ಟಾಟಾ ಪಂಚ್ ಗುದ್ದಿ ಉರುಳಿದ ಟ್ರಕ್: ಪ್ರಾಣ ಉಳಿಸಿದ ಕಾರಿನ ಗುಣಮಟ್ಟವನ್ನು ಶ್ಲಾಘಿಸಿದ ಮಾಲೀಕ
ದೇಶದ ರಸ್ತೆಗಳಲ್ಲಿ ನಾನಾ ಕಾರಣಗಳಿಗೆ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತವೆ. ಇಂತಹ ಘಟನೆಗಳಲ್ಲಿ ಬಹುತೇಕ ದೊಡ್ಡ ವಾಹನಗಳ ಚಾಲಕರ ಮೇಲೆ ತಪ್ಪನ್ನು ಹೊರಿಸಲಾಗುತ್ತದೆ. ಆದರೆ, ಯಾವಾಗಲೂ ಇವರೇ ಅಪಘಾತಕ್ಕೆ ಕಾರಣವಾಗುವುದಿಲ್ಲ. ಕೆಲದಿನಗಳ ಹಿಂದೆ ಆ ರೀತಿಯ ಘಟನೆಯೊಂದು ನಡೆದಿದ್ದು, ಟಾಟಾ ಪಂಚ್ ಟ್ರಕ್ ವೊಂದಕ್ಕೆ ಡಿಕ್ಕಿಯೊಡೆದಿದೆ.
ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿ ಆಂಧ್ರ ಪ್ರದೇಶ ಹೆದ್ದಾರಿಯೊಂದರಲ್ಲಿ ಮರಳು ತುಂಬಿದ ಟಿಪ್ಪರ್‌ಗೆ ಗುದ್ದಿರುವ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸಂಪೂರ್ಣ ಅಪಘಾತದ ದೃಶ್ಯಗಳು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟಾಟಾ ಪಂಚ್ ಎಸ್‌ಯುವಿ ಮಾಲೀಕ ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳುತ್ತಿದ್ದಾಗ ಈ ಅಪಘಾತ ಜರುಗಿದೆ ಎಂದು ವರದಿಯಾಗಿದೆ.

'ಹೆದ್ದಾರಿಯಲ್ಲಿ ಹೋಗಬೇಕಾದರೆ ಮೂರು ದಾರಿಗಳು ಕೂಡುವ ಜಂಕ್ಷನ್ (Three - Way Junction) ಬರುತ್ತದೆ. ಅಲ್ಲಿ ಮರಳು ಟಿಪ್ಪರ್ ಲಾರಿಯೊಂದು ಸಾಗುತ್ತಿರುತ್ತದೆ. ಅದನ್ನು ನೋಡಿ ಕಾರನ್ನು ನಿಲ್ಲಿಸಲಾಯಿತು. ಆದರೂ ಅಪಘಾತ ಸಂಭವಿಸಿತೆಂದು ಪಂಚ್ ಎಸ್‌ಯುವಿ ಮಾಲೀಕ ತಿಳಿಸಿದ್ದಾರೆ' ಎಂದು ಹೇಳಲಾಗಿದೆ. ಜಂಕ್ಷನ್‌ನಲ್ಲಿ ಕಾರನ್ನು ನಿಲ್ಲಿಸಲಾಯಿತು ಎಂದು ಮಾಲೀಕ ಹೇಳಿಕೊಂಡಿದ್ದರೂ, ಅವರು ಕಾರನ್ನು ನಿಲ್ಲಿಸದಿರುವುದು ಡ್ಯಾಶ್‌ಕ್ಯಾಮ್ ದೃಶ್ಯಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ಟ್ರಕ್ ಚಾಲಕ ಟಾಟಾ ಪಂಚ್ ಕಾರನ್ನು ನೋಡಿ, ಬ್ರೇಕ್ ಹಾಕಲು ಪ್ರಯತ್ನಪಟ್ಟರೂ ಪೂರ್ತಿ ಲೋಡ್ ಆಗಿದ್ದರಿಂದ ಟ್ರಕ್ ಅನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಡ್ಯಾಶ್‌ಕ್ಯಾಮ್ ದೃಶ್ಯಗಳಿಂದ ಈ ಅಪಘಾತ ಪಂಚ್ ಕಾರಿನ ಮಾಲೀಕನಿಂದ ನಡೆದಿದೆ ಎಂಬುದು ಗೊತ್ತಾಗುತ್ತದೆ. ಟ್ರಕ್ ಹಾದು ಹೋಗುವವರೆಗೂ ಕಾರು ಚಾಲಕನು ಕಾದಿದ್ದರೆ ಈ ಅಪಘಾತ ಸಂಭವಿಸುತ್ತಿರಲಿಲ್ಲ.

ಟಾಟಾ ಪಂಚ್ ಕಾರಿನ ಮಾಲೀಕ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಅವರಿಗೆ ಯಾವುದೇ ಗಾಯವಾಗಿಲ್ಲ ಆದರೆ, ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ಅವರ 5 ವರ್ಷದ ಪುತ್ರ ಸೀಟ್ ಬೆಲ್ಟ್ ಧರಿಸಿಲ್ಲದ ಕಾರಣ, ಡ್ಯಾಶ್‌ಬೋರ್ಡ್ ಮೇಲೆ ಬಿದಿದ್ದು, 3 ಹಲ್ಲುಗಳು ಮುರಿದಿವೆ. ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಅವರ ಪತ್ನಿಯ ಕುತ್ತಿಗೆಯ ಭಾಗಗಕ್ಕೆ ಗಾಯಗಳಾಗಿದ್ದು, 3 ವಾರಗಳ ನಂತರ ಚೇತರಿಸಿಕೊಂಡಿದ್ದಾರೆ.
ಅದೃಷ್ಟವಶಾತ್, ಟ್ರಕ್ ಚಾಲಕ ಕೂಡ ಗಂಭೀರವಾಗಿ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಪರಿ ಪ್ರಮಾಣದಲ್ಲಿ ಅಪಘಾತವಾದರೂ ಜೀವ ಉಳಿಸಿದ ಟಾಟಾ ಪಂಚ್ ಕಾರಿನ ನಿರ್ಮಾಣ ಗುಣಮಟ್ಟವನ್ನು ಅದರ ಮಾಲೀಕ ಶ್ಲಾಘಿಸಿದ್ದಾರೆ. ಟಾಟಾ ಪಂಚ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ರಕ್ಷಣೆ ವಿಭಾಗದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.

ಈ ಟಾಟಾ ಪಂಚ್ ಕಾರು ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಡಿಫಾಗರ್, ರೇರ್ ಪಾರ್ಕಿಂಗ್ ಸೆನ್ಸರ್, ರೇರ್ ಕ್ಯಾಮೆರಾ, ISOFIX ಆಂಕರ್ಸ್ ಸೇರಿದಂತೆ ಹತ್ತಾರು ಸೇಫ್ಟಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಾಟಾ ಪಂಚ್ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಜೊತೆಗೆ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 18.8 - 20.09 kmpl ಮೈಲೇಜ್ ನೀಡಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications