BMTC Bus: ಬಿಎಂಟಿಸಿ ಡೀಸೆಲ್ ಬಸ್‌ಗಳು ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿವೆ?
ಭಾರತದಲ್ಲಿ ಪರಿಸರವನ್ನು ಸಂರಕ್ಷಿಸಲು ಪ್ರತಿಯೊಂದು ರಾಜ್ಯವು ಶೂನ್ಯ ಹೊರಸೂಸುವಿಕೆ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿವೆ. ಅದಕ್ಕೆ ಕರ್ನಾಟಕವು ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ (BMTC) ಡೀಸೆಲ್ ಬಸ್‌ಗಳನ್ನು ಎಲೆಕ್ಟ್ರಿಕ್ ರೂಪದಲ್ಲಿ ರಸ್ತೆಗಿಳಿಸಲು ಯೋಜಿಸುತ್ತಿದೆ.
ಡೀಸೆಲ್ ಚಾಲಿತ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್‌ಗಳನ್ನು ಎಲೆಕ್ಟ್ರಿಕ್ (ಇವಿ) ಬಸ್‌ಗಳಾಗಿ ಪರಿವರ್ತಿಸಲು ತೈವಾನ್ ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ಆಸಕ್ತಿ ತೋರಿಸಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ವಿವಿಧ ಕೈಗಾರಿಕೆಗಳ ಸಹಯೋಗದ ಕುರಿತಂತೆ ಚರ್ಚಿಸಲು ತೈವಾನ್‌ನ 50ಕ್ಕೂ ಹೆಚ್ಚಿನ ಹೂಡಿಕೆದಾರರ ನಿಯೋಗ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಿತ್ತು.

ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಡೀಸೆಲ್ ಚಾಲಿತ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸಿದರೆ, ಅದು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಸಂಬಂಧ ಸಾರಿಗೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು. ತೈವಾನ್ ಮೂಲದ ಕಂಪನಿಗಳು ಡೀಸೆಲ್ ವಾಹನಗಳನ್ನು ಇವಿಗಳಾಗಿ ಪರಿವರ್ತಿಸುವಲ್ಲಿ ಸಾಕಷ್ಟು ಪ್ರಾವೀಣ್ಯತೆಯನ್ನು ಹೊಂದಿವೆ. ಇಂದಿನ ದಿನಗಳಲ್ಲಿ ಅಂತಹ ತಂತ್ರಜ್ಞಾನ ತುಂಬಾ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ತೈವಾನ್ ಕಂಪನಿಗಳು ಕರ್ನಾಟಕದಲ್ಲಿ ಮಷಿನ್ ಟೂಲ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM), ಆಟೋಮೋಟಿವ್ ಮತ್ತು ಆಟೋ ಕಾಪೊನೆಟ್ಸ್, ಶುದ್ಧ ಇಂಧನ ಉತ್ಪಾದನೆ (clean energy production) ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಹೊಡಿಕೆ ಮಾಡಲು ಮುಂದಾಗಿವೆ ಎಂದು ಸಚಿವ ಎಂ.ಬಿ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಡೀಸೆಲ್ ಚಾಲಿತ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುವುದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಹಣ ಉಳಿತಾಯವಾಗುತ್ತದೆ. ತಜ್ಞರ ಪ್ರಕಾರ, ಹೊಸ ಎಲೆಕ್ಟ್ರಿಕ್ ಬಸ್‌ಗೆ ಆಗುವ ವೆಚ್ಚಕ್ಕೆ ಹೋಲಿಸಿದರೆ, ಈ ರೀತಿಯಾಗಿ ಡೀಸೆಲ್ ಚಾಲಿತ ಬಸ್‌ಗಳನ್ನು ಪರಿವರ್ತಿಸುವುದರಿಂದ ಖರ್ಚು ತುಂಬಾ ಕಡಿಮೆಯಾಗಲಿದ್ದು, ರಾಜ್ಯ ಸರ್ಕಾರ ಮುಂದಿಟ್ಟರುವ ಹೆಜ್ಜೆ ಶ್ಲಾಘನೀಯ ಎಂದಿದ್ದಾರೆ.
ಇನ್ನು, ರಾಜ್ಯದ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಜಾರಿಗೊಳಿಸಿರುವ ಸರ್ಕಾರ, ನಾಲ್ಕು ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಗಳನ್ನು ಉನ್ನತೀಕರಣಗೊಳಿಸಲು ತೀರ್ಮಾನಿಸಿದೆ. ಅದರ ಭಾಗವಾಗಿ ಹೊಸ ಸಿಬ್ಬಂದಿ ನೇಮಕ ಹಾಗೂ ನೂತನ ಬಸ್‌ಗಳನ್ನು ಖರೀದಿಸಲು ಮುಂದಾಗಿದೆ.

ನಾಲ್ಕು ನಿಗಮಗಳಿಂದ ಒಟ್ಟು 13,000 ಅಧಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು. ಜೊತೆಗೆ 1,324 ಡಿಸೇಲ್ ಚಾಲಿತ ಮತ್ತು ಎಲೆಕ್ಟ್ರಿಕ್ ಬಸ್ ಕೊಂಡುಕೊಳ್ಳಲು ಅಥವಾ ಇತರೆ ಸಂಸ್ಥೆಗಳ ಮೂಲಕ ಒಪ್ಪಂದದ ಮೂಲಕ ಪಡೆಯಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾರಿಗೆ ಇಲಾಖೆ ಆದಾಯ ಹೆಚ್ಚಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications