ಟಾಟಾ ನ್ಯಾನೋದಲ್ಲಿ ನಟ ದರ್ಶನ್: ಕೋಟಿ ಬೆಲೆಯ ಕಾರುಗಳಿದ್ದರೂ..! ವಿಡಿಯೋ ನೋಡಿ
ಕನ್ನಡದ ಪ್ರಖ್ಯಾತ ನಟ ದರ್ಶನ್, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾದ ಅಭಿನಯ ಮಾತ್ರವಲ್ಲದೆ, ಬೈಕ್, ಕಾರಿನ ಮೇಲಿನ ಕ್ರೇಜ್‌ನಿಂದಲ್ಲೂ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ತಮ್ಮಲ್ಲಿ ಕೋಟಿ - ಕೋಟಿ ಬೆಲೆಬಾಳುವ ಐಷಾರಾಮಿ ಕಾರುಗಳಿದ್ದರೂ ಜನ ಸಾಮಾನ್ಯರ ಟಾಟಾ ನ್ಯಾನೋ ಕಾರನ್ನು ಓಡಿಸಿ, ಖುಷಿಪಟ್ಟಿದ್ದಾರೆ.
ಆ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಕಳೆದ ತಿಂಗಳು, ದರ್ಶನ್ (Darshan) ತಮ್ಮ ಸ್ನೇಹಿತರೊಂದಿಗೆ ವಿರಾಜಪೇಟೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿನ ವಿವಿಧೆಡೆ ಬೆಟ್ಟ, - ಗುಡ್ಡ, ಹಳ್ಳ - ದಿಣ್ಣೆ, ಉಬ್ಬು - ತಗ್ಗಿನ ರಸ್ತೆಗಳಲ್ಲಿ ಕಾರು, ಜೀಪ್ ಓಡಿಸಿ ಸಖತ್ ಎಂಜಾಯ್ ಮಾಡಿದ್ದರು. ಕಾಡಿನ ನಡುವೆ ಟೆಂಟ್ ಹಾಕಿ, ಮಗ ವಿನೀಶ್ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆದಿದ್ದರು.

ರಾಜ್ಯ ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿರುವ ನಟ ದರ್ಶನ್, ಕಾಡಿನ ರಕ್ಷಣೆ ಕುರಿತ ಅರಿವು ಮೂಡಿಸಲು ವಿರಾಜಪೇಟೆ ಪ್ರವಾಸಕ್ಕೆ ತೆರಳಿದ್ದರಂತೆ. ಈ ವೇಳೆ, ಜೀಪ್ ಮಾತ್ರವಲ್ಲದೆ, ಜನಸಾಮಾನ್ಯರ ಹಳದಿ ಬಣ್ಣದ ಟಾಟಾ ನ್ಯಾನೋ (Tata Nano) ಓಡಿಸಿ, ಎಲ್ಲರ ಗಮನ ಸೆಳೆದಿದ್ದರು. ಕೋಟಿ ಬೆಲೆಯ ಲ್ಯಾಂಡ್ ರೋವರ್ ಸೇರಿದಂತೆ ಐಷಾರಾಮಿ ಕಾರುಗಳ ಮಾಲೀಕರಾಗಿರುವ ದರ್ಶನ್, ಪುಟ್ಟ ನ್ಯಾನೋ ಕಾರು ಡ್ರೈವ್ ಮಾಡಿರುವುದನ್ನು ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ, ಬೆಂಗಳೂರಿನ ಐಷಾರಾಮಿ ಹೋಟೆಲ್ ಹೊರಭಾಗದಲ್ಲಿ ನೀಲಿ ಬಣ್ಣದ ಜಾಗ್ವಾರ್ ಎಕ್ಸ್‌ಕೆಆರ್ ಎಸ್ ಸ್ಪೋರ್ಟ್ಸ್ ಕೂಪ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಪತ್ನಿಯೊಂದಿಗೆ ಪಾರ್ಟಿಯೊಂದರ ನಿಮಿತ್ತ ಹೋಟೆಲ್ ವೊಂದಕ್ಕೆ ತೆರಳಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಕಾರು, ಸರಿ ಸುಮಾರು 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಬೆಲೆಯನ್ನು ಹೊಂದಿದೆ.

ಇದಿಷ್ಟೇ ಅಲ್ಲದೆ ನಟ ದರ್ಶನ್ ಅವರು ಲ್ಯಾಂಡ್ ರೋವರ್ ಡಿಫೆಂಡರ್, ಆಡಿ ಕ್ಯೂ 7, ಫೋರ್ಡ್ ಮಸ್ಟಾಂಗ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಪೋರ್ಷೆ ಕಯೆನ್ನೆ, ಟೊಯೊಟಾ ವೆಲ್‌ಫೈರ್, ಮಿನಿ ಕೂಪರ್ ಕಂಟ್ರಿಮ್ಯಾನ್, ಟೊಯೊಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂಡಬ್ಲ್ಯೂ ಒಳಗೊಂಡಂತೆ ಅನೇಕ ಕಾರುಗಳ ಮಾಲೀಕರಾಗಿದ್ದಾರೆ.
ದರ್ಶನ್, ಅಭಿನಯದ 'ಕಾಟೇರ' ಸಿನಿಮಾ ದಸರಾ ವೇಳೆಗೆ ಚಿತ್ರಮಂದಿರಗಳಿಗೆ ಬರಲಿದ್ದು, ಅಭಿಮಾನಿಗಳು ಸಾಕಷ್ಟು ನೀರಿಕ್ಷೆಯೊಂದಿಗೆ ಕಾಯುತ್ತಿದ್ದಾರೆ. 1974ರಲ್ಲಿ ನಡೆದ ಹಳ್ಳಿಯೊಂದರನ್ನು ನೈಜ ಘಟನೆಯ ಕಥೆಯನ್ನು ಈ ಸಿನಿಮಾ ಆಧರಿಸಿದ್ದು, ತುರಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ, ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ದರ್ಶನ್ ಅವರ ಲುಕ್ ಎಲ್ಲರನ್ನು ಆಕರ್ಷಿಸುತ್ತಿದೆ.
ಇನ್ನು, ಪ್ರಖ್ಯಾತ ಉದ್ಯಮಿ ರತನ್ ಟಾಟಾ ಅವರು, ದೇಶದ ಮಧ್ಯಮ ವರ್ಗದ ಜನರಿಗಾಗಿ 2008ರಲ್ಲಿ ಇಂಧನ ಚಾಲಿತ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿದ್ದರು. ಇದು, ಪ್ರಪಂಚದಲ್ಲಿಯೇ ಕಡಿಮೆ ಬೆಲೆಗೆ ದೊರೆಯುವ ಕಾರೆಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ, ಕಂಪನಿ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ. ತೀವ್ರ ಮಾರಾಟ ಕುಸಿತವಾದ ಹಿನ್ನೆಲೆ, 2018ರಲ್ಲಿ ಇದರ ಸೇಲ್ಸ್ ಸ್ಥಗಿತಗೊಳಿಸಲಾಯಿತ್ತು.
ಈಗಲೂ ಟಾಟಾ ನ್ಯಾನೋ, ಹಲವು ಜನರ ಫೆವರೇಟ್ ಆಗಿದೆ. ಕಂಪನಿಯು ಎಲೆಕ್ಟ್ರಿಕ್ ರೂಪದಲ್ಲಿ ನ್ಯಾನೋವನ್ನು ಲಾಂಚ್ ಮಾಡುತ್ತದೆ ಎಂದು ಸಾಕಷ್ಟು ಬಾರಿ ವಿವಿಧ ಮಾಧ್ಯಮಗಳು ವರದಿ ಮಾಡುತ್ತವೆ. ಆದರೆ, ಟಾಟಾ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದೊಮ್ಮೆ ನ್ಯಾನೋ ಇವಿ ಅವತಾರದಲ್ಲಿ ಬಂದರೆ, ಇದು ಅಗ್ಗದ ದರದಲ್ಲಿ ಖರೀದಿಗೆ ದೊರೆತು, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡುವುದು ಗ್ಯಾರಂಟಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications