಧ ರೀತಿಯ ನೆರವು ನೀಡುತ್ತಿವೆ. ಈಗ ಸೆಲ್ಫ್-ಡ್ರೈವಿಂಗ್ ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ ರೆವ್, ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತ ಕಾರು ಸೇವೆ ನೀಡಲು ಮುಂದಾಗಿದೆ. ರೆವ್ ಕಂಪನಿಯು ಕಾರುಗಳನ್ನು ಬಾಡಿಗೆಗೆ ನೀಡುವ ಖಾಸಗಿ ಕಂಪನಿಯಾಗಿದೆ.

ಕರೋನಾದಿಂದಾಗಿ, ಭಾರತವು ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯ ಸೇವೆಗಳನ್ನು ನೀಡುತ್ತಿರುವವರು ಮನೆ ಹಾಗೂ ಆಸ್ಪತ್ರೆಗಳಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೆವ್ ಕಂಪನಿಯು ಆರೋಗ್ಯ ಸೇವೆಗಳನ್ನು ನೀಡುತ್ತಿರುವವರ ಸಹಾಯಕ್ಕಾಗಿ ಸಾವಿರಕ್ಕೂ ಹೆಚ್ಚು ಕಾರುಗಳನ್ನು ಒದಗಿಸುವುದಾಗಿ ತಿಳಿಸಿದೆ.

ದೇಶದ ಐದು ಪ್ರಮುಖ ನಗರಗಳಲ್ಲಿ ಈ ಸೌಲಭ್ಯವನ್ನು ನೀಡುವುದಾಗಿ ಹೇಳಿದೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ ಹಾಗೂ ಪುಣೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಕಾರು ಸೇವೆಯನ್ನು ನೀಡುವುದಾಗಿ ರೆವ್ ಕಂಪನಿಯು ತಿಳಿಸಿದೆ.

ಸದ್ಯಕ್ಕೆ ಒಂದು ಸಾವಿರ ಕಾರುಗಳನ್ನು ನೀಡಲಾಗುತ್ತಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಕಾರುಗಳನ್ನು ಒದಗಿಸಲಾಗುವುದೆಂದು ಕಂಪನಿ ತಿಳಿಸಿದೆ. ರೆವ್ ಕಂಪನಿಯಿಂದ ಈ ಸೇವೆಯನ್ನು ಸ್ವೀಕರಿಸಲು ಬಯಸುವ ಡಾಕ್ಟರ್ ಹಾಗೂ ಆರೋಗ್ಯ ಕಾರ್ಯಕರ್ತರು ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಮೊದಲು 9250035555 ನಂಬರಿಗೆ ಕಾಲ್ ಮಾಡಿ, ಕಾರ್ ಅನ್ನು ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ ರೆವ್ ಕಂಪನಿಯು ಕಾರುಗಳನ್ನು ಆರೋಗ್ಯ ಕಾರ್ಯಕರ್ತರ ಸೇವೆಗಾಗಿ ಉಚಿತವಾಗಿ ನೀಡಲಿದೆ.

ರೆವ್ ಕಂಪನಿಯು ತನ್ನ ಅಧಿಕೃತ ಸೈಟ್‌ನಲ್ಲಿ ವಿಶೇಷ ಪೇಜ್ ವೊಂದನ್ನು ರಚಿಸಿದೆ. ಆರೋಗ್ಯ ಕಾರ್ಯಕರ್ತರು ಈ ಪೇಜ್ ನಲ್ಲಿಯೂ ರಿಜಿಸ್ಟರ್ ಮಾಡುವ ಮೂಲಕ ಉಚಿತವಾಗಿ ಕಾರುಗಳನ್ನು ಪಡೆದು ಕೊಳ್ಳಬಹುದು.

ಕರೋನಾ ವೈರಸ್ ವಿರುದ್ಧ ಹಗಲು ಇರುಳು ಎನ್ನದೇ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ನಿಜವಾದ ಹೀರೋಗಳು. ಅವರಿಗೆ ಶತಕೋಟಿ ನಮನಗಳು.


Click it and Unblock the Notifications