ಬೈಕ್ & ಸ್ಕೂಟರ್‌ಗಳಿಗೆ ಟೋಲ್ ಶುಲ್ಕ.. ಸ್ಪಷ್ಟನೆ
ಇನ್ಮುಂದೆ ಬೈಕ್ & ಸ್ಕೂಟರ್ ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳು (Two Wheelers), ಹೆದ್ದಾರಿಗಳಲ್ಲಿ ಟೋಲ್ ಶುಲ್ಕ (Toll Charges) ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿತ್ತು. ಇದರಿಂದ ವಾಹನ ಸವಾರರು ಬಹಳಷ್ಟು ಗೊಂದಲಕ್ಕೆ ಒಳಗಾಗಿದ್ದರು. ಸದ್ಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸ್ಪಷ್ಟನೆ ನೀಡಿದ್ದು, ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ. 'ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂತಹ ಯಾವುದೇ ಪ್ರಸ್ತಾವನೆ ಇಲ್ಲ' ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ.

ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು, ದ್ವಿಚಕ್ರ ವಾಹನಗಳು ಟೋಲ್ ಶುಲ್ಕ ಕಟ್ಟಬೇಕು ಎಂಬ ಸುದ್ದಿ ಹರಡುತ್ತಿರುವ ಕೆಲ ಮಾಧ್ಯಮಗಳ ವರದಿಯನ್ನು ಟೀಕಿಸಿದ್ದಾರೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿಯೂ ಪೋಸ್ಟ್ ಮಾಡಿ, ಖಂಡಿಸಿದ್ದಾರೆ.
'ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವ ಕುರಿತು ಒಂದಷ್ಟು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಅಂತಹ ಪ್ರಸ್ತಾವವಿಲ್ಲ. ಟೋಲ್‌ನಲ್ಲಿ ಸಂಪೂರ್ಣ ಶುಲ್ಕ ವಿನಾಯಿತಿ ಮುಂದುವರಿಯುತ್ತದೆ. ಸತ್ಯ ತಿಳಿಯದೆ, ದಾರಿತಪ್ಪಿಸುವ ಸುದ್ದಿಗಳನ್ನು ಹರಡುವುದರೊಂದಿಗೆ ಸಂಚಲನ ಮೂಡಿಸುವುದು ಆರೋಗ್ಯಯುತ ಪತ್ರಿಕೋದ್ಯಮದ ಲಕ್ಷಣವಲ್ಲ' ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ದೇಶವ್ಯಾಪಿ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಮುಕ್ತ ಸಂಚಾರಕ್ಕೆ ಇತಿಶ್ರೀ ಹಾಡಬಹುದು. ಇದೇ ಜುಲೈ 15 ರಿಂದ ಬೈಕ್ ಹಾಗೂ ಸ್ಕೂಟರ್ ಸೇರಿದಂತೆ ಎಲ್ಲ ರೀತಿಯ ದ್ವಿಚಕ್ರ ವಾಹನಗಳು ಇಂತಿಷ್ಟು ಟೋಲ್ ಶುಲ್ಕ ಪಾವತಿ ಮಾಡಬೇಕು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರಸ್ತುತ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುವ ಎಲ್ಲ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳು ಯಾವುದೇ ರೀತಿಯಲ್ಲಿ ಟೋಲ್ ಶುಲ್ಕ ಕಟ್ಟುವ ಅಗತ್ಯವಿಲ್ಲ. ಶ್ರೀಸಾಮಾನ್ಯರಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಹಾಗೂ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಹತೋಟಿಗೆ ತರಲು ಈ ನಿರ್ಧಾರವನ್ನು ಬಹಳ ಹಿಂದೆಯೇ ಕೈಗೊಳ್ಳಲಾಗಿದೆ. ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬಸ್, ಕಾರು ಹಾಗೂ ಲಾರಿ ಒಳಗೊಂಡಂತೆ ಉಳಿದೆಲ್ಲ ವಾಹನಗಳು ಟೋಲ್ ಶುಲ್ಕವನ್ನು ಪಾವತಿ ಮಾಡಬೇಕು.
ಒಟ್ಟಾರೆ, ದ್ವಿಚಕ್ರ ವಾಹನಗಳು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಕಟ್ಟಬೇಕು ಎಂಬುದರ ಸಂಬಂಧ ಕೇಂದ್ರ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ವಾಹನ ಸವಾರರು ನಿರಾಳರಾಗಿದ್ದಾರೆ. ಇಂತಹ ವರದಿಗಳನ್ನು ಪ್ರಕಟಿಸುವ ಮುನ್ನ ಮಾಧ್ಯಮ ಸಂಸ್ಥೆಗಳು ಸಹ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.


Click it and Unblock the Notifications








