ರಾಯಲ್ ಎನ್‌ಫೀಲ್ಡ್ ಬೈಕ್ ಬಳಸಿಕೊಂಡು ವಿಶ್ವ ದಾಖಲೆ ಮಾಡಿದ ಯೋಧರು
ದೇಶದ ಗಡಿ ರಕ್ಷಣೆಗೆ ಚಳಿ-ಬಿಸಿಲನ್ನು ಲೆಕ್ಕಿಸದೇ ನಿಂತಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಬಿಎಸ್‌ಎಫ್ ಮೋಟಾರ್‌ಸೈಕಲ್ ಸಾಹಸ ತಂಡವು ಮೂರು ಅಪರೂಪದ ವಿಶ್ವ ದಾಖಲೆಗಳನ್ನು ಮಾಡಿದೆ. ಈ ರೆಕಾರ್ಡ್ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಡೆದ ಬಿಎಸ್‌ಎಫ್ ವಿಜಯ್ ದಿವಸ್ ಕಾರ್ಯಕ್ರಮದ ವೇಳೆ ಈ ವಿನೂತನ ದಾಖಲೆ ಸೃಷ್ಟಿಯಾಗಿದೆ. ವಿಶೇಷವಾಗಿ ಈ ರೆಕಾರ್ಡ್ ಮಾಡಲು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಬಳಸಲಾಗಿದೆ. ವಾಸ್ತವವಾಗಿ, ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್‌ಗಳು ಸಾಹಸ ಚಟುವಟಿಕೆಗಳಿಗೆ ತುಂಬಾ ಉಪಯುಕ್ತವಾಗಿವೆ. ಗಡಿಯಲ್ಲಿ ದೇಶ ಕಾಯುವ ನಮ್ಮ ವೀರ ಯೋಧರು ಇಂತಹ ಅಮೋಘ ಪ್ರದರ್ಶನದ ಮೂಲಕ ವಿಶ್ವದಾಖಲೆ ನಿರ್ಮಿಸಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ದೇಶದ ರಕ್ಷಣೆಯಲ್ಲಿ ಮಾತ್ರವಲ್ಲದೆ, ಸಾಹಸ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಮ್ಮ ಸೈನಿಕರು ಎಂದಿಗೂ ಹಿಂದೆ ಬಿದ್ದಿಲ್ಲ. ಇಲ್ಲಿ ವಿಶ್ವದಾಖಲೆ ಮಾಡಿದವರೆಲ್ಲರೂ ನಮ್ಮ ಹೆಮ್ಮೆಯ ಬಿಎಸ್‌ಎಫ್ ಯೋಧರೇ... ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ 12.9 ಅಡಿ ಏಣಿಯನ್ನು ಏರಿದ ಯೋಧ, ಮೊದಲು ವಿಶ್ವ ದಾಖಲೆ ಮಾಡಿದವರಾಗಿದ್ದಾರೆ. ಎನ್‌ಫೀಲ್ಡ್ ಬೈಕ್‌ಗೆ ಅಳವಡಿಸಿದ್ದ ಏಣಿಯ ಮೇಲೆ ನಿಂತು, ಯಾರ ಸಹಾಯವಿಲ್ಲದೆಯೇ ಅದನ್ನು ಚಲಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೀವು ನೋಡಬಹುದು.
ಮಹಿಳಾ ಬಿಎಸ್‌ಎಫ್ ಯೋಧೆ ಸಹ ಯಾರಿಗೂ ಸಹ ಕಡಿಮೆಯಿಲ್ಲ ಎಂಬಂತೆ ದಾಖಲೆ ಮಾಡಿದ್ದಾರೆ. ಬೈಕ್ ಮೇಲೆ ನಿಂತು 5 ಗಂಟೆ 26 ನಿಮಿಷಗಳ ಕಾಲ ಯಾರ ಬೆಂಬಲವಿಲ್ಲದೆ, ಚಲಾಯಿಸಿದ್ದಾರೆ. ಅದು ಸಹ ಬರೋಬ್ಬರಿ 174.1 ಕಿ.ಮೀ. ಇದೊಂದು ಅಪರೂಪದ ರೆಕಾರ್ಡ್ ಎಂದೇ ಹೇಳಬಹುದು. ಇದು ದೊಡ್ಡ ಸಾಧನೆ ಮಾತ್ರವಲ್ಲದೆ, ಯಾವುದೇ ಒಬ್ಬ ವ್ಯಕ್ತಿಯು ಈ ರೀತಿ 174 ಕಿ.ಮೀ ಕ್ರಮಿಸಿರುವುದು ಮೊಟ್ಟ ಮೊದಲ ದಾಖಲೆಯಾಗಿದೆ. ಈ ಬೈಕ್ ಓಡಿಸುವಾಗ ಇವರು ಒಮ್ಮೆಯೂ ಬ್ರೇಕ್ ಹಾಕಿರಲಿಲ್ಲ.

ಬೈಕ್ ನ ಸೀಟ್ ಮೇಲೆ ಮಲಗಿ ಸುಮಾರು 2 ಗಂಟೆಗಳ ಕಾಲ ಬೈಕ್ ಹ್ಯಾಂಡಲ್ ಮೇಲೆ ಕಾಲು ಇಟ್ಟು, ಸರಿ ಸುಮಾರು 70.2 ಕಿ.ಮೀ ಕ್ರಮಿಸುವ ಮೂಲಕ ಮತ್ತೊಬ್ಬ ಯೋಧನು ದಾಖಲೆ ಮಾಡಿದ್ದಾರೆ. ಈ ಮೂರು ದಾಖಲೆಗಳು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿವೆ. ಈ ಕಾರ್ಯಕ್ಕೆ ಮೂವರು ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್‌ಗಳನ್ನು ಉಪಯೋಗ ಮಾಡಿದ್ದಾರೆ ಎಂಬುದು ವಿಶೇಷವಾಗಿದೆ. ಬೈಕ್‌ಗೆ ಜೋಡಿಸಲಾದ ಏಣಿಯ ಮೇಲೆ ನಿಂತಿರುವ ಯೋಧನ ಹೆಸರು ಇನ್ಸ್ ಪೆಕ್ಟರ್ ಅವಧೇಶ್ ಕುಮಾರ್ ಸಿಂಗ್.
ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಮಹಿಳಾ ಯೋಧೆಯ ಹೆಸರು 'ಹಿಮಾನ್ಶು ಸಿರೋಹಿ. ಅವರು, ಸೀಮಾ ಭವಾನಿ ಆಲ್ ವುಮೆನ್ ಮೋಟಾರ್ ಸೈಕಲ್ ಟೀಮ್ ಕ್ಯಾಪ್ಟನ್ ಮತ್ತು ಇನ್ಸ್ ಪೆಕ್ಟರ್. ವಿಶ್ವಜೀತ್ ಭಾಟಿಯಾ ಬೈಕ್ ಮೇಲೆ ಮಲಗಿ ದಾಖಲೆ ಬರೆದ ಮತ್ತೊಬ್ಬ ಇನ್ಸ್ ಪೆಕ್ಟರ್ ಆಗಿದ್ದಾರೆ. ಇವರೆಲ್ಲರೂ ನಮ್ಮ ಭಾರತದ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಯೋಧರು. ವೀರಾವೇಶದ ಈ ಸಾಹಸ ನೋಡುಗರನ್ನು ಹುಬ್ಬೇರಿಸುವುದಂತೂ ಖಂಡಿತ.

ಇತ್ತೀಚೆಗೆ ಮಾಡಿರುವ ಈ ವಿಶ್ವ ದಾಖಲೆಗಳ ಹೊರತಾಗಿ, ಪ್ರತಿ ವರ್ಷ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಾಯುಪಡೆಯ ಯೋಧರು ವಿಮಾನಗಳ ಮೂಲಕ, ಐಟಿಬಿಪಿ ಯೋಧರು ಬೈಕ್ ಬಳಸಿಕೊಂಡು ಇಂತಹದೇ ಮೈನವಿರೇಳಿಸುವ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಇದು ನಮ್ಮ ಸೇನೆಯ ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಹಿಂದೆ, ಯೋಧನೊಬ್ಬ ರಾಯಲ್ ಎನ್‌ಫೀಲ್ಡ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ನಿಂತು ಸುದೀರ್ಘ ಪ್ರಯಾಣಿಸಿ ದಾಖಲೆ ಮಾಡಿದ್ದರು.
ಭಾರತೀಯ ಸೇನೆಯಲ್ಲಿರುವ ಪ್ರತಿಯೊಬ್ಬ ಯೋಧನ ಧ್ಯೇಯವೇನೆಂದರೆ ತಮ್ಮ ದೇಹ ನೆಲಕ್ಕೆ ಬೀಳುವವರೆಗೂ ಶತ್ರುಗಳಿಗೆ ಎದೆಕೊಟ್ಟು ಹೋರಾಡುವುದು. ಯಾವುದೇ ಸಮಯದಲ್ಲೂ ಎಂತಹ ಕಠಿಣ ಪರಿಸ್ಥಿತಿಯನ್ನು ಧೈರ್ಯದಿಂದ ನಮ್ಮ ಸೈನಿಕರು ಎದುರಿಸಬಲ್ಲರು. ಬಿಎಸ್‌ಎಫ್ ಯೋಧರು, ತುಂಬಾ ಪರಿಶ್ರಮಪಡುವ ಮೂಲಕ ಈ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ, ದೇಶ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಸೈನಿಕರು ಹಲವು ಪದಕಗಳನ್ನು ದೇಶಕ್ಕಾಗಿ ತಂದುಕೊಟ್ಟಿದ್ದಾರೆ ಎಂದು ಹೇಳಬಹುದು.


Click it and Unblock the Notifications