ಭೀಕರ ಅನಾಹುತಗಳನ್ನು ತಪ್ಪಿಸಿದ ರೈಲ್ವೇ ಇಲಾಖೆ: ಚಾಲಕರಿಲ್ಲದೇ 70 ಕಿ.ಮೀ ಕ್ರಮಿಸಿದ ರೈಲು
ಜಮ್ಮು ಕಾಶ್ಮೀರದ ಕಥುವಾ ರೈಲು ನಿಲ್ದಾಣದಿಂದ ಪಂಜಾಬ್‌ನ ಹೋಶಿಯಾರ್‌ಪುರದವರೆಗೆ ಲೋಕೋಪೈಲೆಟ್ ಇಲ್ಲದೆ ಗೂಡ್ಸ್ ರೈಲೊಂದು ಬರೋಬ್ಬರಿ 70 ಕಿ.ಮೀ ಚಲಿಸಿದೆ. ಈ ಡೀಸೆಲ್ ರೈಲು ಮಾರ್ಗದುದ್ದಕ್ಕೂ 100 ಕಿ.ಮೀ ವೇಗದಲ್ಲಿ ಚಲಿಸಿರುವುದಾಗಿ ತಿಳಿದುಬಂದಿದೆ. ಬಳಿಕ ಪಂಜಾಬ್ ಬಳಿ ಮರಳು ಚೀಲಗಳ ಸಹಾಯದಿಂದ ರೈಲನ್ನು ನಿಲ್ಲಿಸಲಾಗಿದೆ.
ಲೋಕೊಪೈಲೆಟ್‌ಗಳಿಲ್ಲದೇ ರೈಲ್ವೆ ನಿಲ್ದಾಣಗಳ ಮೂಲಕ ವೇಗವಾಗಿ ಹಾದುಹೋಗುವ ರೈಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 53 ವ್ಯಾಗನ್‌ಗಳ ಗೂಡ್ಸ್ ರೈಲು ಚಿಪ್ ಕಲ್ಲುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ಪಂಜಾಬ್‌ನ ಉಂಚಿ ಬಸ್ಸಿ ನಿಲ್ದಾಣದ ಬಳಿ ರೈಲ್ವೆ ಹಳಿಗಳು ಏರಿಳಿತವಿದ್ದ ಕಾರಣ ತುಸು ವೇಗ ಕಡಿಯಾಗಿದ್ದಾಗ ಮರಳು ಚೀಲಗಳನ್ನು ಹಾಕಿ ರೈಲನ್ನು ತಡೆದು ನಿಲ್ಲಿಸಲಾಗಿದೆ.

ಆಗಿದ್ದೇನು?: ಚಾಲಕ ಬದಲಾವಣೆಗಾಗಿ ರೈಲು ಜಮ್ಮುವಿನ ಕಥುವಾ ರೈಲು ನಿಲ್ದಾಣದಲ್ಲಿ ನಿಂತಿತ್ತು. ಜಮ್ಮು-ಜಲಂದರ್ ವಿಭಾಗದಲ್ಲಿ ಇಳಿಜಾರಿನ ಗ್ರೇಡಿಯಂಟ್ ಹಳಿಯಲ್ಲಿ ರೈಲು ಮುಂದಕ್ಕೆ ಚಲಿಸಲು ಪ್ರಾರಂಭಿಸಿದೆ. ರೈಲಿನ ಎಂಜಿನ್ ಸ್ಟಾರ್ಟ್ ಆದಮೇಲೆ ಲೊಕೊಪೈಲೆಟ್ ಹ್ಯಾಂಡ್ ಬ್ರೇಕ್ ಹಾಕದೆ ಎಲ್ಲಿಗೋ ಹೋಗಿದ್ದ. ಇದರಿಂದಾಗಿ ರೈಲು ಇಳಿಜಾರಿದ್ದ ಕಾರಣ ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸಿದೆ ಎನ್ನಲಾಗಿದೆ.
ರೈಲು ಮುಂದಕ್ಕೆ ಚಲಿಸಲು ಪ್ರಾರಂಭಿಸಿದಾಗ ಲೊಕೋಪೈಲೆಟ್ ಹಾಗೂ ಸಹಾಯಕ ಪೈಲೆಟ್ ಇಬ್ಬರು ರೈಲಿನಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 7:25 ರಿಂದ 9 ಘಂಟೆಯ ನಡುವೆ ಈ ಘಟನೆ ನಡೆದಿದ್ದು, 70 ಕಿ.ಮೀಗಿಂತ ಹೆಚ್ಚು ದೂರವನ್ನು ಕ್ರಮಿಸಿದ ನಂತರ ರೈಲು ಪಂಜಾಬ್ ಬಳಿಯ ಬಸ್ಸಿ ಎಂಬಲ್ಲಿ ಏರಿಳಿತವಿದ್ದ ಕಾರಣ ನಿಧಾನಗೊಂಡಿದ್ದು, ಮರಳು ಚೀಲಗಳ ಸಹಾಯದಿಂದ ತಡೆದು ನಿಲ್ಲಿಸಲಾಗಿದೆ.

ಮಾರ್ಗದುದ್ದಕ್ಕೂ ಎಚ್ಚರಿಕೆ: ರೈಲು ಅಧಿಕಾರಿಗಳ ನಿಯಂತ್ರಣದಲ್ಲಿಲ್ಲದ ಕಾರಣ ವಿಷಯ ತಿಳಿಯುತ್ತಿದ್ದಂತೆ ಮಾರ್ಗದುದ್ದಕ್ಕೂ ತೀವ್ರ ಎಚ್ಚರಿಕೆ ವಹಿಸಲಾಗಿತ್ತು. ಜಲಂದರ್-ಪಠಾಣ್ ಕೋಟ್ ವಿಭಾಗದ ಎಲ್ಲಾ ರೈಲು - ರಸ್ತೆ ಕ್ರಾಂಸಿಂಗ್‌ಗಳನ್ನು ತಡೆಯಲಾಗಿತ್ತು. ರೈಲಿಗೆ ಅಡ್ಡವಿರುವ ಎಲ್ಲಾ ಇತರ ರೈಲುಗಳನ್ನು ಅಲ್ಲಿಂದ ತೆರವುಗೊಳಿಸಿ ಸಂಭವನೀಯ ಅವಘಡಗಳನ್ನು ತಪ್ಪಿಸಲಾಗಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ, ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರಿಂದ ಭೀಕರ ಅನಾಹುತಗಳನ್ನು ತಪ್ಪಿಸಲಾಗಿದೆ. ಒಂದು ವೇಳೆ ಕ್ರಾಸಿಂಗ್‌ಗಳ ಬಳಿ ಕೊಂಚ ಯಾಮಾರಿದರೂ ತೀವ್ರ ಅನಾಹುತಗಳು ನಡೆಯುತ್ತಿದ್ದವು. ಕೂಡಲೇ ಎಲ್ಲಾ ಕ್ರಾಸಿಂಗ್‌ಗಳನ್ನು ಸುರಕ್ಷಿತಗೊಳಿಸಿದ್ದರಿಂದ ಅಪಾಯಗಳನ್ನು ತಪ್ಪಿಸಲಾಗಿದೆ ಎಂದು ಜಲಂಧರ್ ಎಸ್‌ಐ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣ ಹಾಗೂ ಚಾಲಕರ ನಿರ್ಲಕ್ಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಜಮ್ಮುವಿನ ಕಥುವಾದಲ್ಲಿ ರೈಲನ್ನು ಭದ್ರಪಡಿಸಲಾಗಿತ್ತೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ ಎಂದು ವಕ್ತಾರರು ತಿಳಿಸಿದ್ದು, ಆಳವಾದ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ತೆದುಕೊಳ್ಳುವುದಾಗಿ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications