ಸಿಗಂದೂರು ಚೌಡೇಶ್ವರಿ ಭಕ್ತರಿಗೆ ಸಿಹಿಸುದ್ದಿ: ಅತಿ ಶೀಘ್ರದಲ್ಲೇ ಕೇಬಲ್ ಸೇತುವೆ ಉದ್ಘಾಟನೆ, ವಿಶೇಷತೆಗಳೇನು?
ಶಿವಮೊಗ್ಗ (Shivamogga) ಜಿಲ್ಲೆಯ ಜನರ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. ಸಾಗರದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ (Karnataka's Longest Cable Bridge), ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಆ ಬಳಿಕ ವಾಹನ ಸಂಚಾರಕ್ಕೂ ಮುಕ್ತಾಯವಾಗಲಿದೆ. ನೂತನ ಸೇತುವೆಯಿಂದ ಸ್ಥಳೀಯರು ಮಾತ್ರವಲ್ಲದೆ, ಸಿಗಂದೂರು ಚೌಡೇಶ್ವರಿ (Sigandur Chowdeshwari) ದೇವಸ್ಥಾನಕ್ಕೆ ತೆರಳುವ ಭಕ್ತರಿಗೂ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ಬನ್ನಿ, ಈ ಸೇತುವೆ ಕುರಿತ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.
ಲೋಕಾರ್ಪಣೆ ಯಾವಾಗ?
ಎಲ್ಲವು ಅಂದುಕೊಂಡಂತೆ ನಡೆದರೆ, ಸಿಗಂದೂರು ಸೇತುವೆಯು ಇದೇ ಜೂನ್ ಅಂತ್ಯದೊಳಗೆ ಉದ್ಘಾಟನೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸೇತುವೆ ಲೋಕಾರ್ಪಣೆಗೊಳಿಸಲು ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಅವರು, ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಿದ್ದಾರೆ.

ಲೋಡ್ ಟೆಸ್ಟ್ ಯಶಸ್ವಿ:
ಇತ್ತೀಚೆಗೆ, ಎರಡು ದಿನಗಳ ಕಾಲ 18 ಟಿಪ್ಪರ್‌ಗಳನ್ನು ಬಳಸಿ, ಈ ಸೇತುವೆ ಮೇಲೆ ಲೋಡ್ ಟೆಸ್ಟ್ ನಡೆಸಲಾಯಿತು. ಅಲ್ಲಿ ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ. ಮೊದಲಿಗೆ 50 ಟನ್, ನಂತರದಲ್ಲಿ 75 ಹಾಗೂ 100 ಟನ್ ಲೋಡ್‌ನ ಟಿಪ್ಪರ್‌ಗಳನ್ನು 24 ಗಂಟೆಗಳ ಕಾಲ ಸೇತುವೆ ಮೇಲೆ ನಿಲ್ಲಿಸಲಾಯಿತು.
ಶಿವಮೊಗ್ಗ ಮಾತ್ರವಲ್ಲದೆ ಹೊರ ಜಿಲ್ಲೆಯವರಿಗೂ ಅನುಕೂಲ:
ನೂತನ ಕೇಬಲ್ ಸೇತುವೆಯಿಂದ ಶಿವಮೊಗ್ಗ ಜಿಲ್ಲೆಯ ಜನರು ಮಾತ್ರ ಪ್ರಯೋಜನವನ್ನು ಪಡೆದುಕೊಳ್ಳುವುದಿಲ್ಲ. ಹೊರ ಜಿಲ್ಲೆ ಮತ್ತು ಬೇರೆ ರಾಜ್ಯಗಳ ಪ್ರವಾಸಿಗರಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಸಾಗರ ಪಟ್ಟಣದಿಂದ ಸಿಗಂದೂರು ಅಥವಾ ತುಮರಿಗೆ ಹೋಗಲು ರಸ್ತೆ ಮಾರ್ಗವಾಗಿ 80 ಕಿ.ಮೀ ಕ್ರಮಿಸಬೇಕು. ಆದರೆ, ಹೊಸ ಸೇತುವೆಯು ಆ ದೂರ ಅರ್ಧದಷ್ಟು ಕಡಿಮೆ ಮಾಡಲಿದೆ.

ಸಿಗಂದೂರು ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದ್ದು, ಚೌಡೇಶ್ವರಿ ಅಮ್ಮನ ದೇಗುಲವಿದೆ. ಸಾಗರದಿಂದ ಸಿಗಂದೂರು ಸುಮಾರು 40 ಕಿ.ಮೀ ದೂರದಲ್ಲಿದ್ದು, ಮಾರ್ಗ ಮಧ್ಯೆ ಶರಾವತಿಯ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಲಾಂಚ್ ಮೂಲಕ ಪ್ರಯಾಣಿಸಿ, ಸಿಗಂದೂರನ್ನು ತಲುಪಬೇಕು. ಬೆಳ್ಳಗೆ ಆರಂಭವಾಗುವ ಲಾಂಚ್ ಸೇವೆಯನ್ನು ಸಂಜೆ 6:30ಕ್ಕೆ ಸ್ಥಗಿತಗೊಳ್ಳುತ್ತದೆ. ನೂತನ ಸೇತುವೆಯಿಂದ ಯಾತ್ರಿಕರೊಂದಿಗೆ ಇಲ್ಲಿನ 5,000ಕ್ಕೂ ಅಧಿಕ ಕುಟುಂಬಗಳಿಗೂ ಪ್ರಯೋಜನವಾಗಲಿದೆ.
ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆಯು ಹೌದು:
ಈ ಸಿಗಂದೂರು ಸೇತುವೆಯು ಉದ್ಘಾಟನೆಗೊಂಡ ಬಳಿಕ, ಭಾರತದ 2ನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹಿರಿಮೆಗೂ ಪಾತ್ರವಾಗಲಿದೆ. ಇದು 2.44 ಕಿ.ಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. 17 - ಪಿಲ್ಲರ್‌ಗಳನ್ನು ಒಳಗೊಂಡಿದೆ. 2018ರ ಫೆಬ್ರವರಿಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ರೂ.423 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಸದ್ಯ, ಸಿಗಂದೂರು ಸೇತುವೆಯ ಶೇಕಡ 99% ಹೆಚ್ಚು ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದ ಬಣ್ಣ ಬಳಿಯುವ ಕೆಲಸಗಳು ನಡೆಸುತ್ತಿವೆ. ಈ ಕೇಬಲ್ ಸೇತುವೆ ನಿರ್ಮಿಸಿದ ಕಂಪನಿಯೇ ಲೋಕಾರ್ಪಣೆಗೊಂಡ 10 - ವರ್ಷಗಳ ಕಾಲ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.
ಒಟ್ಟಾರೆಯಾಗಿ, ಹೊಸ ಸಿಗಂದೂರು ಸೇತುವೆಯಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶರಾವತಿಯ ಹಿನ್ನೀರಿನ ಪ್ರದೇಶದ ಹಲವು ಹಳ್ಳಿಗಳಲ್ಲಿ ವ್ಯಾಪಾರ - ವಹಿವಾಟು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಪ್ರಗತಿಯೂ ಆಗಲಿದೆ. ಜೊತೆಗೆ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಭಕ್ತರು ಸಹ ಸುಲಭವಾಗಿ ದೇವಸ್ಥಾನವನ್ನು ತಲುಪಬಹುದು.


Click it and Unblock the Notifications








