Vande Bharat: ಮೊದಲೇ ಟಿಕೆಟ್ ಇಲ್ಲ, ಶೌಚಾಲಯದಲ್ಲಿ ಧಮ್ ಹೊಡೆದ.. ಏನು ಅರಿಯದ ಪ್ರಯಾಣಿಕರಿಗೆ ಟೆನ್ಷನ್
ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಮತ್ತೆ ಸುದ್ದಿಯಾಗಿದೆ. ಈ ಬಾರಿ ಅದರ ಪ್ರಯಾಣದ ಸಮಯ, ಕಲ್ಲಿನ ದಾಳಿ ಅಥವಾ ಜಾನುವಾರುಗಳಿಗೆ ಡಿಕ್ಕಿ ಹೊಡೆದಲ್ಲ. ಅದು ಬೇರೆಯದ್ದೇ ರೀತಿ.. ಟಿಕೆಟ್ ಇಲ್ಲದೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ಎಡವಟ್ಟು ಮಾಡಿದ್ದು, ಇಡೀ ರೈಲಿನ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಷ್ಟೇ ಗುಡೂರು ದಾಟಿತ್ತು. ಇನ್ನೂ ಕೆಲವೇ ಗಂಟೆಗಳಲ್ಲಿ ಆ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು, ತನ್ನ ಮನೆಗಳನ್ನು ಸೇರಿಕೊಳ್ಳುವ ಧಾವಂತದಲ್ಲಿ ಇದ್ದರು. ಆದರೆ, ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಸಿಗರೇಟ್ ಸೇದಿ.. ಕ್ಷಣಕಾಲ ರೈಲಿನ ಇತರೆ ಪ್ರಯಾಣಿಕರಲ್ಲಿ ಗಾಬರಿ ಹುಟ್ಟಿಸಿದ್ದು, ಮಾಡಿದ ತಪ್ಪಿಗೆ ಪೊಲೀಸರ ಅಥಿತಿಯಾಗಿದ್ದಾನೆ.

ಟಿಕೆಟ್ ಇಲ್ಲದೆಯೇ ವ್ಯಕ್ತಿಯೊಬ್ಬ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದು, ಸುಮ್ಮನೆ ಶೌಚಾಲಯದ ಬಾಗಿಲನ್ನು ಹಾಕಿಕೊಂಡು ಪ್ರಯಾಣಿಸಿದ್ದರೇ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲವೇನೋ.. ಆದರೆ, ಆ ವ್ಯಕ್ತಿ ಅಲ್ಲಿಯೇ ಸಿಗರೇಟ್ ಸೆದ್ದಿದ್ದಾನೆ. ತಕ್ಷಣವೇ ಫೈರ್ ಅಲಾರಾಂ ಶಬ್ದ ಮಾಡಲು ಶುರು ಮಾಡಿದೆ. ಸ್ವಯಂಚಾಲಿತ ಅಗ್ನಿನೀರೋಧಕ ಸಾಧನ (automatic fire extinguisher) 'ಏರೋಸಾಲ್' ಮಿಶ್ರಣವನ್ನು ಸಿಂಪಡಿಸುವುದನ್ನು ಆರಂಭಿಸಿದೆ.
ಇದು, ಅಗ್ನಿ ಅವಘಡ ಸಂಭವಿಸಿದೆ ಏನೋ ಅಂತ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಗಾಬರಿಯನ್ನು ಹುಟ್ಟಿದೆ. ತಕ್ಷಣವೇ ಪ್ರಯಾಣಿಕರು ರೈಲು ಸಿಬ್ಬಂದಿಯನ್ನು ಅಲರ್ಟ್ ಮಾಡಲು, ಕಂಪಾರ್ಟ್‌ಮೆಂಟ್‌ನಲ್ಲಿದ್ದ ಎಮರ್ಜೆನ್ಸಿ ಫೋನ್ ಬಳಸಿ ಮಾಹಿತಿ ನೀಡಿದ್ದಾರೆ. ಮನುಬುಲು ನಿಲ್ದಾಣದ ಸಮೀಪ ರೈಲು ನಿಂತಿದೆ. ಒಂದಿಷ್ಟು ಸಮಯವನ್ನು ವ್ಯರ್ಥ್ಯ ಮಾಡದೇ ರೈಲ್ವೆ ಪೊಲೀಸರು, ಅಗ್ನಿನಿರೋಧಕ ಸಾಧನದೊಂದಿಗೆ ಫೈರ್ ಅಲಾರಾಂ ಶಬ್ಡ ಮಾಡುತ್ತಿದ್ದ ಬೋಗಿ ಬಳಿ ಧಾವಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ, ಶೌಚಾಲಯದಲ್ಲಿ ಸಿಗರೇಟ್ ಹೊಗೆ ತುಂಬಿದ್ದಕ್ಕೆ ಈ ರೀತಿ ಶಬ್ದವಾಗಿದೆ ಎಂಬುದನ್ನು ಗಮನಿಸಿದ್ದಾರೆ. ಕಿಟಕಿ ಗಾಜನ್ನು ಒಡೆದು, ಪರಿಶೀಲಿಸಿದಾದ ಅಲ್ಲಿ ವ್ಯಕ್ತಿಯೊಬ್ಬ ಅಡಗಿ ಕುಳಿತಿರುವುದನ್ನು ಕಂಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಟಿಕೆಟ್ ಇಲ್ಲದೆ ಪ್ರಯಾಣಿಸಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ನೆಲ್ಲೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.
ಸದ್ಯ, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೈಲಿನ ಗಾಜುಗಳು ಒಡೆದಿರುವುದು ಹಾಗೂ ಪ್ರಯಾಣಿಕರು ಗಾಬರಿಗೊಂಡಿರುವ ದೃಶ್ಯಗಳನ್ನು ಕಾಣಬಹುದು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಮಧ್ಯ ರೈಲ್ವೆ ವಿಜಯವಾಡ ವಿಭಾಗದ ಅಧಿಕಾರಿಯೊಬ್ಬರು, ಟಿಕೆಟ್ ಇಲ್ಲದೆ, ಪ್ರಯಾಣಿಸಿದ ವ್ಯಕ್ತಿಯು ಶೌಚಾಲಯದಲ್ಲಿ ಸಿಗರೇಟ್ ಸೇದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ. ಸಮಸ್ಯೆ ಬಗೆಹರಿದ ಕೊಡಲೇ ರೈಲು ಪ್ರಯಾಣ ಆರಂಭಿಸಿತು ಎಂದು ಹೇಳಿದ್ದಾರೆ.
ಭಾರತದಲ್ಲಿ ಹೈಸ್ವೀಡ್ ರೈಲುಗಳಾಗಿ ಕಾರ್ಯಾಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಾಕಷ್ಟು ಅತ್ಯಾಧುನಿಕವಾಗಿವೆ. ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಸುರಕ್ಷತೆ ದೃಷ್ಟಿಯಿಂದ ವೇಗವನ್ನು 160 ಕಿಮೀ.ಗೆ ಸೀಮಿತ ಮಾಡಲಾಗಿದೆ. ಈ ರೈಲಿಗೆ ಪ್ರತ್ಯೇಕ ಎಂಜಿನ್ ಇಲ್ಲ. ಜೈವಿಕ ಶೌಚಾಲಯದ ವ್ಯವಸ್ಥೆಯಿದೆ. ಸಂಪೂರ್ಣ ಎಸಿಯಿರುವ ಈ ರೈಲಿನ ಸೀಟುಗಳು ಕೂಡ ಅತ್ಯುತ್ತಮವಾಗಿದ್ದು, ಆರಾದಾಯಕವಾಗಿ ಪ್ರಯಾಣಿಸಬಹುದು.
ಇದಿಷ್ಟೇ ಅಲ್ಲದೆ, ಸ್ವಯಂಚಾಲಿತ ಬಾಗಿಲನ್ನು ಹೊಂದಿದೆ. ಆದರೆ, ಈ ಘಟನೆಯನ್ನು ಗಮನಿಸಿದಾಗ ಟಿಕೆಟ್ ರಹಿತ ಪ್ರಯಾಣ ತಪ್ಪು, ಅದು ದಂಡಕ್ಕೆ ಆಹ್ವಾನವೆಂದು ತಿಳಿದಿದ್ದರೂ ಆ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಇದು ಮಾತ್ರವಲ್ಲದೆ, ಸಿಗರೇಟ್ ಸೇದಿ ಇತರೆ, ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದು, ಮಾಡಿದ ತಪ್ಪಿಗೆ ಪೊಲೀಸರ ಅತಿಥಿ ಆಗಿದ್ದಾನೆ. ಏನೇ ಆಗಲಿ.. ವಂದೇ ಭಾರತ್ ಎಕ್ಸ್‌ಪ್ರೆಸ್ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕವಾಗಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications