ಕಾರು ಅಪಘಾತಕ್ಕೆ 25 ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ!
ಚಾಲನೆ ವೇಳೆ ಸ್ವಲ್ಪನೂ ಗಮನ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಇದರಿಂದಾಗಿ ದೊಡ್ಡ ಬೆಲೆನೇ ತೆರಬೇಕಾಗಿತ್ತು. ಕಾರು ಅಪಘಾತಕ್ಕಿರುವ ಕಾರಣಗಳು ಹಲವು. ಕೆಲವೊಂದು ಬಾರಿ ಇದು ರಸ್ತೆ ಪರಿಸ್ಥಿತಿ ಅಥವಾ ಇನ್ನು ಕೆಲವು ಬಾರಿ ಚಾಲಕನ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.
ಹಾಗಾಗಿ ಬಹಳ ಏಕಾಗ್ರತೆಯಿಂದ ಗಾಡಿ ಓಡಿಸಬೇಕಾಗುತ್ತದೆ. ಇಂದಿನ ಈ ಲೇಖನದಲ್ಲಿ ದೇಶದಲ್ಲಿ ಸಂಭವಿಸುತ್ತಿರುವ ಕಾರು ಅಪಘಾತಗಳಿಗಿರುವ 25 ಅತಿ ಸಾಮಾನ್ಯ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟುವುದು ಹೇಗೆಂಬುದನ್ನು ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

25. ಚಂಚಲ ಮನೋಸ್ಥಿತಿ
ನಾವು ಮೊದಲೇ ತಿಳಿಸಿರುವಂತೆಯೇ ಏಕಾಗ್ರತೆಗೆ ಭಂಗವುಂಟಾದಾಗ ಸಹಜವಾಗಿಯೇ ಸ್ಟೀರಿಂಗ್ ನತ್ತ ಗಮನ ಹರಿಯುವುದಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸಬಹುದು. ಹಾಗಾಗಿ ಚಾಲನೆ ವೇಳೆ ಯಾವತ್ತೂ ಏಕಾಗ್ರತೆಗೆ ಭಂಗವುಂಟಾಗದಂತೆ ನೋಡಿಬೇಕಾಬೇಕು. ಇದಕ್ಕಾಗಿ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುವುದಾಗಲಿ, ಕರೆ ಸ್ವೀಕರಿಸುವುದಾಗಲಿ, ಮೇಸೆಜ್ ಮಾಡುವುದಾಗಲಿ, ಪುಸ್ತಕ ಓದುವುದಾಗಲಿ ಮಾಡಬಾರದು.

24. ಅಮಿತ ವೇಗ
ಅಮಿತ ವೇಗ ಅಪಘಾತಕ್ಕಿರುವ ಮಗದೊಂದು ಅತಿ ಸಾಮಾನ್ಯ ಕಾರಣವಾಗಿದೆ. ಹಾಗಾಗಿ ಯಾವತ್ತೂ ನಿಧಾನವೇ ಪ್ರಧಾನ ಎಂಬ ಗಾದೆ ಮಾತು ನೆನಪ್ಪಿಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡುವುದು ಉತ್ತಮ.

23. ಡ್ರಿಂಕ್ ಆ್ಯಂಡ್ ಡ್ರೈವ್
ಮಹಾನಗರಗಳಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ಜಾಸ್ತಿಯಾಗುತ್ತಲೇ ಇದೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರಿಂದ ಇನ್ನೊಬ್ಬರಿಗೂ ನೀವು ತೊಂದರೆಯನ್ನುಂಟು ಮಾಡುತ್ತಿರಿ ಎಂಬುದು ನೆನಪಿರಲಿ. ಹಾಗೊಂದು ವೇಳೆ ಲೇಟ್ ನೈಟ್ ಪಾರ್ಟಿಗೆ ತೆರಳಿ ಕಂಟ ಪೂರ್ತಿ ಕುಡಿದಿದ್ದಲ್ಲಿ ತಕ್ಷಣ ಕ್ಯಾಬ್ ವೊಂದನ್ನು ಕರೆಯಿಸಿ ಮನೆಗೆ ಸುರಕ್ಷಿತವಾಗಿ ತಲುಪಲು ಪ್ರಯತ್ನಿಸಿ.

22. ಅಜಾಗರೂಕ ಚಾಲನೆ
ಅಜಾಗರೂಕ ಅಥವಾ ಕೇರ್ ಲೆಸ್ ಚಾಲನೆಯಿಂದ ಅಪಘಾತವುಂಟಾಗುವ ಸಾಧ್ಯತೆ ಹೆಚ್ಚು. ಓ, ನಾನು ಡೈಲಿ ವಾಹನ ಓಡಿಸುತ್ತಿದ್ದು, ಇದೇನು ಮಹಾ ಎಂದುಕೊಂಡು ಸಿಕ್ಕಾಬಿಟ್ಟೆ ವಾಹನ ಚಾಲನೆಗೆ ಪ್ರಯತ್ನಿಸಿದ್ದಲ್ಲಿ ಅದರ ಭವಿಷ್ಯತ್ ಫಲವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾನೇನು ಮಹಾನ್ ಎಂಬ ಚಿತ್ತಭ್ರಮೆಯಿಂದ ಹೊರಬಂದು ವಾಹನ ಚಾಲನೆ ಮಾಡಲು ಪ್ರಯತ್ನಿಸಿ.

21. ಮಳೆ
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ವೇಳೆ ಕಾರು ಚಾಲನೆ ಮಾಡುವುದರಿಂದ ಅಪಮೃತ್ಯು ಸಂಭವಿಸುವ ಭೀತಿಯಿರುತ್ತದೆ. ರಾತ್ರಿ ವೇಳೆಯಲ್ಲಿ ಭಾರಿ ಮಳೆಯಿಂದಾಗಿ ಗೋಚರತೆಯ ಸಮಸ್ಯೆಯು ಎದುರಾಗಬಹುದು. ಇದಕ್ಕಾಗಿ ಮಳೆಯ ಸುರಿಯುತ್ತಿರುವ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ನಿಮ್ಮ ಪ್ರವಾಸವನ್ನು ತಪ್ಪಿಸಿರಿ.

20. ಸಿಗ್ನಲ್ ಜಂಪ್
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕೆಂಪು ದೀಪವನ್ನು ಉಲ್ಲಂಘಿಸಿ ಸರ್ರನೆ ಗಾಡಿ ಚಾಲನೆ ಮಾಡುವ ಪ್ರಯತ್ನಿಸುವುದರಿಂದ ಅಪಘಾತ ಎದುರಾಗಬಹುದು. ಹಾಗಾಗಿ ಹಸಿರು ಬೆಳಕು ಉರಿದ ಬಳಕವೇ ಚಾಲನೆ ಮುಂದುವರಿಸಿ.

19. ಕಾಮಗಾರಿ
ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ರಸ್ತೆ ಕಾಮಗಾರಿ ಜಾರಿಯಲ್ಲಿರುವ ಇದನ್ನು ಲೆಕ್ಕಿಸದೇ ಸಂಚರಿಸುವುದರಿಂದಲೂ ಅಪಾಯವನ್ನು ಆಹ್ವಾನಿಸಬಹುದು. ಇದರಿಂದಾಗಿ ಪಿಡಬ್ಲ್ಯುಡಿ ಫಲಕಗಳಿಗೂ ಗೌರವ ಕೊಡಿ.

18. ಹಿಮಪಾತ
ಉತ್ತರ ಭಾರತದಲ್ಲಿ ಹಿಮಪಾತ ಸರ್ವೆ ಸಾಮಾನ್ಯ ವಿಷಯವಾಗಿದೆ. ಅತಿಯಾದ ಹಿಮಪಾತದಿಂದಾಗಿ ನಿಮ್ಮ ಚಾಲನೆಗೆ ಭಂಗವುಂಟಾಗಬಹುದು. ಇಂತಹ ವೇಳೆಯ ಚಾಲನೆಯಿಂದ ದೂರವಿರಿ.

17. ಹದಿಹರೆಯದ ಹುಮ್ಮಸ್ಸು
ಹದಿಹರೆಯದ ವಯಸ್ಸಿನಲ್ಲಿ ಕಾಲೇಜ್ ಹುಡುಗರು ತಮಗೆ ಮನಬಂದಂತೆ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಾರೆ. ಇಂತಹ ಮಕ್ಕಳ ಮೇಲೆ ತಂದೆ ತಾಯಿಂದಿರು ಹೆಚ್ಚು ಗಮನ ಕೊಡುವುದು ಅಗತ್ಯ.

16. ರಾತ್ರಿ ವೇಳೆಯ ಪಯಣ
ರಾತ್ರಿಯಲ್ಲಿ ಗೋಚರತೆ ಕಡಿಮೆ ಇರುವುದರಿಂದ ಸಡನ್ ಆಗಿ ಎದುರಾಗುವ ತೊಂದರೆಯನ್ನು ನಿಭಾಯಿಸುವುದು ಕಷ್ಟಕರ. ಇನ್ನು ರಸ್ತೆ ಬದಿಯಲ್ಲಿ ಬೆಳಕಿನ ಸೇವೆ ಇರದಿದ್ದಲ್ಲಿ ಸಹಜವಾಗಿಯೇ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ರಾತ್ರಿ ಪಯಣವನ್ನು ದೂರವಿಡಿ.

15. ಡಿಸೈನ್ ದೋಷ
ಇದು ಸ್ವಲ್ಪ ತಾಂತ್ರಿಕ ವಿಷಯವಾದರೂ ಕಾರಿನ ಡಿಸೈನ್ ದೋಷದಿಂದಲೂ ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. ಇನ್ನು ಕಾರು ಸರ್ವಿಸ್ ಕೊರತೆಯಿಂದಲೂ ಎಡವಟ್ಟಾಗಬಹುದು. ಹಾಗಾಗಿ ನಿಮ್ಮ ಕಾರನ್ನು ನಿಯಮಿತವಾಗಿ ಸರ್ವೀಸ್ ಮಾಡಿಸಿ.

14. ಇಕ್ಕಟ್ಟಾದ ರಸ್ತೆ
ಇಕ್ಕಟ್ಟಾದ ರಸ್ತೆ ಪರಿಸ್ಥಿತಿ ಅಥವಾ ಅಪರಿಚಿತ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದಾಗಿ ವಾಹನ ಚಲಾಯಿಸಿ.

13. ಕಡಿದಾದ ತಿರುವು
ಕೆಲವೊಂದು ಬಾರಿ ರಸ್ತೆ ಸಾನಿಧ್ಯವನ್ನು ಮನಗಾಣುವಲ್ಲಿ ಎಡವುತ್ತೇವೆ. ಇಂತಹ ಸಮಸ್ಯೆ ಕಡಿದಾದ ತಿರುವುಗಳಲ್ಲಿ ಜಾಸ್ತಿಯಾಗಿದ್ದು, ಅಪಾಯವನ್ನು ಆಹ್ವಾನಿಸಬಹುದು. ಹಾಗಾಗಿ ತಿರುವುಗಳಲ್ಲಿ ಎಚ್ಚರಿಕೆ ಪಾಲಿಸಿ.

12. ಅಂತರವಿರಲಿ
ವಾಹನಗಳ ಮಧ್ಯೆ ಸದಾ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂತಹ ಅಪಘಾತ ಪ್ರಸಂಗಗಳು ಜಾಸ್ತಿಯಾಗಿ ಕಾಣಸಿಗುತ್ತದೆ. ಇಲ್ಲಿ ಇರುವೆಯೇ ಸಿದ್ಧಾಂತದಂತೆ ಒಬ್ಬರ ಹಿಂದೆ ಒಬ್ಬರು ಸಾಲಾಗಿ ವಾಹನ ಚಾಲನೆಗೆ ಒತ್ತು ಕೊಡಿ.

11. ಅಪಕ್ವತೆ
ದೇಶದಲ್ಲಿ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಲು 18 ವರ್ಷ ಪೂರ್ತಿಯಾಗಿರಬೇಕು. ಅಲ್ಲದೆ ಅಂಥವರಿಗೆ ಮಾತ್ರ ವಾಹನ ಚಾಲನೆ ಮಾಡುವ ಹಕ್ಕಿರುತ್ತದೆ. ಆದರೆ ಚಿಕ್ಕ ವಯಸ್ಸಿನಲ್ಲೇ ರಸ್ತೆಗಿಳಿಯುವ ಇಂದಿನ ಯುವ ಜನಾಂಗ ಅಪಾಯವನ್ನು ಆಹ್ವಾನಿಸುತ್ತಾರೆ. ಇದರ ಮೇಲೆ ಹೆತ್ತವರ ಗಮನವಿದ್ದರೆ ಒಳ್ಳೆಯದು.

10. ಅನಾರೋಗ್ಯ
ಅನಾರೋಗ್ಯದಿಂದಾಗಿ ನಿಮ್ಮ ಏಕಾಗ್ರತೆಗೆ ಭಂಗವುಂಟಾಗಬಹುದು. ಪರಿಣಾಮ ಅಪಾಯವನ್ನು ಆಹ್ವಾನಿಸಲಿದ್ದೀರಿ. ಹಾಗಾಗಿ ಅನಾರೋಗ್ಯದ ವೇಳೆ ವಾಹನ ಚಾಲನೆಯಿಂದ ದೂರವಿರಿ.

09. ಗುಂಡಿ, ರೈಲ್ವೇ ಕ್ರಾಸಿಂಗ್
ಅಪರಿಚಿತ ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಮಧ್ಯೆಯಲ್ಲಿ ಗುಂಡಿಗಳು ಚಿಕ್ಕ ಚಿಕ್ಕ ಗುಂಡಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಪರಿಣಾಮ ಕಾರಿಗೆ ಪೆಟ್ಟಾಗುವುದರೊಂದಿಗೆ ನಿಮಗೂ ತೊಂದರೆ ಎದುರಾಗಲಿದೆ. ರೈಲ್ವೇ ಕ್ರಾಸಿಂಗ್ ನಲ್ಲೂ ಇದೇ ರೀತಿಯ ಅಪಾಯ ಎದುರಾಗಲಿದೆ. ಆದುದರಿಂದ ರಸ್ತೆ ಪರಿಸ್ಥಿತಿ ಮಣಗಾಣಲು ಮರೆಯದಿರಿ.

08. ನಿದ್ರಾಹೀನತೆ
ರಾತ್ರಿ ವೇಳೆಯಲ್ಲಿ ನಿದ್ರೆಯ ಕೊರತೆಯಿಂದಾಗಿ ಮರುದಿನ ವಾಹನ ಚಾಲನೆಗೆ ಪ್ರಯತ್ನಿಸುವುದರಿಂದ ಅಪಾಯ ಎದುರಾದಿತು. ಹಲವಾರು ಕಾರಣಗಳಿಂದಾಗಿ ನಿದ್ರಾಹೀನತೆ ಉಂಟಾಗಬಹುದು. ಆದರೆ ಇಂತಹ ಪರಿಸ್ಥಿತಿಯಲ್ಲಿ ಚಾಲನೆಗೆ ಪ್ರಯತ್ನಿಸದಿರಿ.

07. ನಿರಂತರ ಚಾಲನೆ
ಇನ್ನು ಎರಡು ಮೂರು ದಿನಗಳ ನಿರಂತರ ಚಾಲನೆಯಿಂದಾಗಿಯೂ ದಣಿವುಂಟಾಗಬಹುದು. ಇದರಿಂದಾಗಿ ಚಾಲನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಬಗ್ಗೆಯೂ ಜಾಗರೂಕರಾಗಿರಿ.

06. ಟೈರ್ ಪಂಚರ್
ವೇಗದಲ್ಲಿ ಸಂಚರಿಸುತ್ತಿರುವಾಗ ಸಡನ್ ಆಗಿ ಟೈರ್ ಪಂಚರ್ ಆಗುವುದರ ಭವಿಷ್ಯತ್ ಪರಿಣಾಮ ನಾವು ಹೇಳದೆಯೇ ನಿಮಗೆ ಅರಿವಾಗಿರಬಹುದು. ಹಾಗಾಗಿ ನಿಮ್ಮ ಗಾಡಿಯನ್ನು ನಿರಂತರವಾಗಿ ಪರಿಶೀಲಿಸುತ್ತಿರಿ.

05. ಮಂಜು ಕವಿದ ವಾತಾವರಣ
ಚಳಿಗಾಲದಲ್ಲಿ ಅಥವಾ ಬೆಳಗ್ಗಿನ ಜಾವದಲ್ಲಿ ಬಹುತೇಕ ಮಂಜು ಕವಿದ ವಾತಾವರಣದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಹತ್ತಿರದ ವಾಹನವನ್ನು ಗುರುತಿಸುವುದೇ ಕಷ್ಟಕರವೆನಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಡ್ ಲೈಟ್ ಆನ್ ಮಾಡಿ ನಿಧಾನವಾಗಿ ಗಾಡಿ ಚಾಲನೆ ಮಾಡಲು ಮರೆಯದಿರಿ.

04. ರೇಸಿಂಗ್ ಟ್ರ್ಯಾಕ್
ರಸ್ತೆ ಯಾವುದೇ ರೇಸ್ ಟ್ರ್ಯಾಕ್ ಅಲ್ಲ. ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇಂದಿನ ಯುವ ಜನಾಂಗವು ಇದರ ಬಗ್ಗೆ ಅರಿವಿಲ್ಲದೆ ಗುಂಪು ಗುಂಪಿನಲ್ಲಿ ವೇಗವಾಗಿ ಕಾರು ಚಾಲನೆ ಮಾಡುವ ಪ್ರಯತ್ನ ಮಾಡುತ್ತಾರೆ. ಇಂತವರಿಗೆ ಶಿಕ್ಷಕರು ಅಥವಾ ಹೆತ್ತವರು ತಕ್ಕ ಶಾಸ್ತಿ ಮಾಡಬೇಕಾಗುತ್ತದೆ.

03. ಇಂಡಿಕೇಟರ್ ಬಳಕೆ
ಇಂಡಿಕೇಟರ್ ಮಹತ್ವವನ್ನು ಅರಿಯದೆ ಅಥವಾ ಸೋಮಾರಿತನದಿಂದಾಗಿ ಬಲಕ್ಕೆ ಅಥವಾ ಎಡಕ್ಕೆ ತಿರುಗುವಾಗ ಇಂಡಿಕೇಟರ್ ಬಳಕೆಯನ್ನು ಮರೆತು ಬಿಡುತ್ತೇವೆ. ಪರಿಣಾಮ ಅಪಘಾತವನ್ನು ಸ್ವತ: ನಾವೇ ಆಹ್ವಾನಿಸುತ್ತೇವೆ. ರಸ್ತೆಯಲ್ಲಿ ವಾಹನಗಳಿಲ್ಲದಿದ್ದರೂ ನೀವು ಹೋಗುವ ದಿಕ್ಕಿನ ಕಡೆಗೆ ಇಂಡಿಕೇಟರ್ ಬಳಕೆಯನ್ನು ಸರಿಯಾಗಿ ಉಪಯೋಗಿಸಿ. ನಿಮ್ಮ ಒಂದೇ ಒಂದು ಬೆಳಕು ಹಲವು ಜೀವಗಳ ಪಾಲಿಗೆ ರಕ್ಷಣೆಯಾದಿತು.

02. ಲೇನ್ ಪಾಲಿಸಿ
ವಾಹನಗಳ ಸುಗಮ ಸಂಚಾರಕ್ಕಾಗಿ ಲೇನ್ ನಿಯಮವನ್ನು ಪಾಲಿಸಲೇಬೇಕಾಗುತ್ತದೆ. ನಿಮ್ಮ ಮನಬಂದಂತೆ ಸಂಚರಿಸುವುದು ಅಪಾಯವನ್ನು ಆಹ್ವಾನಿಸಬಹುದು. ಹಾಗಾಗಿ ಸಂಚಾರ ನಿಯಮಗಳಿಗೆ ಮಹತ್ವವನ್ನು ಕೊಡಿರಿ.

01. ಪ್ರಾಣಿಗಳ ಪ್ರವೇಶ
ಅಂತಿಮವಾಗಿ ಇದು ವಿಚಿತ್ರವಾದರೂ ಒಪ್ಪಲೇಬೇಕಾದ ಸತ್ಯ. ರಸ್ತೆಯಲ್ಲಿ ದನ, ಕರು, ನಾಯಿ ಅಥವಾ ಇತರ ಪ್ರಾಣಿಗಳ ಪ್ರವೇಶದಿಂದಾಗಿ ನಿಮ್ಮ ಚಾಲನೆಗೆ ಭಂಗವುಂಟಾಗಿ ಅಪಘಾತ ಸಂಭವಿಸುವ ಭೀತಿಯಿರುತ್ತದೆ. ಇವೆಲ್ಲದರೂ ಬಗ್ಗೆ ಜಾಗರೂಕರಾಗಿರಬೇಕು. ಹ್ಯಾಪಿ ಡ್ರೈವಿಂಗ್!

ಇಲ್ಲಿ ಯಾವುದಾದರೂ ಪಾಯಿಂಟ್ ಬಿಟ್ಟು ಹೋಗಿದ್ದಲ್ಲಿ ನಿಮ್ಮ ಪ್ರಕಾರ ಕಾರು ಅಪಘಾತಕ್ಕಿರುವ ಅತಿ ಸಾಮಾನ್ಯ ಕಾರಣಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಪಟ್ಟಿ ಮಾಡಿ ಬರೆಯಲು ಮರೆಯದಿರಿ.


Click it and Unblock the Notifications








