South India first Inter-State Metro: ತಮಿಳುನಾಡಿನಿಂದ ಕರ್ನಾಟಕಕ್ಕೆ ಮೊದಲ ಅಂತರರಾಜ್ಯ ಮೆಟ್ರೋ, ಎಲ್ಲಿಂದ?
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಯನ್ನು ವೃದ್ಧಿಸಲು ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway)ಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗುವ ನೀರಿಕ್ಷೆಯಿದೆ. ಈಗ ಇವೆರೆಡು ರಾಜ್ಯಗಳ ನಡುವೆ ಮೆಟ್ರೋ ಆರಂಭಿಸಲು ಸಿದ್ದತೆಗಳು ನಡೆಯುತ್ತಿವೆ.
ಎಲ್ಲವು ಅಂದುಕೊಂಡಂತೆ ನಡೆದರೆ ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ (South India first Inter-State Metro) ರೈಲು ಶೀಘ್ರದಲ್ಲೇ ಸಂಚಾರವನ್ನು ಆರಂಭಿಸಲಿದೆ. ಚೆನ್ನೈ ಮೆಟ್ರೋ ರೈಲು ನಿಗಮ (CMRL), ತಮಿಳುನಾಡಿನ ಹೊಸೂರು (Hosur) ಹಾಗೂ ಕರ್ನಾಟಕದ ಬೊಮ್ಮಸಂದ್ರ (Bommasandra) ಮಧ್ಯೆ 20 ಕಿ.ಮೀ ಮೆಟ್ರೋ ರೈಲು ಮಾರ್ಗ ನಿರ್ಮಾಣದ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನ (Feasibility study) ನಡೆಸಲು ಗುತ್ತಿಗೆ ನೀಡಿದೆ.

ಬಾಲಾಜಿ ರೈಲ್‌ರೋಡ್ ಸಿಸ್ಟಮ್ಸ್ ಮತ್ತು ಹ್ಯಾಬೋಗ್ ಕನ್ಸಲ್ಟೆಂಟ್ ಜಂಟಿಯಾಗಿ ಉದೇಶಿತ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಬಗ್ಗೆ ಸಮೀಕ್ಷೆ ನಡೆಸಲಿದ್ದು, 4 ತಿಂಗಳಲ್ಲಿ ವರದಿಯನ್ನು ಸಲ್ಲಿಸಲಿವೆ. ಇದಕ್ಕಾಗಿ ಚೆನ್ನೈ ಮೆಟ್ರೋ ರೈಲು ನಿಗಮ, ಈ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ರೂ.29.44 ಲಕ್ಷ ಹಣವನ್ನು ವ್ಯಯಿಸುತ್ತಿದೆ ಎಂದು ವರದಿಯಾಗಿದೆ.
ಹೊಸೂರು ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ 20 ಕಿ.ಮೀ ಉದ್ದದ ಈ ಮೆಟ್ರೋ ಮಾರ್ಗ, ತಮಿಳುನಾಡಿನಲ್ಲಿ 8 ಕಿ.ಮೀ ಹಾಗೂ ಕರ್ನಾಟಕದಲ್ಲಿ 12 ಕಿ.ಮೀ ಹಾದುಹೋಗಲಿದೆ. ಮುಂದಿನ 30 ವರ್ಷಗಳಲ್ಲಿ ಪ್ರಯಾಣಿಕರಿಂದ ಯಾವ ರೀತಿಯಲ್ಲಿ ಬೇಡಿಕೆಯನ್ನು ಪಡೆದುಕೊಳುತ್ತದೆ. ಕಾಮಗಾರಿ ನಡೆಸಲು ಖರ್ಚಾಗಲಿರುವ ಅಂದಾಜು ವೆಚ್ಚ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸಿ, ಕಾರ್ಯಸಾಧ್ಯತಾ ಅಧ್ಯಯನ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ದೆಹಲಿ ಮೆಟ್ರೋ ರೈಲು ನಿಗಮ, ಅಂತರರಾಜ್ಯ ಮೆಟ್ರೋ ರೈಲು ಸೇವೆಯನ್ನು ನಿರ್ವಹಿಸುತ್ತದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಹರಿಯಾಣ ಹಾಗೂ ಉತ್ತರ ಪ್ರದೇಶದ ನೋಯ್ಡಾವನ್ನು ಸಂಪರ್ಕಿಸುತ್ತದೆ. ಒಟ್ಟು 10 ಬಣ್ಣದ ರೈಲು ಮಾರ್ಗಗಳು ಇದ್ದು, ಬರೋಬ್ಬರಿ 350.42 ಕಿಲೋಮೀಟರ್ ವ್ಯಾಪಿಸಿಕೊಂಡಿದೆ. 256 ನಿಲ್ದಾಣವನ್ನು ಒಳಗೊಂಡಿದ್ದು, ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು (Chennai-Bengaluru-Mysuru High-Speed Rail - HSR) ಯೋಜನೆ ಕುರಿತು ಕೆಲವು ದಿನಗಳ ಹಿಂದೆ ಪ್ರಮುಖವಾದ ಮಾಹಿತಿಯೊಂದು ಲಭ್ಯವಾಗಿತ್ತು. ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ (NHSRCL), ಜನರಲ್ ಅಲೈನ್‌ಮೆಂಟ್ ಡ್ರಾಯಿಂಗ್ಸ್, ಸರ್ವೇಯಿಂಗ್, ಓವರ್‌ಹೆಡ್, ಓವರ್‌ಗ್ರೌಂಡ್, ಅಂಡರ್‌ಗ್ರೌಂಡ್ ಯುಟಿಲಿಟಿ ಮತ್ತು ಸಬ್‌ಸ್ಟೇಷನ್ ಪವರ್ ಸೋರ್ಸಿಂಗ್ ಐಡೆಂಟಿಟಿಗೆ ಗುತ್ತಿಗೆಯನ್ನು ನೀಡಿದೆ ಎಂದು ಗೊತ್ತಾಗಿದೆ.

ಉದ್ದೇಶಿತ 435 ಕಿ.ಮೀ ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು (ಬುಲೆಟ್ ರೈಲು), ಚೆನ್ನೈ, ಪೂನಮಲ್ಲಿ, ಅರಕ್ಕೋಣಂ (ತಮಿಳುನಾಡು), ಚಿತ್ತೂರು (ಆಂಧ್ರಪ್ರದೇಶ), ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರು ಒಳಗೊಂಡಂತೆ 9 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಹೇಳಲಾಗಿದೆ. ಈ ಹೈ-ಸ್ಪೀಡ್ ರೈಲು ಸಂಚಾರ ಆರಂಭಿಸಿದ ಮೇಲೆ ಚೆನ್ನೈ - ಮೈಸೂರು ಮಧ್ಯದ ಈ ಅಂತರವನ್ನು ಕೇವಲ 2 ಗಂಟೆ 25 ನಿಮಿಷಗಳಲ್ಲಿ ಕ್ರಮಿಸಲಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications