Srinivasa Sethu: ತಿಮ್ಮಪ್ಪನ ಭಕ್ತರೇ.. ಸೆ.18ಕ್ಕೆ ಶ್ರೀನಿವಾಸ ಸೇತು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ, 10 ನಿಮಿಷ ಪ್ರಯಾಣ
ಪ್ರಸಿದ್ಧ ಪುಣ್ಯ ಕ್ಷೇತ್ರವಾದ ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿ ದೊರೆತಿದೆ. 'ಶ್ರೀನಿವಾಸ ಸೇತು' ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (Srinivasa Sethu elevated expressway)ಯನ್ನು ಇದೇ ಸೆ.18 ರಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಬಗ್ಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 'ಸೆಪ್ಟೆಂಬರ್ 18 ರಂದು ಜರುಗುವ ವಾರ್ಷಿಕ ಬ್ರಹ್ಮೋತ್ಸವದ ಮೊದಲ ದಿನದಂದು ವೆಂಕಟೇಶ್ವರ ಸ್ವಾಮಿಗೆ ಮುಖ್ಯಮಂತ್ರಿಗಳು ಕಾಣಿಕೆಯನ್ನು ಅರ್ಪಣೆ ಮಾಡಲಿದ್ದಾರೆ. ಜೊತೆಗೆ ತಿರುಮಲದಲ್ಲಿ ಹೊಸದಾಗಿ ನಿರ್ಮಿಸಲಾದ ಕೆಲವು ಅತಿಥಿ ಗೃಹಗಳನ್ನು ಕೂಡ ಉದ್ಘಾಟಿಸಲಿದ್ದಾರೆ' ಎಂದು ಹೇಳಿದ್ದಾರೆ.

ಪ್ರತಿದಿನ ಸರಿ ಸುಮಾರು ಒಂದೂವರೆ ಲಕ್ಷ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ತನಪಲ್ಲಿ ಕ್ರಾಸ್ (ತಿರುಚನೂರು) ಮತ್ತು ನಂದಿ ಸರ್ಕಲ್ (ಕಪಿಲ ತೀರ್ಥಂ) ನಡುವೆ ತಿರುಮಲ ಬೆಟ್ಟಕ್ಕೆ ಹೋಗುವ 7 ಕಿಲೋಮೀಟರ್ ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ಸ್ಥಳೀಯರು ಹಾಗೂ ಇತರೆ ರಾಜ್ಯಗಳಿಂದ ತಿಮಪ್ಪನ ದರ್ಶನಕ್ಕೆ ಬರುತ್ತಿದ್ದ ಭಕ್ತರು ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದರು.
ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಶ್ರೀನಿವಾಸ ಸೇತು ಎಕ್ಸ್‌ಪ್ರೆಸ್‌ವೇ (ಫ್ಲೈ ಓವರ್) ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಮೇಲ್ಸೇತುವೆ ಮಂಜೂರಾಗಿತ್ತು. ಈ ಫ್ಲೈ ಓವರ್ ನಿರ್ಮಾಣಕ್ಕೆ ಒಟ್ಟು 680 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ಸೇತುವೆ ಕಾಮಗಾರಿ, ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.
ಬೇಸಿಗೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಮೇ.15 ರೊಳಗೆ ಫ್ಲೈ ಓವರ್ ಕಾಮಗಾರಿ ಮಾಡಿ ಮುಗಿಸಬೇಕೆಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಆದೇಶ ಹೊರಡಿಸಿದ್ದರು. ಆದರೆ, ವಿವಿಧ ಕಾರಣಗಳಿಗೆ ತಡವಾಗಿದ್ದು, ಅಂತಿಮವಾಗಿ ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಮೇಲ್ಸೇತುವೆ) ಲೋಕಾರ್ಪಣೆಗೆ ಸಿದ್ಧವಾಗಿರುವುದು ತಿಮ್ಮಪ್ಪ ಭಕ್ತರಿಗೆ ಖುಷಿಯ ವಿಚಾರವಾಗಿದೆ.
ತಿರುಪತಿ ನಗರದಲ್ಲಿ 7 ಕಿಲೋಮೀಟರ್ ದೂರವನ್ನು ಕ್ರಮಿಸುವುದಕ್ಕೆ ವಾಹನ ಸವಾರರಿಗೆ 40 ನಿಮಿಷ ಸಮಯಾವಕಾಶ ಬೇಕಿದೆ. ಈ ಮೇಲ್ಸೇತುವೆ ನಿರ್ಮಾಣದಿಂದ ಅದು 10 ನಿಮಿಷಕ್ಕೆ ಇಳಿಯಲಿದ್ದು, ಸಂಚಾರ ದಟ್ಟಣೆಯ ಕಿರಿ - ಕಿರಿ ತಪ್ಪುತ್ತದೆ. ಈ ಶ್ರೀನಿವಾಸ ಸೇತು ಫ್ಲೈ ಓವರ್ ನಿಂದ ಇತರೆ ರಾಜ್ಯದಿಂದ ಬರುವ ಭಕ್ತರು ಸುಲಭವಾಗಿ ತಿರುಮಲ ಬೆಟ್ಟಕ್ಕೆ ತೆರಬಹುದು. ಆದರೆ, ಸ್ಥಳೀಯ ನಿವಾಸಿಗಳಿಗೆ ಅಷ್ಟಾಗಿ ಪ್ರಯೋಜನವಾಗುವುದಿಲ್ಲ.
ಇನ್ನು, ಸೆ.22 ರಂದು ತಿರುಪತಿಯಲ್ಲಿ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಗರುಡ ಸೇವೆ ಇದ್ದು, ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಚಿರತೆ ದಾಳಿಯಿಂದಾಗಿ ಪಾದಚಾರಿ ಮಾರ್ಗಗಳು ಮತ್ತು ಘಾಟ್ ರಸ್ತೆಗಳಲ್ಲಿ ಯಾತ್ರಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಅರಣ್ಯ ಇಲಾಖೆ ಅದನ್ನು ಸಡಿಲಿಸುವವರೆಗೂ ಅನಿರ್ದಿಷ್ಟವಾಗಿ ಮುಂದುವರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ತಿರುಪತಿಯಲ್ಲಿ ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳುವುದರಿಂದ ಪ್ರವಾಸಿಗರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಈ ಹಿಂದೆ, ಸಂಚಾರ ದಟ್ಟಣೆಯಿಂದ ತನಪಲ್ಲಿ ಕ್ರಾಸ್ ಹಾಗೂ ನಂದಿ ಸರ್ಕಲ್ ನಡುವೆ ಪ್ರಯಾಣಿಸಬೇಕಾದರೆ, 40 ನಿಮಿಷ ಹಿಡಿಯುತ್ತಿದ್ದು, ಅದು 10 ನಿಮಿಷಕ್ಕೆ ಇಳಿಕೆಯಾಗಲಿದೆ. ಆದರೂ ಕಾಮಗಾರಿ ತೀರಾ ವಿಳಂಬವಾಗಿರುವುದು ಬೇಸರದ ಸಂಗತಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications