Osamu Suzuki: ಮಧ್ಯಮ ವರ್ಗದವರ ಹೊಸ ಕಾರಿನ ಕನಸು ನನಸು ಮಾಡಿದ್ದ ಮಹಾನ್ ವ್ಯಕ್ತಿ ಇನ್ನಿಲ್ಲ
ಭಾರತದ ನಂಬರ್ 1 ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಮಾತೃ ಸಂಸ್ಥೆ ಜಪಾನ್‌ನ ಸುಜುಕಿ ಮೋಟಾರ್ (Suzuki Motor) ಮಾಜಿ ಮುಖ್ಯಸ್ಥ ಒಸಾಮು ಸುಜುಕಿ (Osamu Suzuki) ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. 2021ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದರು. ಸರಿ ಸುಮಾರು 40 ವರ್ಷಗಳ ಕಾಲ ಸುಜುಕಿ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ಮೂಲಕ ವಾಹನೋದ್ಯಮದ ಹೊಸ ಕ್ರಾಂತಿಗೆ ಕಾರಣಕರ್ತರಾಗಿದ್ದರು.
ಜಪಾನ್‌ನ ಗಿಫು ಪ್ರಿಫೆಕ್ಚರ್‌ನ ಗೆರೊದಲ್ಲಿ ಜ.30, 1930ರಲ್ಲಿ ಒಸಾಮು ಜನಿಸಿದ್ದರು. ಕೃಷಿ ಕುಟುಂಬದಿಂದ ಬಂದ ಅವರು, ಆರಂಭದಲ್ಲಿ ರಾಜಕಾರಣಿಯಾಗುವ ಬಹುದೊಡ್ಡ ಆಸೆಯೊಂದಿದ್ದರು. ಟೋಕಿಯೊದ ಚುವೊ ವಿವಿಯಲ್ಲಿ ಕಾನೂನು ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಪ್ರೌಢಶಾಲಾ ಶಿಕ್ಷಕ ಹಾಗೂ ರಾತ್ರಿ ಪಾಳಿ ಕಾವಲುಗಾರನಾಗಿ ಕೂಡ ಕೆಲಸ ಮಾಡಿದ್ದರು.

1953ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ ಅವರು, ಬ್ಯಾಂಕ್‌ವೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. 'ಮತ್ಸುಡಾ' ಮನೆತನದವರಾದ ಒಸಾಮು ಪುತ್ರ ಸಂತಾನವಿಲ್ಲದ 'ಸುಜುಕಿ' ಕುಟುಂಬದ ಹೆಣ್ಣನ್ನು ವಿವಾಹವಾದರು. ಆ ಬಳಿಕ, ಜಪಾನ್ ದೇಶದ ಆಚರಣೆಯಂತೆ ಪತ್ನಿ ಮನೆತನದ ಸುಜುಕಿ ಹೆಸರನ್ನು ಇಟ್ಟುಕೊಂಡರು. 1958ರಲ್ಲಿ ಮಡದಿಯ ತಾತ ಸ್ಥಾಪಿಸಿದ ಸುಜುಕಿ ಮೋಟಾರ್‌ಗೆ ಕಂಪನಿಗೆ ಸೇರ್ಪಡೆಗೊಂಡಿದ್ದರು.
ಉದ್ಯೋಗದಲ್ಲಿ ಬದ್ಧತೆ ಹೊಂದಿದ್ದ ಒಸಾಮು ಸುಜುಕಿ ಅವರು, ಹಂತ - ಹಂತವಾಗಿ ಬೆಳೆದರು. ಅಂತಿಮವಾಗಿ 1978ರಲ್ಲಿ ಕಂಪನಿಯ ಅಧ್ಯಕ್ಷ ಹುದ್ದೆಗೇರಿದರು. ಹಗಲು - ರಾತ್ರಿ ಶ್ರಮಿಸಿ, ದ್ವಿಚಕ್ರ ವಾಹನ ಹಾಗೂ ಕಾರು ತಯಾರಿಕೆಯಲ್ಲಿ ಕಂಪನಿಯು ಜಾಗತಿಕವಾಗಿ ಹೆಸರುವಾಸಿಯಾಗುವಂತೆ ಮಾಡಿದ್ದರು. ಅದರ ಪ್ರತಿಫಲವಾಗಿ ಇಂದು ಸುಜುಕಿ ತಯಾಕರಿಸುವ ವಾಹನಗಳು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.
ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಕಾರು ಲಭ್ಯವಾಗಬೇಕು ಎಂಬ ಕನಸು ನನಸು ಮಾಡಲು ಮಾರುತಿ ಉದ್ಯೋಗ್ ಲಿಮಿಟೆಡ್ ಯೋಜಿಸಿತ್ತು. ಅದರ ಭಾಗವಾಗಿ ದಿವಂಗತ ಒಸಾಮು ಸುಜುಕಿ ಒಡೆತನದ ಸುಜುಕಿ ಮೋಟಾರ್ ಪಾಲುದಾರಿಕೆಯಲ್ಲಿ 'ಮಾರುತಿ 800' ಕಾರನ್ನು 1983ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿತ್ತು.
ಸದ್ಯ ಮಾರುತಿ ಸುಜುಕಿ ನೆಕ್ಸಾ ಮತ್ತು ಅರೆನಾ ಡೀಲರ್‌ಶಿಪ್ ಮೂಲಕ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಅವುಗಳಲ್ಲಿ ಆಲ್ಟೊ ಕೆ10, ಸೆಲೆರಿಯೊ, ವ್ಯಾಗನ್ಆರ್, ಇಕೋ ವ್ಯಾನ್, ಸ್ವಿಫ್ಟ್, ಡಿಜೈರ್, ಇಗ್ನಿಸ್, ಬ್ರೆಜಾ, ಎರ್ಟಿಗಾ, ಸಿಯಾಜ್, ಫ್ರಾಂಕ್ಸ್, ಎಸ್-ಪ್ರೆಸ್ಸೊ, ಜಿಮ್ನಿ, ಗ್ರ್ಯಾಂಡ್ ವಿಟಾರಾಗಳು ಪ್ರಮುಖವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications