ಮನಕಲುಕುವ ದೃಶ್ಯ: ಸುತ್ತ ಜನ, ಟ್ರಾಕ್ಟರ್ ವೀಲಿಂಗ್... ಕಾಪಾಡಲು ಹೋಗಿ ತಾನೇ ಬಲಿ!
ಪಂಜಾಬ್‌ನ ಗುರುದಾಸ್ ಪುರದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಮೇಳದಲ್ಲಿ ಚಾಲಕನಿಲ್ಲದೆ ಓಡುತ್ತಿದ್ದ ಟ್ರಾಕ್ಟರ್ ಅನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿ ತಾನೇ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಅಹಿತಕರ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮೃತರನ್ನು 29 ವರ್ಷದ ಸುಖಮದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಪಂಜಾಬ್‌ನ ಫತೇಘರ್ ಚುರಿಯನ್ ಕ್ಷೇತ್ರ ವ್ಯಾಪ್ತಿಯ ಸರ್ಚುರ್ ಗ್ರಾಮದಲ್ಲಿ ಮೇಳವನ್ನು ಆಯೋಜಿಸಿದ್ದಾಗ ಹೆಚ್ಚು ಅಪಾಯದಿಂದ ಕೂಡಿದ ಟ್ರಾಕ್ಟರ್ ಸಾಹಸವನ್ನು ಕೂಡ ಪ್ರದರ್ಶಿಸಲಾಗಿತ್ತು. ಮೈದಾನ ಖಾಲಿ ಇದ್ದರೂ ಪ್ರದರ್ಶನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಹೊರತುಪಡಿಸಿ ಅದರಿಂದಾಚಗೆ ಜನ ಕಿಕ್ಕಿರಿದು ತುಂಬಿದ್ದರು.

ಇನ್ನು ಮೈದಾನದೊಳಗೆ ಸುಖಮದೀಪ್ ಸಿಂಗ್ ಸೇರಿದಂತೆ ನಾಲ್ಕೈದು ಮಂದಿ ಇದ್ದರು. ಟ್ರಾಕ್ಟರ್ ಮೈದಾನದೊಳಗೆ ಎರಡು ಚಕ್ರದಲ್ಲಿ ಚಾಲಕನಿಲ್ಲದೇ ಓಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ಇದ್ದಕ್ಕಿದ್ದಂತೆ ಟ್ರಾಕ್ಟರ್ ವೇಗಗೊಂಡು ಮುನ್ನುಗ್ಗಲು ಪ್ರಾರಂಭಿಸಿದೆ. ಒಮ್ಮೆಲೆ ಅದು ಜನರತ್ತ ನುಗ್ಗಲಿದೆ ಎಂದು ಭಾವಿಸಿದ ಸುಖಮದೀಪ್ ಸಿಂಗ್ ಟ್ರಾಕ್ಟರ್ ಅನ್ನು ನಿಯಂತ್ರಣಕ್ಕೆ ತರಲು ಮುಂದಾಗಿ ಘಟನೆ ಸಂಭವಿಸಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನಿಯಂತ್ರಣವಿಲ್ಲದೇ ಸಾಗುತ್ತಿದ್ದ ಟ್ರಾಕ್ಟರ್ ಅನ್ನು ಸುಖಮದೀಪ್ ಸಿಂಗ್ ಟೈರ್ ಒಂದರ ಮೇಲೆ ಕಾಲು ಇರಿಸುವ ಮೂಲಕ ಟ್ರ್ಯಾಕ್ಟರ್‌ಗೆ ಏರಲು ಪ್ರಯತ್ನಿಸಿದಾಗ ನಿಯಂತ್ರಣ ಸಿಗದೇ ಟ್ರಾಕ್ಟರ್ ಅಡಿಗೆ ಬಿದ್ದಿದ್ದಾರೆ. ಟ್ರಾಕ್ಟರ್ ಅಡಿಯಿಂದ ಹೊರಬರಲು ಯಾವುದೇ ದಾರಿ ಇಲ್ಲದ ಕಾರಣ ಸುಖಮದೀಪ್ ಅನ್ನು ದೈತ್ಯ ಟ್ರಾಕ್ಟರ್ ಕೆಸರಿನಲ್ಲಿ ಎಳೆದುಕೊಂಡು ಹೋಗಿ ನಜ್ಜುಗುಜ್ಜಾಗಿಸಿದೆ.

ಈ ವೇಳೆ ಅಲ್ಲೇ ಇದ್ದ ಕೆಲವರು ಆತನನ್ನು ಉಳಿಸಲು ಧಾವಿಸಿದರಾದರೂ ಅಷ್ಟೊತ್ತಿಗಾಗಲೇ ಟ್ರಾಕ್ಟರ್ ಅಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯ ನಂತರ ಮೇಳವನ್ನು ರದ್ದುಗೊಳಿಸಲಾಗಿದೆ. ಮೃತ ಸುಖಮದೀಪ್ ಇಲ್ಲಿನ ಬಟಾಲದ ತಾಠೆ ಗ್ರಾಮದ ನಿವಾಸಿಯಾಗಿದ್ದು, ತಂದೆ-ತಾಯಿ, ಪತ್ನಿ ಹಾಗೂ ಏಳು ವರ್ಷದ ಮಗನನ್ನು ಅಗಲಿದ್ದಾರೆ.
ಸುಖಮದೀಪ್ ಮಾಡಿದ್ದು 100% ತಪ್ಪು: ಉತ್ತರ ಭಾರತದಲ್ಲಿ ಇಂತಹ ಟ್ರಾಕ್ಟರ್ ಸಾಹಸಗಳನ್ನು ಹೆಚ್ಚಾಗಿ ಮಾಡುತ್ತಾರೆ. ಆದರೆ ತುಸು ಯಾಮಾರಿದ್ರೂ ಜೀವಕ್ಕೆ ಕುತ್ತು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಚಲಿಸುವ ವಾಹನಗಳ ಮೇಲೆ ಟೈರ್‌ಗಳ ಮೇಲೆ ಕಾಲಿಟ್ಟರೆ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಘಟನೆಯಲ್ಲಿ ಸುಖಮದೀಪ್ ತರಾತುರಿಯಲ್ಲಿ ಏನೂ ತಿಳಿಯದೇ ಟ್ರಾಕ್ಟರ್ ಟೈರ್ ಮೇಲೆ ಏರಲು ಪ್ರಯತ್ನಿಸಿ ಸಾವನ್ನಪ್ಪಿದ್ದಾರೆ.
ಹೀಗೂ ಮಾಡಬಹುದಿತ್ತು: ಟ್ರಾಕ್ಟರ್ ಎರಡು ಚಕ್ರಗಳ ಮೇಲೆ ನಿಂತು ಮುಂದಕ್ಕೆ ಸಾಗುತ್ತಿದೆ. ಇಂತಹ ವಾಹನಗಳನ್ನು ನಿಯಂತ್ರಣಕ್ಕೆ ತರುವುದು ತೀರಾ ಕಷ್ಟವೇನಲ್ಲ. ಮೊದಲಿಗೆ ಟ್ರಾಕ್ಟರ್ ಅನ್ನು ಕೆಳಗಿಳಿಸಿ ನಾಲ್ಕು ಚಕ್ರಗಳ ಮೇಲೆ ನಿಲ್ಲುವಂತೆ ಮಾಡಬೇಕು. ಇದಕ್ಕಾಗಿ ಚಕ್ರಗಳ ಅಡಿಗೆ ದೊಡ್ಡ ಮರದ ದಿಮ್ಮೆಗಳನ್ನು ಎಸೆದರೆ ಅದು ಉಳ್ಟ ಬೀಳಬಹುದು ಅಥವಾ ಸ್ಥಗಿತಗೊಳ್ಳಬಹುದು. ಆನಂತರವಷ್ಟೇ ಅದನ್ನು ಹಿಡಿತಕ್ಕೆ ತರಲು ಮುಂದಾಗಬೇಕು, ಇಲ್ಲದಿದ್ದರೆ ಜೀವಕ್ಕೆ ಕುತ್ತು ಗ್ಯಾರೆಂಟಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications