ಇಕೊ-ಮ್ಯಾರಥಾನ್‌ನಲ್ಲಿ ಬೆಂಗ್ಳೂರು ವಿದ್ಯಾರ್ಥಿಗಳ ಮೈಲೇಜ್ ಚಾಲೆಂಜ್
ಮನಿಲಾದ ಫಿಲಿಫೈನ್ಸ್‌ನಲ್ಲಿ 2014ರ ಫೆಬ್ರುವರಿಯಲ್ಲಿ ನಡೆಯಲಿರುವ ಶೆಲ್ ಇಕೊ-ಮ್ಯಾರಥಾನ್ ಏಷ್ಯಾ ಸ್ಪರ್ಧೆಯಲ್ಲಿ ಬೆಂಗಳೂರು ಸೇರಿದಂತೆ ಭಾರತದ 15 ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳ 17 ತಂಡಗಳು ಭಾಗವಹಿಸುತ್ತಿದ್ದು, ಮನಿಲಾದ ಪ್ರಮುಖ ರಸ್ತೆಗಳಲ್ಲಿ ಇಂಧನ ಮಿತವ್ಯಯ ಸ್ಪರ್ಧೆಗೆ ಸಜ್ಜಾಗಿವೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇಂಧನ ಮಿತವ್ಯಯ ಸಾಬೀತು ಪಡಿಸಲು ದ್ವೀಪ ಸಮೂಹ ರಾಷ್ಟ್ರವಾದ ಮನಿಲಾದಲ್ಲಿ ನಡೆಯುತ್ತಿರುವ "ಮೈಲೇಜ್ ಕಾಂಪಿಟೇಷನ್'ನಲ್ಲಿ (ಇಂಧನ ಮಿತವ್ಯಯ ಸ್ಪರ್ಧೆಯಲ್ಲಿ) ಈ ವರ್ಷ ದಾಖಲೆ ಪ್ರಮಾಣದಲ್ಲಿ ತಂಡಗಳು ಭಾಗವಹಿಸಲಿವೆ. ಈ ಮೊದಲು ಮಲೇಷ್ಯಾದ ಕೌಲಾಲಂಪುರದಲ್ಲಿನ ಸೆಪಾಂಗ್ ಅಂತರರಾಷ್ಟ್ರೀಯ ಸರ್ಕೀಟ್‍ನಲ್ಲಿ ನಡೆದಿದ್ದ ಈ ಸ್ಪರ್ಧೆಯು ಈ ಬಾರಿ ಮನಿಲಾದ (ಫಿಲಿಪ್ಪೀನ್ಸ್) ಹೃದಯ ಭಾಗದಲ್ಲಿನ ಲುನೇಟಾ ಪಾರ್ಕ್‍ಗೆ ಸ್ಥಳಾಂತರಗೊಂಡಿದೆ.
- ಏಷ್ಯಾ ಮತ್ತು ಮಧ್ಯಪ್ರಾಚ್ಯದ ವಿದ್ಯಾರ್ಥಿಗಳ 140ಕ್ಕೂ ಅಧಿಕ ತಂಡಗಳು ಭಾಗಿ
- ಭಾರತದ್ದೇ ಇಡೀ ಸ್ಪರ್ಧೆಯಲ್ಲಿನ ತಂಡಗಳ ಎರಡನೇ ಅತಿದೊಡ್ಡ ಸಮೂಹವಾಗಿದೆ.
ಶೆಲ್ ಇಕೊ-ಮ್ಯಾರಥಾನ್ ಏಷ್ಯಾ ಸ್ಪರ್ಧೆಗೆ ತೆರಳುತ್ತಿರುವ ಸ್ಪರ್ಧಿಗಳಿಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಾಂಕೇತಿಕ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಭಾರತದಲ್ಲಿನ ಶೆಲ್ ಕಂಪೆನಿಗಳ ಅಧ್ಯಕ್ಷರಾದ ಡಾ. ಯಾಸ್ಮಿನ್ ಹಿಲ್ಟನ್ ಅವರು, ವಿಶ್ವದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಧನಗಳ ಬೇಡಿಕೆಗೆ ತಕ್ಕಂತೆ ಸೂಕ್ತ ರೀತಿಯಲ್ಲಿ ನೆರವಾಗಬೇಕೆಂದು ಬಯಸಿರುವ ಶೆಲ್ ಕಂಪೆನಿಯು ವಿಶ್ವದೆಲ್ಲೆಡೆಯ ಅರ್ಹ ಫಲಾನುಭವಿಗಳಿಗೆ ಜವಾಬ್ದಾರಿಯುತವಾಗಿ ನೆರವಾಗಲು ಸದಾ ಬದ್ಧವಾಗಿದೆ. ಶೆಲ್ ಇಕೊ ಮ್ಯಾರಥಾನ್ ಸ್ಪರ್ಧೆ ಮೂಲಕ ಪ್ರಸಕ್ತ ಸಂದರ್ಭದ ಹಾಗೂ ಭವಿಷ್ಯದ ನಾಯಕರನ್ನು ಜಾಗತಿಕ ಮಟ್ಟದ ಒಂದೇ ವೇದಿಕೆಗೆ ಕರೆತರಲು ಶೆಲ್ ಕಂಪೆನಿ ಉತ್ಸುಕವಾಗಿದೆ. ಮುಖ್ಯವಾಗಿ ವಿಶ್ವಕ್ಕೆ ಸದ್ಯ ಎದುರಾಗಿರುವ ಇಂಧನ ಲಭ್ಯತೆಯ ಸವಾಲಿಗೆ ಸುಸ್ಥಿರವಾದ ಪರಿಹಾರವನ್ನು ಕಂಡುಕೊಳ್ಳಲು ಈ ಮಾರ್ಗದಲ್ಲಿ ನೆರವಾಗಲು ಮುಂದಾಗಿದೆ ಎಂದು ಹೇಳಿದರು.

ಮನಿಲಾದಲ್ಲಿ ಈ ವರ್ಷ ನಡೆಯುತ್ತಿರುವ ಮೈಲೇಜ್ ಚಾಲೆಂಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ತಂಡಗಳು 14 ಪ್ರಾಯೋಗಿಕ ಮಾದರಿ ವಾಹನಗಳನ್ನೂ ಮತ್ತು ಗ್ಯಾಸೊಲಿನ್ (ಪೆಟ್ರೋಲ್), ಡೀಸೆಲ್ ಮತ್ತು ಜಲಜನಕದಿಂದ ಶಕ್ತಿ ಪಡೆದುಕೊಂಡು ಚಲಿಸುವಂತಹ ನಗರ ಸಂಚಾರ ಯೋಗ್ಯವಾದ ಮೂರು ವಾಹನಗಳ ಮಾದರಿಗಳನ್ನೂ ಪ್ರದರ್ಶಿಸಲಿವೆ.

ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ತಂಡದ ನಾಯಕರಾದ ಅಮಿತ್ ಜುಂಜುನ್‍ವಾಲಾ ಹೇಳುವ ಪ್ರಕಾರ, "ನಮ್ಮ ಟೀಮ್ ಫ್ಯೂಚರಾಮಿಕ್ ಮನಿಲಾದಲ್ಲಿ ನಡೆಯುತ್ತಿರುವ ಶೆಲ್ ಇಕೊ-ಮ್ಯಾರಥಾನ್ ಏಷ್ಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಬಹಳ ಉತ್ಸುಕವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ನಮಗಂತೂ ಬಹಳ ಖುಷಿಯಾಗಿದೆ, ಜಾಗತಿಕ ಮಟ್ಟದ ಸ್ಪರ್ಧೆಯ ಸವಾಲುಗಳನ್ನು ನೆನಪಿಸಿಕೊಂಡಗಾಲೇ ರೋಮಾಂಚನವಾಗುತ್ತದೆ. ಇಂತಹ ವಿಶ್ವ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತವನ್ನು ಮತ್ತು ನಮ್ಮ ಕಾಲೇಜನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯೂ ಆಗುತ್ತಿದೆ' ಎಂದಿದ್ದಾರೆ. ಅಮಿತ್ ನೇತೃತ್ವದ 'ಟೀಮ್ ಫ್ಯೂಚರಾಮಿಕ್' ತಂಡ, ಮನಿಲಾದಲ್ಲಿನ ಸ್ಪರ್ಧೆಯಲ್ಲಿ ಗ್ಯಾಸೊಲಿನ್ ಇಂಧನದಿಂದ ಚಲಿಸುವಂತಹ ಅರ್ಬನ್ ಕಾನ್ಸೆಪ್ಟ್ ವಾಹನವನ್ನು ಪ್ರಸ್ತುತ ಪಡಿಸಲಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ತಂಡದ ನಾಯಕ ಜಯ್‍ಘೋಷ್ ಎಸ್.ರಾವ್, "ಮನಿಲಾದಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ತಂಡ ಅಭಿವೃದ್ಧಿ ಪಡಿಸಿದ ಮಾದರಿಯನ್ನು ಸವಾಲಿಗೊಡ್ಡಲು ನಾವಂತೂ ಬಹಳ ಕಾತುರದಿಂದ ಇದ್ದೇವೆ. ಅಷ್ಟೇ ಅಲ್ಲ, ಈ ಸ್ಪರ್ಧೆಯಲ್ಲಿ ನಮ್ಮ ತಂಡ ಗೆದ್ದೇ ಗೆಲ್ಲುವ ವಿಶ್ವಾಸವನ್ನೂ ಹೊಂದಿದೆ. ನಮ್ಮಲ್ಲಿನ ಪ್ರತಿಭೆ, ಸೃಜನಶೀಲತೆ ಮತ್ತು ನಾವೀನ್ಯತೆಯ ಆವಿಷ್ಕಾರವನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ಶೆಲ್ ಕಂಪೆನಿ ಈ ಸ್ಪರ್ಧೆಯ ಮೂಲಕ ಉತ್ತಮ ಅವಕಾಶ ಒದಗಿಸಿದೆ. ನಮ್ಮ ಇಂಧನ ಮಿತವ್ಯಯ ವಾಹನದಮಾದರಿಯನ್ನು ಮನಿಲಾದಲ್ಲಿನ ಸ್ಪರ್ಧೆಯಲ್ಲಿ ಪ್ರಸ್ತುತ ಪಡಿಸಲು ನಮ್ಮ ತಂಡ ಬಹಳ ಉತ್ಸುಕವಾಗಿದೆ ಎಂದು ಹೇಳಿದರು.

ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಜಯ್‍ಘೋಷ್ ಎಸ್.ರಾವ್ ನಾಯಕತ್ವದ ವಿದ್ಯಾರ್ಥಿಗಳ "ಪ್ರಾಜೆಕ್ಟ್ ಗರುಡ' ತಂಡ ಬ್ಯಾಟರಿ ಎಲೆಕ್ಟ್ರಿಕ್ ಮಾದರಿ ವಾಹನವನ್ನು ಮನಿಲಾದಲ್ಲಿನ ಸ್ಪರ್ಧೆಗಾಗಿ ವಿನ್ಯಾಸಗೊಳಿಸಿದೆ. ವೆಲ್ಲೂರಿನ ವಿಐಟಿ ವಿಶ್ವವಿದ್ಯಾಲಯ, ಚೆನ್ನೈನ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚೆನ್ನೈನ ಎಸ್‍ಆರ್‍ಎಂ ವಿಶ್ವವಿದ್ಯಾಲಯ, ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೈದರಾಬಾದ್‍ನ ಭಾಸ್ಕರ್ ಎಂಜಿನಿಯರಿಂಗ್ ಕಾಲೇಜು, ಕಾಲೇಜ್ ಆಫ್ ಎಂಜಿಯರಿಂಗ್ ಭುವನೇಶ್ವರ, ಮುಂಬೈನ ಕೆ.ಜೆ.ಸೋಮಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್, ನವದೆಹಲಿಯ ಡೆಲ್ಲಿ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ, ಇಂದಿರಾ ಗಾಂದಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗ್ರೇಟರ್ ನೊಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯ, ಫರಿದಾಬಾದ್‍ನ ಮಾನವ್ ರಚನಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ. ಪಾಘ್ವಾರಾದ (ಪಂಜಾಬ್) ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ, ಜಲಂದರ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜಪುರದ ಚಿತ್ಕಾರಾ ಇನ್‍ಸ್ಟಿಟ್ಯೂಟ್ ಆಫ್ ಎಂಜಿನಿರಿಂಗ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡಗಳು ಸೇರಿದಂತೆ ಒಟ್ಟು 17 ತಂಡಗಳು ಮನಿಲಾದಲ್ಲಿ ಶೆಲ್‍ನ ಮೈಲೇಜ್ ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

ಶೆಲ್ ಇಕೊ-ಮ್ಯಾರಥಾನ್
ಶೆಲ್ ಎಕೊ-ಮ್ಯಾರಥಾನ್ ಸ್ಪರ್ಧೆಯು ಮೊದಲಿಗೆ 1939ರಲ್ಲಿ ಅಮೆರಿಕದಲ್ಲಿನ ಶೆಲ್ ಸಂಶೋಧನಾ ಪ್ರಯೋಗಾಲಯದಲ್ಲಿ ಆರಂಭಗೊಂಡಿತು. ಇದರಲ್ಲಿ ಪ್ರತಿ ಗ್ಯಾಲನ್ ಗ್ಯಾಸೊಲಿನ್‍ಗೆ ಎಷ್ಟು ಕಿ.ಮೀ.ವರೆಗೆ ವಾಹನ ಚಲಿಸಬಲ್ಲದು ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಯತ್ನಿಸಿದರು. ಆ ಮೊಟ್ಟ ಮೊದಲ ಸ್ಪರ್ಧೆಯಲ್ಲಿ ವಿಜೇತವಾದ ವಾಹನ 50 ಎಂಪಿಜಿ(ಗ್ಯಾಲನ್) ಅಥವಾ ಲೀಟರ್‍ಗೆ 21 ಕಿ.ಮೀ. ಚಲಿಸಿ ದಾಖಲೆ ನಿರ್ಮಿಸಿತು. ಆ ನಂತರದಲ್ಲಿ ಸ್ಪರ್ಧೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲಾಯಿತು ಹಾಗೂ ಬಹಳ ವ್ಯವಸ್ಥಿತವಾಗಿ ನಡೆಯುವಂತೆಯೂ ಮಾಡಲಾಯಿತು.

1985ರಲ್ಲಿ ಫ್ರಾನ್ಸ್‌ನಲ್ಲಿ ಶೆಲ್ ಇಕೊ-ಮ್ಯಾರಥಾನ್ ಮೊದಲಿಗೆ ಆರಂಭಗೊಂಡಿತು. 2007ರ ಏಪ್ರಿಲ್‍ನಲ್ಲಿ ಅಮೆರಿಕದಲ್ಲಿ ಶೆಲ್ ಇಕೊ-ಮ್ಯಾರಥಾನ್ ಸ್ಪರ್ಧೆಯು ಜರುಗಿತು. 2010ರಲ್ಲಿ ಶೆಲ್ ಇಕೊ-ಮ್ಯಾರಥಾನ್ ಶೆಲ್ ಸ್ಪರ್ಧೆಯು ಮಲೇಷ್ಯಾದಲ್ಲಿ ಮೊದಲಿಗೆ ಆರಂಭಗೊಂಡಿತು. 2013ರವರೆಗೂ ಮಲೇಷ್ಯಾ ದೇಶವೇ ಈ ಶೆಲ್ ಇಕೊ-ಮ್ಯಾರಥಾನ್ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿತು. 2014ರ ಶೆಲ್ ಎಕೊ-ಮ್ಯಾರಥಾನ್ ಸ್ಪರ್ಧೆಯು ಮನಿಲಾ, ಫಿಲಿಫೈನ್ಸ್‌ನಲ್ಲಿ ಆರಂಭಗೊಳ್ಳಲಿದೆ. ಅಲ್ಲದೆ, ಇಲ್ಲಿಯೇ 2016ರವರೆಗೂ ಶೆಲ್ ಇಕೊ-ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.

ವಿಶ್ವದ ವಿವಿಧೆಡೆಯ ಶೆಲ್ ಎಕೊ-ಮ್ಯಾರಥಾನ್ ಸ್ಪರ್ಧೆ ಕುರಿತು ಹಾಗೂ ಅಧಿಕೃತ ನಿಯಮಗಳು, ನೋಂದಣಿಗೆ ಸೂಚನೆಗಳು, ಬಹುಮಾನಗಳ ಕುರಿತ ಹೆಚ್ಚಿನ ಮಾಹಿತಿಗೆ www.shell.com/ecomararathon ವೆಬ್‍ಸೈಟ್ ಪರಿಶೀಲಿಸಿ.


Click it and Unblock the Notifications








