ಹೆಚ್‌ಪಿಸಿಎಲ್ ಪೆಟ್ರೋಲ್ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಟಾಟಾ ಪವರ್
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವಂತೆ ವಾಹನ ಸವಾರರು ಕೇಂದ್ರ, ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ತೆರಿಗೆಗಳಿಂದ ದೊರೆಯುವ ಆದಾಯವನ್ನು ಕಳೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧರಿಲ್ಲದಿರುವುದು ಇದಕ್ಕೆ ಕಾರಣ. ಸಾಕಷ್ಟು ಜನ ವಾಹನ ಸವಾರರು ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾಲನೆ ಮಾಡುವ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿಯ ಬಗ್ಗೆ ಹೊಂದಿರುವ ಭಯದಿಂದಾಗಿ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಖರೀದಿಸುತ್ತಿದ್ದಾರೆ.

ಟಾಟಾ ಪವರ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿಯ ಬಗ್ಗೆ ಇರುವ ಭಯದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುವವರಿಗೆ ಸಿಹಿ ಸುದ್ದಿ ನೀಡುತ್ತಿದೆ.

ಟಾಟಾ ಪವರ್ ಕಂಪನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಹೆಚ್‌ಪಿಸಿಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಟಾಟಾ ಪವರ್, ಹೆಚ್‌ಪಿಸಿಎಲ್ ಪೆಟ್ರೋಲ್ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ.

ಭಾರತದ ವಿವಿಧ ನಗರಗಳು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿರುವ ಹೆಚ್‌ಪಿಸಿಎಲ್ ಪೆಟ್ರೋಲ್ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನುತೆರೆಯಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಟಾಟಾ ಪವರ್ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದೆ. ಟಾಟಾ ಪವರ್ ಇದುವರೆಗೂ 100 ಕ್ಕೂ ಹೆಚ್ಚು ನಗರಗಳಲ್ಲಿ 500 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ.

ಟಾಟಾ ಪವರ್, ಮೆಟ್ರೋ ನಿಲ್ದಾಣ, ಶಾಪಿಂಗ್ ಮಾಲ್, ಸಿನಿಮಾ ಹಾಲ್, ಹೆದ್ದಾರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ. ಈಗ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್'ನೊಂದಿಗೆ ಒಪ್ಪಂದ ಮಾಡಿ ಕೊಂಡಿದೆ.

ಈ ಒಪ್ಪಂದದ ಪ್ರಕಾರ ಟಾಟಾ ಪವರ್, ಹೆಚ್‌ಪಿಸಿಎಲ್ ಪೆಟ್ರೋಲ್ ಬಂಕ್‌ಗಳಲ್ಲಿ ಅತ್ಯಾಧುನಿಕ ಚಾರ್ಜಿಂಗ್ ಮೂಲ ಸೌಕರ್ಯವನ್ನು ಒದಗಿಸಲಿದೆ. ಈ ಚಾರ್ಜಿಂಗ್ ಸೌಲಭ್ಯವು ನಗರಗಳ ಒಳಗೆ ಹಾಗೂ ಹೊರಗೆ ಪ್ರಯಾಣಿಸುವ ಎಲೆಕ್ಟ್ರಿಕ್ ವಾಹನ ಸವಾರರಿಗೆ ಉಪಯುಕ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಬೇಕಾದರೆ, ಚಾರ್ಜಿಂಗ್ ಸ್ಟೇಷನ್ ಮೂಲ ಸೌಕರ್ಯವನ್ನು ಹೆಚ್ಚಿಸಬೇಕಾಗಿದೆ. ಆಗ ಮಾತ್ರ ಜನರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಮುಂದಾಗುತ್ತಾರೆ.

ಟಾಟಾ ಪವರ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ನಡುವಿನ ಸಹಭಾಗಿತ್ವವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಇವುಗಳಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಸಹ ಸೇರಿದೆ. ಟಾಟಾ ಪವರ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಹಭಾಗಿತ್ವವು ಸಹ ಸರ್ಕಾರಗಳ ಕ್ರಮಗಳನ್ನು ಬೆಂಬಲಿಸಲಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications