swiggy: ಇಂದು ನೀವು, ನಾಳೆ ನಾನು.. ಹಣ ಬೇಡ ಸಾರ್! ಡೆಲಿವರಿ ಬಾಯ್‌ಗೆ ಮನಸೋತ ವ್ಯಕ್ತಿ
ಬೆಂಗಳೂರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗ್ತಿದೆ. ಇದೀಗ ದೇಶದ ಜನ ಬೆಂಗಳೂರನ್ನು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ್ದು, ಇಲ್ಲಿನ ಸ್ವಿಗ್ಗಿ ಬಾಯ್. ವ್ಯಕ್ತಿಯೊಬ್ಬರಿಗೆ ಸ್ವಿಗ್ಗಿ ಯುವಕ ಮಾಡಿದ ಸಹಾಯ ಹಾಗೂ ಆತ ಆಡಿದ ಮಾತುಗಳು ನೆಟ್ಟಿಗರ ಮನಗೆದ್ದಿವೆ.
ಇತ್ತೀಚೆಗೆ, ಬೆಂಗಳೂರಿನ ವ್ಯಕ್ತಿಯೊಬ್ಬರು ತಮಗೆ ಎದುರಾದ ಕಲ್ಮಶವಿಲ್ಲದ ಯುವಕನ ಬಗ್ಗೆ X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ ತಮ್ಮ ಬೈಕ್‌ನಲ್ಲಿ ಇಂಧನ ಖಾಲಿಯಾದಾಗ ಸಹಾಯ ಮಾಡಿದ್ದಲ್ಲದೇ ಕೊಟ್ಟ ಹಣವನ್ನು ಹಿಂದಿರುಗಿಸಿ ಆಣಿಮುತ್ಯದಂತಹ ಮಾತುಗಳನ್ನಾಡಿ ಹೃದಯಗೆದ್ದಿರುವುದಾಗಿ ಟ್ವಿಟರ್‌ನಲ್ಲಿ ಯುವಕನ ಬಗ್ಗೆ ಮೆಚ್ಚುಗೆಯ ಪದಗಳನ್ನು ಬರೆದುಕೊಂಡಿದ್ದಾರೆ.

ದಿ ಪ್ರಾಡಕ್ಟ್ ಟ್ರೀ ಸಂಸ್ಥಾಪಕ ಶ್ರವಣ್ ಟಿಕೂ ಅವರು ಕೋರಮಂಗಲದಿಂದ ಸರ್ಜಾಪುರ ರಸ್ತೆಯಲ್ಲಿರುವ ಅವರ ಮನೆಗೆ ಪ್ರಯಾಣಿಸುವಾಗ ಬೈಕ್‌ನಲ್ಲಿ ಇಂಧನ ಖಾಲಿಯಾಗಿದೆ. ಅವರ ಪ್ರಕಾರ ಫ್ಯೂಯಲ್ ಇಂಡಿಕೇಟರ್ ತಪ್ಪಾಗಿ ಕಾರ್ಯನಿರ್ವಹಿಸಿದ್ದ ಕಾರಣ ಈ ಯೆಡವಟ್ಟು ನಡೆದಿದೆ. ಇನ್ನು ಹತ್ತಿರದ ಪೆಟ್ರೋಲ್ ಪಂಪ್ 2.5 ಕಿ.ಮೀ ದೂರದಲ್ಲಿದ್ದ ಕಾರಣ ಬೇರೆ ದಾರಿಯಿಲ್ಲದೆ ಶ್ರವಣ್ ಅವರು ತಮ್ಮ ಬೈಕನ್ನು ತಳ್ಳಲು ಪ್ರಾರಂಭಿಸಿದರು.
ಉಸಿರುಗಟ್ಟುವ ಆಯಾಸದಲ್ಲಿ ಬೈಕ್ ಅನ್ನು ತಳ್ಳುತ್ತಿದ್ದ ಶ್ರವಣ್ ಅವರನ್ನು ಕಂಡು ಅದೇ ದಾರಿಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ನೋಡಿದ್ದಾನೆ. ವಿಪರೀತವಾಗಿ ಬೆವರುತ್ತಿದ್ದ ಶ್ರವಣ್ ಬಳಿ ಸ್ವಿಗ್ಗಿ ಡೆಲಿವರಿ ಬಾಯ್ ಬಂದು ಹೀಗಂದರಂತೆ... "ಭಯ್ಯಾ ಕ್ಯಾ ಹುವಾ ಹೈ?" ಸಂಪೂರ್ಣ ಪರಿಸ್ಥಿತಿಯನ್ನು ವಿವರಿಸಿದ ಶ್ರವಣ್‌ಗೆ ಪೆಟ್ರೋಲ್ ಬಂಕ್ ತಲುಪಲು ಸಹಾಯ ಮಾಡಲು ಮುಂದಾದನು. ತನ್ನ ಸ್ಪ್ಲೆಂಡರ್ ಬೈಕ್ ಬಳಸಿ ಶ್ರವಣ್ ಬೈಕನ್ನು ಟೋವ್ (ತಳ್ಳುವುದು) ಮಾಡಿದ್ದಾನೆ.
ದುರದೃಷ್ಟವಶಾತ್, ಹತ್ತಿರದ ಪೆಟ್ರೋಲ್ ಬಂಕ್ ತಲುಪಿದರಾದರೂ ಅದು ಮುಚ್ಚಿದ್ದರಿಂದ ದಿಕ್ಕು ತೋಚದಂತಾಗಿದೆ. ಈ ವೇಳೆ ಶ್ರವಣ್‌ಗೆ ಇನ್ನು ಬೇರೆ ದಾರಿಯಿಲ್ಲ, ಸ್ವಿಗ್ಗಿ ಯುವಕ ಕೂಡ ಇನ್ನು ಸಹಾಯ ಮಾಡೋದಿಲ್ಲ ಎಂದುಕೊಂಡು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿ 500 ನೀಡಿದ್ದರು. ಆದರೆ ಸ್ವಿಗ್ಗಿ ಬಾಯ್ ಅದನ್ನು ಸ್ವೀಕರಿಸದೇ, ಮನೆ ಹೇಗೆ ತಲುಪುತ್ತೀರಾ... ಬನ್ನಿ ಮತ್ತೊಂದು ಪೆಟ್ರೋಲ್ ಪಂಪ್ 3 ಕಿಮೀ ದೂರದಲ್ಲಿದೆ ಎಂದು ಅಲ್ಲಿಗೆ ಟೋವ್ ಮಾಡಿದ್ದಾನೆ.
ಅಂತಿಮವಾಗಿ ತನ್ನ ಟ್ಯಾಂಕ್‌ಗೆ ಇಂಧನ ತುಂಬಿದ ನಂತರ, ಶ್ರವಣ್ ನಿಟ್ಟುಸಿರು ಬಿಟ್ಟು ಸ್ವಿಗ್ಗಿ ಬಾಯ್‌ಗೆ ಮತ್ತೊಮ್ಮೆ ಟಿಪ್ ಅನ್ನು ನೀಡಿದರು. ಆದರೆ ಇದನ್ನು ಸ್ವೀಕರಿಸಿದ ಯುವಕ ಶ್ರವಣ್ ಅವರ ಮನಗೆಲ್ಲುವಂತಹ ಮಾತುಗಳನ್ನಾಡಿ ಅಲ್ಲಿಂದ ಹೊರಟಿದ್ದಾನೆ. '' ಸಾರ್ ಇಂದು ಈ ಸ್ಥಾನದಲ್ಲಿ ನೀವಿದ್ದೀರ, ನಾಳೆ ನನಗೂ ಈ ಪರಿಸ್ಥಿತಿ ಬರಬಹುದು... ನನಗೂ ಯಾರಾದರೂ ಸಹಾಯ ಮಾಡುತ್ತಾರೆ ಎಂದು ಹಣ ಸ್ವೀಕರಿಸದೇ ಅಲ್ಲಿಂದ ಹೊರಟಿದ್ದಾನೆ.
ಈ ಮಾತುಗಳು ಬೆಂಗಳೂರಿಗರ ಹೃದಯವನ್ನು ಮುಟ್ಟಿವೆ, ಬೆಂಗಳೂರು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ದೇಶದ ಹಲವು ಮಂದಿಯ ಮನಸನ್ನು ಕರಗಿಸಿವೆ. ಶ್ರವಣ್ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಈ ಹೃದಯಸ್ಪರ್ಶಿ ಘಟನೆಯನ್ನು ಎಕ್ಸ್‌ನಲ್ಲಿ ವಿವರಿಸಲು ಸ್ವಿಗ್ಗಿ ಯುವಕೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಲು ಸಾಲು ಪದಗಳನ್ನು ಯುವಕನ ಬಗ್ಗೆ ಬರೆದು ಹಂಚಿಕೊಂಡಿದ್ದಾರೆ.
ಅಲ್ಲದೆ, ಅವರು ಸ್ವಿಗ್ಗಿಯಲ್ಲಿ ಆಹಾರವನ್ನು ಆರ್ಡರ್ ಮಾಡಿದಾಗ ಪ್ರತಿ ಬಾರಿ ಸ್ವಿಗ್ಗಿ ಏಜೆಂಟ್‌ಗಳಿಗೆ ಸಲಹೆ ನೀಡುವುದಾಗಿ ಭರವಸೆ ನೀಡಿದರು. ಗದ್ದಲದ ಮಧ್ಯೆ, ಅವರು ಯುವಕನ ಹೆಸರನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ತನಗಾಗಿ ಯುವಕನನ್ನು ಗುರುತಿಸಲು ಸ್ವಿಗ್ಗಿಗೆ ವಿನಂತಿಸಿದರು. ಈ ಮೂಲಕ ಶ್ರವಣ್ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications