ಅಪ್ರಾಪ್ತನಿಂದ ವಾಹನ ಚಾಲನೆ: ಹೆತ್ತವರನ್ನು ಮೂರು ವರ್ಷ ಜೈಲಿಗಟ್ಟಿದ ಪೊಲೀಸರು
ಭಾರತದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧವಾದರೂ, ನಮ್ಮಲ್ಲಿ ಅದು ತೀರಾ ಸಾಮಾನ್ಯವಾದ ವಿಚಾರ. ದಿನಾ ಬೆಳಗಾದರೆ ಹಲವಾರು ಅಪ್ರಾಪ್ತ ವಯಸ್ಸಿನವರು ಲೈಸನ್ಸ್ ಅಥವಾ ಪರವಾನಿಗೆ ಇಲ್ಲದೆಯೇ ಸ್ಕೂಟರ್, ಕಾರು ಮತ್ತು ಬೈಕುಗಳನ್ನು ಚಲಾಯಿಸುವುದನ್ನು ನೋಡುತ್ತಿದ್ದೇವೆ. ಹಲವು ಬಾರಿ ಇವರು ಪೊಲೀಸರಿಗೆ ಸಿಕ್ಕಿ ಬಿದ್ದಾಗಲೂ ಪೊಲೀಸರು ಬುದ್ದಿ ಹೇಳಿ ಕಳುಹಿಸುತ್ತಾರೆ.
ಆದರೆ ಇಲ್ಲೊಂದು ಕಡೆ ವಾಹನ ಚಲಾವಣಾ ಪರವಾನಿಗೆ ಇಲ್ಲದೆ ಅಪ್ರಾಪ್ತನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪೋಷಕರಿಗೆ 3 ವರ್ಷಗಳ ಕಾಲ ಸೆರೆಮನೆ ವಾಸಕ್ಕೆ ಕಳುಹಿಸಿರುವ ಅಪರೂಪದ ಘಟನೆ ಪುದುಚ್ಚೇರಿಯಲ್ಲಿ ನಡೆದಿದೆ. ಮಾತ್ರವಲ್ಲದೇ ಆ ಪೋಷಕರಿಗೆ ಸುಮಾರು 25000 ರೂಪಾಯಿಗಳ ಹೆಚ್ಚುವರಿ ದಂಡವನ್ನೂ ವಿಧಿಸಲಾಗಿದೆ. ವಾಹನ ಚಲಾವಣಾ ಪರವಾನಿಗೆ ಇಲ್ಲದೇ ಮಕ್ಕಳಿಗೆ ತಮ್ಮ ವಾಹನಗಳನ್ನು ಚಲಾಯಿಸಲು ಅವಕಾಶ ನೀಡುವ ಪೋಷಕರಿಗೆ ಇದೊಂದು ಪಾಠದ ಜೊತೆಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ.

ವರದಿಗಳ ಪ್ರಕಾರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತನ ಪೋಷಕರನ್ನು ಈಗಾಗಲೇ ಜೈಲಿಗಟ್ಟಲಾಗಿದೆ ಎಂದು ಪುದುಚ್ಚೇರಿ ಸಾರಿಗೆ ಇಲಾಖೆಯು ಖಚಿತಪಡಿಸಿದೆ. ಇನ್ನು ಅಪ್ರಾಪ್ತ ಮಕ್ಕಳು ರಸ್ತೆಯಲ್ಲಿ ವಾಹನವನ್ನು ಚಲಾಯಿಸುವುದು ನಿಜಕ್ಕೂ ಅಪಾಯಕಾರಿ. ಜೊತೆಗೆ ಇದೇನಾದರೂ ಪೊಲೀಸರ ಗಮನಕ್ಕೆ ಬಂದರೆ ಅಂತಹ ವ್ಯಕ್ತಿಗಳ ಮೇಲೆ ಕೂಡಲೇ ಕೇಸ್ ದಾಖಲಿಸಬಹುದಾಗಿದೆ. ಕಾರಣ ಅಪ್ರಾಪ್ತರಿಗೆ ವಾಹನವನ್ನು ಚಲಾಯಿಸುವ ಅವಕಾಶ ಭಾರತದಲ್ಲಿಲ್ಲ. ಅದರಲ್ಲೂ ವಾಹನ ಅಪಘಾತಕ್ಕೇನಾದರೂ ಒಳಗಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಇನ್ನು ಅಪ್ರಾಪ್ತರು ವಾಹನ ಚಲಾಯಿಸುವುದರ ಕುರಿತಾಗಿ ಈ ಹಿಂದೆಯೇ ಎಲ್ಲಾ ರಾಜ್ಯಗಳಲ್ಲೂ ಹೆತ್ತವರಿಗೆ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ಹೆತ್ತವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿಯೇ ಎಲ್ಲೆಲ್ಲಿ ಪೊಲೀಸರು ಅಪ್ರಾಪ್ತರು ವಾಹನ ಚಲಾಯಿವುದನ್ನು ನೋಡಿದರೂ ಕೂಡಲೇ ಅಪರಾಧ ದಾಖಲಿಸುತ್ತಿದ್ದಾರೆ. ಹಾಗಾಗಿ ಇನ್ನಾದರೂ ಪೋಷಕರು ಇದರ ಕುರಿತಾಗಿ ಗಮನ ಹರಿಸದೇ ಇದ್ದಲ್ಲಿ ಅಂತಹ ವ್ಯಕ್ತಿಗಳು ಪೊಲೀಸರಿಂದ ಸಂಕಷ್ಟಕ್ಕೆ ಒಳಗಾಗುವುದಂತೂ ಖಂಡಿತ.

ಭಾರತದಲ್ಲಿ ವಾಹನ ಚಲಾವಣಾ ಪರವಾನಿಗೆ ಪಡೆಯಲು ಕನಿಷ್ಟ ವಯಸ್ಸಿನ ಮಿತಿ ಸುಮಾರು 18 ವರ್ಷ ವಯಸ್ಸು. ಅದಕ್ಕೂ ಮುಂಚಿತವಾಗಿ ಬೇಕಾದರೆ ಖಾಸಗಿ ಸ್ಥಳಗಳಲ್ಲಿ ಅಥವಾ ರೇಸ್ ಟ್ರ್ಯಾಕ್‌ಗಲಲ್ಲಿ ವಾಹನ ಚಲಾವಣೆ ಅಭ್ಯಾಸ ಮಾಡಬಹುದಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ವಾಹನ ಚಲಾವಣೆಗೆ ಅವಕಾಶವಿಲ್ಲ. ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ, ಈ ಹಿಂದೆಯೂ ಇದೇ ರೀತಿ 2022 ರಲ್ಲಿ ದಾಖಲಾದ ಪ್ರಕರಣವೊಂದು ವೈರಲ್ ಆಗಿತ್ತು.
ಈ ಪ್ರಕರಣದಲ್ಲಿ ಕೇವಲ 12 ವರ್ಷದ ಅಪ್ರಾಪ್ತ ಬಾಲಕಿ ಟೋಯೋಟಾ ಫಾರ್ಚ್ಯುನರ್ ಕಾರನ್ನು ಚಲಾವಣೆ ಮಾಡಿಕೊಂಡು ಹೋಗುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. 2020 ರಲ್ಲಿ ರೆಕಾರ್ಡ್ ಮಾಡಲಾಗಿದ್ದ ವಿಡಿಯೋವಾಗಿದ್ದು, ಇದು ಇಂಟರ್‌ನೆಟ್‌ನಲ್ಲಿ ವಿಡಿಯೋ ಭಾರೀ ವೈರಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಆ ಬಾಲಕಿ ವಾಹನ ಚಲಾಯಿಸುತ್ತಿದ್ದು, ವಕೀಲರಾಗಿದ್ದ ಆಕೆಯ ತಂದೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಮಜಲ್‌ಗಾನ್ ನಿವಾಸಿಯಾದ ಗಣೇಶ್ ಚಿರ್ಕೆ ಎಂಬ ವ್ಯಕ್ತಿ ಪೋಸ್ಟ್ ಮಾಡಿದ್ದರು.
ಇನ್ನು ವರದಿಯ ಪ್ರಕಾರ ಗಣೇಶ್ ಚಿರ್ಕಿ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಮಾತ್ರವಲ್ಲದೇ, ಮುಂಬೈನ ಹಲವು ಪೊಲೀಸ್ ಅಧಿಕಾರಿಗಳನ್ನು ಸಹ ಟ್ಯಾಗ್ ಮಾಡಿದ್ದರು ಎಂದು ತಿಳಿದು ಬಂದಿದೆ. ಜೊತೆಗೆ ಅಪ್ರಾಪ್ತ ಮಗಳನ್ನು ಕಾರು ಚಲಾವಣೆ ಮಾಡಲು ಅವಕಾಶ ನೀಡಿ ಕಾನೂನನ್ನು ಉಲ್ಲಂಘಿಸಿದಕ್ಕಾಗಿ ಈತನ ಮೇಲೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈತನ ಪೋಸ್ಟ್‌ಗೆ ನೆಟ್ಟಿಗರು ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರ ಜೊತೆಗೆ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದರು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಏನೇ ಆದರೂ ಅಪ್ರಾಪ್ತರು ವಾಹನ ಚಲಾವಣೆ ಮಾಡುವುದು ದಂಡನಾರ್ಹ ಅಪರಾಧ. ಯಾವುದಾದರೂ ವ್ಯಕ್ತಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸುತ್ತಮುತ್ತ ಈ ರೀತಿಯಾದ ಹಲವಾರು ಘಟನೆಗಳನ್ನು ಪ್ರತಿದಿನ ನೋಡುತ್ತಿರುತ್ತೇವೆ, ಆದರೆ ಆ ಕುರಿತಾಗಿ ಪೊಲೀಸರಲ್ಲಿ ವರದಿ ಮಾಡುವುದು ತೀರಾ ಕಡಿಮೆಯೇ. ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಅವರ ಪ್ರಾಣದ ಜೊತೆಗೆ ಇತರರ ಪ್ರಾಣಕ್ಕೂ ಕಂಟಕರಾಗುತ್ತಾರೆ ಎಂದರೆ ತಪ್ಪಾಗಲಾರದು.


Click it and Unblock the Notifications