ಆಸೆ ತೋರಿಸಿ ಇಲ್ಲವೆಂದ Mahindra: ಟಾಟಾ, ಎಂಜಿ ಇವಿ ಬೆಲೆ ಕಮ್ಮಿ ಮಾಡಿದರೂ, ಜಗ್ಗದ ಮಹೀಂದ್ರಾ!
ಭಾರತೀಯ ಹೆಮ್ಮೆಯ ವಾಹನ ನಿರ್ಮಾಣ ಕಂಪನಿಯಾದ ಮಹೀಂದ್ರಾ, ಈಗಾಗಲೇ ಭಾರತೀಯ ವಾಹನ ಕ್ಷೇತ್ರದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ. ಕಾರು ಮಾರುಕಟ್ಟೆಯಲ್ಲಿ ಥಾರ್, ಎಕ್ಸ್‌ಯುವಿ ಯಂತಹ ವಾಹನಗಳನ್ನು ಗ್ರಾಹಕರ ಬಳಿ ತಲುಪಿಸಿ ದೊಡ್ಡ ದೊಡ್ಡ ಕಾರು ನಿರ್ಮಾಣ ಕಂಪನಿಗಳಿಗೆ ನೇರಾನೇರ ಪೈಪೋಟಿ ನೀಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ.
ಮಹೀಂದ್ರಾ ಕಾರು ಮಾದರಿಗಳಲ್ಲಿ XUV ಲೈನ್‌ಅಪ್ ತುಂಬಾನೇ ವಿಶೇಷವಾದುದು. ಅದರಲ್ಲೂ 2021 ರಲ್ಲಿ XUV 700 ಬಂದ ಮೇಲಂತೂ ಈ ಮಹೀಂದ್ರಾ ಕಂಪನಿಯ XUV ಲೈನ್ ಅಪ್ ತುಂಬಾನೇ ಪ್ರಸಿದ್ದವಾಗಿದೆ. ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗುತ್ತದೆ ಎಂದು ಈ ಹಿಂದೆಯೇ ಭವಿಷ್ಯ ಕಂಡಿದ್ದ ಮಹೀಂದ್ರಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಸಹ ಬಿಡುಗಡೆ ಮಾಡಿತ್ತು.

ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಕಾರಾದ XUV 400 ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಪ್ರಸಿದ್ದಿ ಪಡೆಯುತ್ತಿರುವ ಕಾರಾಗಿದೆ. ಕಳೆದ ಕೆಲವು ದಿನಗಳಿಂದ ಈ ಕಾರಿಗೆ ಭಾರತದಲ್ಲಿ ಕೊಂಚ ಬೆಲೆ ಕಮ್ಮಿಯಾಗಲಿದೆ ಎಂದು ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪ್ರಮುಖ ಕಾರಣ ಟಾಟಾ ಮತ್ತು ಎಂಜಿ ಕಾರು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರುಗಳಿಗೆ ಬೆಲೆಯನ್ನು ಕಡಿಮೆ ಮಾಡಿದ ಹಿನ್ನಲೆಯಲ್ಲಿ ಮಹೀಂದ್ರಾ ಕಾರುಗಳ ಬೆಲೆಯೂ ಸಹ ಇಳಿಕೆಯಾಗಲಿದೆ ಎಂಬ ಮಾತು ಕೇಳಿ ಬಂದಿತ್ತು.
ಮಹೀಂದ್ರಾ ಇದೀಗ ಈ ಕುರಿತಾಗಿ ಸ್ಪಷ್ಟಣೆ ನೀಡಿದ್ದು, ಕಂಪನಿಯು ಎಲೆಕ್ಟ್ರಿಕ್ ವಾಹನವಾದ ಮಹೀಂದ್ರಾ 400 ಎಲೆಕ್ಟ್ರಿಕ್‌ಗೆ ಬೆಲೆ ಕಡಿಮೆ ಮಾಡುತ್ತಿಲ್ಲ ಎಂದು ತಿಳಿಸಿದೆ. ಇತ್ತೀಚೆಗಷ್ಟೇ ಇದರ ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಎಂಜಿ ZS EV ಕಾರುಗಳ ಬೆಲೆ ಇತ್ತೀಚೆಗಷ್ಟೇ ಕಡಿಮೆಯಾಗಿತ್ತು. ಮಹೀಂದ್ರಾ ಮಹೀಂದ್ರಾ 400 ಎಲೆಕ್ಟ್ರಿಕ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ರೂ 15.49 ಲಕ್ಷ ರಿಂದ ರೂ 17.49 ಲಕ್ಷ ಎಕ್ಸ್ ಶೋ ರೂಮ್ ಬೆಲೆಗೆ ಲಭ್ಯವಾಗುತ್ತಿದೆ.

ಇನ್ನು XUV400 ಎಲೆಕ್ಟ್ರಿಕ್ ಹೊಸ ದಾಖಲೆಯನ್ನು ಈ ಹಿಂದೆ ನಿರ್ಮಿಸಿತ್ತು. 0 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿದ ಮೊದಲ ಎಲೆಕ್ಟ್ರಿಕ್ ವಾಹನವಾಗಿ ಗುರ್ತಿಸಿಕೊಂಡಿದೆ. ಹಿಮಾಚಲ ಪ್ರದೇಶದ ಕೈಲಾಂಗ್, ಲಾಹೌಲ್ ಸ್ಪಿಟಿಯಿಂದ ಪ್ರಾರಂಭವಾದ ಡ್ರೈವ್ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿತು. ಕಡಿದಾದ ಇಳಿಜಾರುಗಳಲ್ಲಿ XUV400 ಎಲೆಕ್ಟ್ರಿಕ್ SUV ಸಲೀಸಾಗಿ ಜಿಗ್ ಜಾಗ್ ಮಾಡುವುದನ್ನು ಹಲವರು ಕಂಡಿದ್ದಾರೆ.
ಈ ಮಹೀಂದ್ರಾ XUV400 ಕುರಿತಾಗಿನ ಇನ್ನಿತರ ವಿಷಯಗಳನ್ನು ನೋಡುವುದಾದರೆ, 112 Ah ಸಾಮರ್ಥ್ಯದ ರೇಟಿಂಗ್ ಹೊಂದಿರುವ 39.4 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ವಾಹನ ಸಾಮರ್ಥ್ಯವನ್ನು ಸಾಭೀತುಪಡಿಸಿದೆ. ಬ್ಯಾಟರಿ ಪ್ಯಾಕ್ ನಿಕಲ್, ಮ್ಯಾಂಗನೀಸ್ ಮತ್ತು ಕೋಬಾಲ್ಟ್ ಎಲೆಕ್ಟ್ರೋ-ಕೆಮಿಕಲ್ ಸಂಯೋಜನೆಯನ್ನು ಹೊಂದಿದೆ.

ಒಟ್ಟು ವಾಹನದ ತೂಕವು 1,960 ಕೆ.ಜಿ ಇದ್ದು, ಅದರಲ್ಲಿ ಬ್ಯಾಟರಿ ಪ್ಯಾಕ್ ಸ್ವತಃ 309 ಕೆ.ಜಿ ತೂಗುತ್ತದೆ. XUV400 ನಲ್ಲಿ 8.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಸಾಧಿಸಬಹುದು. ಇದು ಐಷಾರಾಮಿ ಅಲ್ಲದ ವಿಭಾಗವನ್ನು ಹೊರತುಪಡಿಸಿ, ಭಾರತದಲ್ಲಿ ಉತ್ಪಾದಿಸಲಾಗುವ ಅತ್ಯಂತ ವೇಗದ ಎಲೆಕ್ಟ್ರಿಕ್ ಪ್ರಯಾಣಿಕ ವಾಹನವಾಗಿದೆ. XUV400 ಇವಿ 150 kmph ಗರಿಷ್ಠ ವೇಗವನ್ನು ಹೊಂದಿದೆ. ಈ ವೇಗವು ಪ್ರಯಾಣಿಕರು ಹಾಗೂ ಲಗ್ಗೇಜ್ ಅನ್ನು ಒಳಗೊಂಡಿರುವ ವೇಗವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications