ಅಪ್ರಾಪ್ತ ಮಗನಿಗೆ ಸ್ಕೂಟರ್ ಕೊಟ್ಟಿದ್ದ ಅಮ್ಮನಿಗೆ ರೂ.30 ಸಾವಿರ ದಂಡ!
ಅಪ್ರಾಪ್ತರಿಂದ ಬೈಕ್ ಚಲಾಯಿಸುವುದು ಮೊದಲಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕೆ ತುರ್ತು ಕಡಿವಾಣ ಹಾಕುವಂತೆ ಜನಾಗ್ರಹ ವ್ಯಕ್ತವಾಗಿದೆ. ಮೋಟಾರು ವಾಹನ ಕಾಯ್ದೆ ನಿಯಮಗಳ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯೋಮಾನದವರು ದ್ವಿ ಚಕ್ರ ವಾಹನ ಚಾಲನೆ ಮಾಡುವಂತಿಲ್ಲ.
ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದ ತಾಯಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂಪಾಯಿ ದಂಡ ವಿಧಿಸಿದೆ. 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಕಳೆದ ಜನವರಿ 30ರಂದು ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿಎಸ್ ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದರು.

ಈ ವೇಳೆ 17 ವರ್ಷದ ಹುಡುಗನೊಬ್ಬ ಪರವಾನಿಗೆ ಇಲ್ಲದೆ ಸ್ಕೂಟರ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಇದನ್ನು ನೋಡಿ ಪಿಎಸ್ ಐ ನವೀನ್ ಕುಮಾರ್ ಅವರು ವಿಚಾರಣೆ ಮಾಡಿದ ನಂತರ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.
ಆರೋಪ ಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ಸ್ಕೂಟರ್ ಮಾಲೀಕರಾದ ಅಪ್ರಾಪ್ತ ವಯಸ್ಸಿನ ಹುಡುಗನ ತಾಯಿಗೆ 30 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಕಳೆದ ವರ್ಷವು ಇದೇ ರೀತಿಯ ಘಟನೆ ಶಿವಮೊಗ್ಗದಲ್ಲಿ ಮಾರುತಿ ಒಮ್ನಿ (Maruti Omni) ಕಾರನ್ನು ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಇಲ್ಲದೇ ಓಡಿಸಿದ್ದಕ್ಕಾಗಿ ಬಾಲಕನ ತಂದೆಗೆ ಶಿವಮೊಗ್ಗದ (Shivamogga) 3ನೇ ಎಸಿಜೆ ಹಾಗೂ ಜೆಎಂಎಫ್ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿತು.

ಕಳೆದ ಸೆ.9 ರಂದು ಶಿವಮೊಗ್ಗ ನಗರದಲ್ಲಿ ಮಾರುತಿ ಒಮ್ನಿಯನ್ನು ಇಲಿಯಾಸ್ ಎಂಬುವವರ 17 ವರ್ಷದ ಮಗ ಓಡಿಸಿದ್ದಾನೆ. ಕರ್ನಾಟಕ ಸಂಘದ ಸಮೀಪದ ಬಿಎಚ್ ರಸ್ತೆಯಲ್ಲಿ ಪೊಲೀಸರು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಆಗ, ಬಾಲಕ ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೇ ಒಮ್ಮಿ ಕಾರನ್ನು ಚಲಾಯಿಸಿದ. ಈ ಹಿನ್ನೆಲೆ, ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಡ್ರೈವಿಂಗ್ ಮಾಡಲು ಅರ್ಹತೆ ಇಲ್ಲದಿದ್ದರೂ ಮಗನಿಗೆ ಮಾರುತಿ ಒಮ್ನಿ ನೀಡಿದ್ದ ತಂದೆ ಇಲಿಯಾಸ್ ವಿರುದ್ಧ ಪೊಲೀಸರು, ಶಿವಮೊಗ್ಗ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು, ದಂಡ ವಿಧಿಸಿದ್ದಾರೆ. ಚಿಕ್ಕಮಗಳೂರಿನ ಎನ್.ಆರ್.ಪುರದ ನಿವಾಸಿ ಇಲಿಯಾಸ್ ದಂಡ ಕಟ್ಟಿದ ವ್ಯಕ್ತಿಯಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಮೇ.25 ರಂದು ಕ್ಯಾಂಟರ್, ಆಟೋ ನಡುವೆ ಅಪಘಾತವಾಗಿತ್ತು.
ಈ ಕೇಸ್, ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆಯಲ್ಲಿ ಆಟೋವನ್ನು ಬಾಲಕ ಓಡಿಸುತ್ತಿದ್ದ ಎಂಬುದು ದೃಢವಾಗಿತ್ತು. ಪೊಲೀಸರು, ಆಟೋ ಮಾಲೀಕ ಸತೀಶ್ ವಿರುದ್ಧ ನ್ಯಾಯಾಲಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ, ಆರೋಪ ದೃಢವಾಗಿದ್ದು, ಶಿವಮೊಗ್ಗ ಕೋರ್ಟ್, ಆಟೋ ಮಾಲೀಕನಿಗೆ 25,000 ರೂಪಾಯಿ ದಂಡ ವಿಧಿಸಿದೆ. ಎಮಿಷನ್ ಟೆಸ್ಟ್ ಮಾಡಿಸದಿರುವುದಕ್ಕೆ 1000 ರೂಪಾಯಿ ಹೆಚ್ಚುವರಿಯಾಗಿ ಸೇರಿದೆ.
ಇನ್ನು ಕಳೆದ ವರ್ಷವು ಇದೇ ರೀತಿಯ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ (Thirthahalli) ವರದಿಯಾಗಿತ್ತು. ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಕೊಟ್ಟ ತಂದೆಗೆ ನ್ಯಾಯಾಲಯ 25,000 ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿತ್ತು. ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕನೊಬ್ಬ ಹೆಲ್ಮೆಟ್ ಧರಿಸದೇ, ಬೈಕ್ ಚಾಲನೆ ಮಾಡುತ್ತಿದ್ದಾಗ ಪೊಲೀಸರು, ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ವಾಹನ ಚಲಾವಣೆ ಮಾಡಿದ್ದು ಗೊತ್ತಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.
Note: Images are representative purpose only.


Click it and Unblock the Notifications