ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಗುಡ್‌ನ್ಯೂಸ್: ಕೆಲವೇ ತಿಂಗಳಲ್ಲಿ ಕೇಬಲ್ ಸೇತುವೆ ಸಿದ್ದ!
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವವರಿಗೆ ಇಲ್ಲಿದೆ ಸಿಹಿಸುದ್ದಿ. ಮುಂಬರುವ ಕೆಲವೇ ತಿಂಗಳಲ್ಲಿ ಶಿವಮೊಗ್ಗದ (Shivamogga) ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ (Karnataka Longest Cable Bridge) ಲೋಕಾರ್ಪಣೆಗೊಳ್ಳಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಅವರು, 'ಸಿಗಂದೂರು ಚೌಡೇಶ್ವರಿ (Sigandur Chowdeshwari) ಅಮ್ಮನವರ ಸನ್ನಿಧಾನಕ್ಕೆ ಹೋಗಿಬರಲು ಅಸಂಖ್ಯಾತ ಭಕ್ತರಿಗೆ ನೆರವಾಗಲಿರುವ ಕೇಬಲ್ ಸೇತುವೆ' ಎಂಬ ಶೀರ್ಷೆಕೆಯಡಿ ವಿಡಿಯೋವೊಂದನ್ನು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸೇತುವೆಯ ಕಾಮಗಾರಿಯ ಪ್ರಗತಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಗಿದೆ.

ಶರಾವತಿ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಈ ಕೇಬಲ್ ಸೇತುವೆಯಿಂದ ಶಿವಮೊಗ್ಗ ಜಿಲ್ಲೆಯ ಜನರು ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಸಾಗರದಿಂದ ಸಿಗಂದೂರು ಅಥವಾ ತುಮರಿಗೆ ತೆರಳಲು ರಸ್ತೆ ಮಾರ್ಗವಾಗಿ 80 ಕಿಲೋಮೀಟರ್ ಕ್ರಮಿಸಬೇಕು. ಸೇತುವೆ ನಿರ್ಮಾಣದಿಂದ ಆ ದೂರ ಅರ್ಧದಷ್ಟು ಕಡಿಮೆಯಾಗಲಿದೆ. ಸದ್ಯ, ಸೇತುವೆಯಿಲ್ಲದಿರುವುದರಿಂದ ಲಾಂಚ್ ಮೂಲಕವೇ ಸಾಗಬೇಕು.
ಈ ಸೇತುವೆಯು ನಿರ್ಮಾಣಗೊಂಡ ಮೇಲೆ ದೇಶದ ಎರಡನೇ ಅತಿಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2.44 ಕಿ.ಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. 17 ಪಿಲ್ಲರ್‌ಗಳು ಇರಲಿದ್ದು, ಅಂದಾಜು ರೂ.423 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಸೇತುವೆ ನಿರ್ಮಿಸಿದ ಕಂಪನಿಯೇ ಉದ್ಘಾಟನೆಗೊಂಡ ಬಳಿಕ, 10 ವರ್ಷಗಳ ಕಾಲ ಇದನ್ನು ನಿರ್ವಹಿಸಲಿದೆ. ಮುಂಬರುವ ನವೆಂಬರ್ 2024ರೊಳಗೆ ಸೇತುವೆ ನಿರ್ಮಾಣ ಮುಕ್ತಾಯಗೊಳ್ಳಲಿದೆ.
ಪ್ರತಿದಿನ ಸುಮಾರು 5,000 ಭಕ್ತರು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹಬ್ಬದ ಋತುವಿನಲ್ಲಿ 10,000ಕ್ಕೂ ಹೆಚ್ಚಿನ ಜನರು ಬರುತ್ತಾರೆ. ಜೊತೆಗೆ ಇಲ್ಲಿನ 5,000ಕ್ಕೂ ಹೆಚ್ಚು ಕುಟುಂಬಗಳಿಗೆ ದಶಕಗಳಿಂದ ಲಾಂಚ್ ಜೀವನದ ಭಾಗವಾಗಿದೆ. ಆದರೆ, ಸಂಜೆ 6:30ಕ್ಕೆ ಲಾಂಚ್ ಸಂಚಾರವನ್ನು ನಿಲ್ಲಿಸಲಾಗುತ್ತದೆ. ಈ ಸೇತುವೆಯಿಂದ ಶರಾವತಿ ಹಿನ್ನೀರು ಪ್ರದೇಶದ ಹತ್ತಾರು ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ವಾಹಿವಾಟು ಅಭಿವೃದ್ಧಿಯಾಗುತ್ತದೆ.
ಸಿಗಂದೂರು ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದ್ದು, ಇಲ್ಲಿ ಚೌಡೇಶ್ವರಿ ಅಮ್ಮ ನೆಲೆಸಿದ್ದಾಳೆ. ಈ ತಾಯಿಯನ್ನು ಸಿಗಂದೂರೇಶ್ವರಿ ಎಂದು ಸಹ ಕರೆಯುತ್ತಾರೆ. ಸಿಗಂದೂರು ಸಾಗರದಿಂದ ಸುಮಾರು 32 ಕಿಮೀ ದೂರದಲ್ಲಿದ್ದು, ಸಾಗರದಿಂದ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಅಲ್ಲಿ ಲಾಂಚ್ ಮೂಲಕವೆ ಪ್ರಯಾಣಿಸಬೇಕು. ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದಲೂ ಬಸ್ ವ್ಯವಸ್ಥೆಯಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 19 ಫೆಬ್ರವರಿ 2018 ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಈ ಸೇತುವೆ ನಿರ್ಮಾಣದಿಂದ ಶಿವಮೊಗ್ಗ ಜಿಲ್ಲೆಯ ಜನರ ದಶಕಗಳ ಕನಸು ಸಾಕಾರಗೊಳ್ಳಲಿದೆ. ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಭಕ್ತರು ಸಹ ಸುಲಭವಾಗಿ ದೇಗುಲವನ್ನು ತಲುಪಲು ಸಾಧ್ಯವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications