"ಡೀಸೆಲ್ ಕಾರುಗಳ ತಯಾರಿ ನಿಲ್ಲಿಸಿಬಿಡಿ, ಇಲ್ಲದಿದ್ದರೆ ತೆರಿಗೆ ಆಕಶಕ್ಕೇರಲಿದೆ": ನಿತಿನ್ ಗಡ್ಕರಿ ವಾರ್ನಿಂಗ್!
ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾರತೀಯ ಕಾರು ತಯಾರಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾರು ಕಂಪನಿಗಳು ತಮ್ಮ ಉತ್ಪಾದನೆಯನ್ನು ಮಿತಿಗೊಳಿಸದಿದ್ದರೆ ಡೀಸೆಲ್ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸುತ್ತೇವೆ. ಉತ್ಪಾದನೆ ಬಳಿಕ ಅವುಗಳ ಮಾರಾಟ ಇನ್ನೂ ಕಷ್ಟವಾಗಲಿದೆ. ಒಮ್ಮೆ ಯೋಚನೆ ಮಾಡಿ, ನಮ್ಮ ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
2070 ರ ವೇಳೆಗೆ ಕಾರ್ಬನ್ ಪ್ರಮಾಣವನ್ನು ಸಾಧ್ಯವಾದಷ್ಟು ಇಳಿಕೆ ಮಾಡಿ, ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಗುರಿಯಿದೆ. ವಾಹನ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಇಂಧನಗಳು ಆಮದು ಬದಲಿಗಳಾಗಿರಬೇಕು, ವೆಚ್ಚ-ಪರಿಣಾಮಕಾರಿ, ಸ್ಥಳೀಯ ಮತ್ತು ಮಾಲಿನ್ಯ-ಮುಕ್ತವಾಗಿರಬೇಕು" ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ದೆಹಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲೂ ಮಾತನಾಡಿ, "ಡೀಸೆಲ್‌ಗೆ ವಿದಾಯ ಹೇಳಿ, ದಯವಿಟ್ಟು ಅವುಗಳನ್ನು ತಯಾರಿಸುವುದನ್ನು ನಿಲ್ಲಿಸಿಬಿಡಿ. ಇಲ್ಲದಿದ್ದರೆ ನೀವು ಡೀಸೆಲ್ ಕಾರುಗಳನ್ನು ಮಾರಾಟ ಮಾಡುವುದು ಕಷ್ಟವಾಗುವಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ" ಎಂದು ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಮಾರುತಿ ಸುಜುಕಿ ಮತ್ತು ಹೋಂಡಾದಂತಹ ಕಾರು ತಯಾರಕರು ಡೀಸೆಲ್ ಪ್ರಯಾಣಿಕ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
ಡೀಸೆಲ್ ಅನ್ನು "ಅಪಾಯಕಾರಿ ಇಂಧನ" ಎಂದು ಕರೆದ ಸಚಿವರು, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಭಾರತವು ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡೀಸೆಲ್ ಕಾರುಗಳ ಸಂಖ್ಯೆಯು 2014 ರಲ್ಲಿ ಶೇ 53 ರಿಂದ ಈಗ ಶೇ 18 ಕ್ಕೆ ಇಳಿದಿದೆ, ಇದು "ಒಳ್ಳೆಯ ಸಂಕೇತ" ಆದರೆ ಇನ್ನೂ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ತೆರಿಗೆ ಹೆಚ್ಚಳ ಕುರಿತು ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಅವರು, ಆರಂಭಿಕ ವರದಿಗಳು ಹೆಚ್ಚುವರಿ ತೆರಿಗೆ ಹೆಚ್ಚಳವು ಶೇ10 ರಷ್ಟು ಹೆಚ್ಚಾಗಬಹುದು ಎಂದು ಸೂಚಿಸಿವೆ. ಆದರೆ ಅಂತಹ ಹೆಚ್ಚಳಕ್ಕೆ ಯಾವುದೇ ನಿರ್ದಿಷ್ಟ ಪ್ರಸ್ತಾವನೆಯು ಪ್ರಸ್ತುತ ಪರಿಗಣನೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯದ ತೆರಿಗೆ ಎಷ್ಟು?: ಪ್ರಸ್ತುತ, ವಾಹನಗಳು ಹೆಚ್ಚುವರಿ ಸೆಸ್‌ನೊಂದಿಗೆ ಶೇ 28 ಜಿಎಸ್‌ಟಿಯನ್ನು ಹೊಂದಿವೆ (ವಾಹನ ಪ್ರಕಾರವನ್ನು ಅವಲಂಭಿಸಿ ಶೇ1 ರಿಂದ ಶೇ22 ವರೆಗೆ). ಅದರಲ್ಲೂ SUVಗಳು ಅತಿ ಹೆಚ್ಚು ತೆರಿಗೆಯನ್ನು ಹೊಂದಿವೆ (ಶೇ 28 ರಷ್ಟು GST ಜೊತೆಗೆ ಶೇ 22 ರಷ್ಟು ಸೆಸ್). ಇನ್ನೂ ಹೆಚ್ಚಾದ್ರೆ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಡೀಸಲ್ ವಾಹನಗಳ ತಯಾರಿಯನ್ನು ನಿಲ್ಲಿಸುವುದೇ ಉತ್ತಮ.

ಎಥೆನಾಲ್ ಮತ್ತು ಹಸಿರು ಹೈಡ್ರೋಜನ್‌ನಂತಹ ಪರಿಸರ ಸ್ನೇಹಿ ಇಂಧನಗಳ ಮೇಲೆ ಕೇಂದ್ರೀಕರಿಸಲು ತಮ್ಮ ಉತ್ಪಾದನೆಯನ್ನು ಮರುಹೊಂದಿಸಲು ಸಚಿವರು ಕಾರು ತಯಾರಕರನ್ನು ಈ ಹಿಂದೆಯೇ ಕೇಳಿದ್ದರು. ಈ ಕ್ರಮವು ಭಾರತೀಯ ರಸ್ತೆಗಳಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಅನುಕೂಲವಾಗುತ್ತದೆ. ಆದರೆ ಸಾರ್ವಜನಿಕರಿಗೆ ಇವಿಗಳ ಮೇಲೆ ಅಷ್ಟು ಒಲವಿಲ್ಲ.
ಇವಿಗಳಲ್ಲಿ ಸಮಸ್ಯೆಗಳು, ರೇಂಜ್ ಆತಂಕ, ಬೆಂಕಿ ಅವಘಡಗಳಿಂದಾಗಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ನಿಜಕ್ಕೆ ಈಗ ತಂತ್ರಜ್ಞಾನ ಬೆಳೆದಿದೆ, ಸದ್ಯ ಇವಿಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಬಹುತೇಕ ಕಡಿಮೆಯಾಗಿವೆ. ಜನರು ಇವಿಗಳನ್ನು ಖರೀದಿಸಲು ಕೇಂದ್ರವು ಎಲ್ಲಾ ವಿಧಗಳಲ್ಲೂ ಪ್ರೂತ್ಸಾಹಿಸಿ ಸಬ್ಸಿಡಿ ಕೂಡ ನೀಡುತ್ತಿದೆ.

ಮುಂದಿನ ವರ್ಷಗಳಲ್ಲಿ ಸಬ್ಸಿ ಪ್ರಮಾಣ ಕೂಡ ಇಳಿಕೆಯಾಗಲಿದೆ. ಅಷ್ಟರಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ ಹಣ ಉಳಿಸಬಹುದು ಎಂಬುದು ನಮ್ಮ ಅಭಿಪ್ರಾಯ. ತುಂಬಾ ಜನರಿಗೆ ತಿಳಿಯದ ವಿಷಯವೇನೆಂದರೆ ಭವಿಷ್ಯವು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಂದ ತುಂಬಿರಲಿದೆ. ಇಂಧನಚಾಲಿತ ವಾಹನಗಳು ಕಣ್ಮರೆಯಾಗಲಿವೆ. ಇದನ್ನು ಮನಗಂಡವರು ಹಣ ಉಳಿಸಬಹುದು. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications