ಶಿವಮೊಗ್ಗದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಮಾನದಲ್ಲೇ ಹೋಗಬಹುದು: ಟಿಕೆಟ್ ದರ ಭಾರೀ ಕಡಿಮೆ!
ಮಲೆನಾಡಿನ ಜನರಿಗೆ ಸಿಹಿಸುದ್ದಿ ದೊರೆತಿದೆ. ಶಿವಮೊಗ್ಗದ ವಿಮಾನ ನಿಲ್ದಾಣ (Shivamogga Airport)ದಿಂದ ಬೆಂಗಳೂರಿಗೆ ಮಾತ್ರ ವಿಮಾನ ಸೇವೆಯಿತ್ತು. ಅದು ಮತ್ತೆ ಮೂರು ಮಾರ್ಗಕ್ಕೆ ವಿಸ್ತರಣೆಯಾಗುತ್ತಿದೆ. ಇನ್ಮುಂದೆ, ಈ ಭಾಗದ ಜನರು ಕಡಿಮೆ ಖರ್ಚಿನಲ್ಲಿ ವಿಮಾನದಲ್ಲಿಯೇ ಹಲವು ಪ್ರವಾಸಿ ತಾಣಗಳಿಗೆ ಹೋಗಬಹುದು.
ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು, 'ಮಲೆನಾಡಿಗರಿಗೆ ಸಿಹಿಸುದ್ದಿ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದಲೇ ನೀವು ನೇರವಾಗಿ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ತೆರಳಬಹುದು. ನವೆಂಬರ್ 21 ರಿಂದ ಈ ಮೂರು ಸ್ಥಳಗಳಿಗೆ ವಿಮಾನ ಸಂಚಾರ ಆರಂಭಿಸುವುದಾಗಿ ಸ್ಟಾರ್ ಏರ್ ಲೈನ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ' ಎಂದು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆಯೂ ಟ್ವೀಟ್ ಮಾಡಿದ್ದ ಅವರು, 'ಡಿಸೆಂಬರ್ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣವು ತನ್ನ ಕಾರ್ಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ರಾತ್ರಿ ವೇಳೆಯೂ ಇಲ್ಲಿಂದ ವಿಮಾನಗಳು ಹಾರಾಟ ನಡೆಸಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ನೈಟ್ ಲ್ಯಾಂಡಿಂಗ್ ನಡೆಸಲು 2ನೇ ಹಂತದ ಒಪ್ಪಿಗೆಯೂ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ' ಎಂದು ತಿಳಿಸಿದ್ದರು.
ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ವಿಮಾನಯಾನ ಸೇವೆ ಆರಂಭವಾಗುವುದರಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಕೆಎಸ್‌ಆರ್‌ಟಿಸಿ ಪ್ರೀಮಿಯಂ ಬಸ್ ಸೇವೆಗೆ ಹೋಲಿಸಿದರೆ, ವಿಮಾನ ಟಿಕೆಟ್ ದರ ಕೊಂಚ ದುಬಾರಿಯಾಗಿದೆ. ಶಿವಮೊಗ್ಗದಿಂದ ತಿರುಪತಿಗೆ ಐರಾವತ ಬಸ್ ನಲ್ಲಿ ರೂ.1,438 ದರವಿದ್ದು, ಸ್ಟಾರ್ ಏರ್ ಲೈನ್ಸ್ ಟಿಕೆಟ್ ದರಗಳು ರೂ.1999 ರಿಂದ ಆರಂಭವಾಗಲಿವೆ.

ಸದ್ಯ, ಶಿವಮೊಗ್ಗ - ಬೆಂಗಳೂರು ಕಾರ್ಯಚರಣೆ ನಡುವೆ ಇಂಡಿಗೋ ವಿಮಾನ ಪ್ರತಿದಿನ, ಬೆಳಗ್ಗೆ 9.05ಕ್ಕೆ ಬೆಂಗಳೂರಿನಿಂದ ಪ್ರಯಾಣವನ್ನು ಪ್ರಾರಂಭಿಸಲಿದ್ದು, 11.05ಕ್ಕೆ ಶಿವಮೊಗ್ಗ ತಲುಪಲಿದೆ. ಇಲ್ಲಿಂದ ಬೆಂಗಳೂರಿಗೆ ಪುನಃ 11.25ಕ್ಕೆ ತನ್ನ ಹಾರಾಟವನ್ನು ಶುರುಮಾಡಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಒಂದಷ್ಟು ಪ್ರಮುಖ ಮಾಹಿತಿಯನ್ನು ತಿಳಿಯುವುದಾದರೆ, ಈ ಏರ್‌ಪೋರ್ಟ್ ಸೋಗಾನೆ ಸಮೀಪದ ನಿರ್ಮಿಸಲಾಗಿದೆ.
ಸೋಗಾನೆ, ಶಿವಮೊಗ್ಗ ನಗರದಿಂದ 8.8 ಕಿಲೋಮೀಟರ್ ಹಾಗೂ ಭದ್ರಾವತಿಯಿಂದ 8.2 ಕಿಲೋಮೀಟರ್ ದೂರದಲ್ಲಿದೆ. ಈ ವಿಮಾನ ನಿಲ್ದಾಣದಲ್ಲಿ ಇಲ್ಲಿನ ಸಿಬ್ಬಂದಿ, ಗಂಟೆಗೆ ಬರೋಬ್ಬರಿ 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ. ಈ ಏರ್‌ಪೋರ್ಟ್‌ನಿಂದ ಪ್ರವಾಸೋದ್ಯಮ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ.
ಕೇಂದ್ರ ಸರ್ಕಾರ ಉಡಾನ್ ಯೋಜನೆ ಅಡಿ 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ಖರ್ಚು ಮಾಡಿ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದೆ. ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಂತರ, ರಾಜ್ಯದ ಅತಿ ಉದ್ದದ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೋಯಿಂಗ್ 737 ಮತ್ತು ಏರ್‌ಬಸ್ A320 ನಂತಹ ದೊಡ್ಡ ವಿಮಾನಗಳನ್ನು ಲ್ಯಾಂಡ್ ಮಾಡಬಹುದು.
ಇನ್ನು, ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ನೇರ ವಿಮಾನ ಸೇವೆ ಪ್ರಾರಂಭವಾಗುತ್ತಿರುವುದು ಮಲೆನಾಡಿಗರಿಗೆ ಸಖತ್ ಖುಷಿ ನೀಡಿದೆ. ಕಡಿಮೆ ಖರ್ಚಿನಲ್ಲಿ ಪ್ರವಾಸಿ ಸ್ಥಳಗಳಿಗೆ ಆರಾಮದಾಯವಾಗಿ ಪ್ರಯಾಣಿಸಬಹುದಾಗಿದ್ದು, ಜನರಿಗೆ ಹೆಚ್ಚು ಸಮಯಾವಕಾಶ ಉಳಿಕೆಯಾಗಲಿದೆ. ನವೆಂಬರ್ 21 ರಿಂದ ಕಾರ್ಯಚರಣೆ ಪ್ರಾರಂಭವಾಗಲಿದ್ದು, ಈಗಲೇ ಟಿಕೆಟ್ ಬುಕ್ ಮಾಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications