ಬಡವರಿಗೆ ದುಡ್ಡಿಲ್ಲ; ಪ್ರಚಾರಕ್ಕೆ ಕಾಸಿದೆ: ಅಖಿಲೇಶ್ ಯಾದವ್ ರಥ ಯಾತ್ರಗೆ 'ಹೈಟೆಕ್ ಬಸ್'
ಉತ್ತರ ಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಚಾರಕ್ಕಾಗಿ ಹೈಟೆಕ್ ಬಸ್ಸನ್ನು ಖರೀದಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇತ್ತೀಚೆಗಷ್ಟೇ ವಿಕಾಸ ರಥ ಯಾತ್ರೆಯನ್ನು ಆರಂಭಿಸಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಪುತ್ರ ಅಖಿಲೇಶ್ ಯಾದವ್ ಅವರ ವಿಕಾಸ ರಥ ಯಾತ್ರೆಗೆ ಚಾಲನೆ ನೀಡಿದ್ದರು. ಪಕ್ಷದ ಆತಂರಿಕ ಕಲಹ ಶಮನವಾಗದಿದ್ದರೂ ಅಖಿಲೇಶ್ ನಡೆಸುತ್ತಿರುವ ರಥ ಯಾತ್ರೆಯಲ್ಲಿ ಉಪಸ್ಥಿತಿ ತೋರುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದ್ದರು.

ಅಖಿಲೇಶ್ ಅವರ ರಥ ಯಾತ್ರೆ ಎಲ್ಲ ಹಂತದಲ್ಲೂ ಅತ್ಯಂತ ಪ್ರಾಮುಖ್ಯವೆನಿಸುತ್ತದೆ. ಯಾಕೆಂದರೆ ಇದಕ್ಕಾಗಿ ಅವರು ವಿಶ್ವ ದರ್ಜೆಯ ಮರ್ಸಿಡಿಸ್ ಬೆಂಝ್ ಬಳಕೆ ಮಾಡಿದ್ದು, ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಾರ್ಪಾಡುಗೊಳಿಸಿದ್ದಾರೆ.

ರಾಜಕೀಯ ಉದ್ದೇಶದ ರಥ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಾದ್ಯಂತ ಸಂಚರಿಸಲಿರುವ ಅಖಿಲೇಶ್ ಯಾದವ್ ರೈತರು, ಯುವಕರು, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಗರಿಷ್ಠ ಮತ್ತ ಗಿಟ್ಟಿಸಿಕೊಂಡು ಪಕ್ಷವನ್ನು ಮಗದೊಮ್ಮೆ ಅಧಿಕಾರಕ್ಕೇರಿಸುವುದು ಅಖಿಲೇಶ್ ಇರಾದೆಯಾಗಿದೆ. ಇದಕ್ಕಾಗಿ ಕೋಟಿ ಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಿ ದುಬಾರಿ ಬೆಂಝ್ ಬಸ್ಸನ್ನು ರೂಪಿಸಿದ್ದಾರೆ.

ಅಖಿಲೇಶ್ ಯಾದವ್ ಅವರ ವಿಕಾಸ ರಥ ಯಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಏರ್ಪಡಿಸಿದ್ದ ಬಸ್ಸು ಒಂದು ಕೀ.ಮೀ.ಗಳಷ್ಟು ದೂರ ಸಂಚರಿಸುತ್ತಿರುವಾಗಲೇ ತಾಂತ್ರಿಕ ತೊಂದರೆ ಎದುರಾಗಿತ್ತು.

ಮುಂದಿಟ್ಟ ಹೆಜ್ಜೆ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯಲ್ಲ ಎಂಬ ರೀತಿಯಲ್ಲಿ ಅಖಿಲೇಶ್ ಯಾದವ್, ತಮ್ಮ ಅಧಿಕೃತ ಎಸ್ ಯುವಿ ಕಾರಲ್ಲಿ ವಿಕಾಸ ರಥ ಯಾತ್ರೆಯನ್ನು ಮುಂದುವರಿಸಿದ್ದರು.

ನವೀಕೃತಗೊಳಿಸಿರುವ ಮರ್ಸಿಡಿಸ್ ಬೆಂಝ್ ಬಸ್ಸು ಬರೋಬ್ಬರಿ ಐದು ಕೋಟಿ ರುಪಾಯಿಗಳಷ್ಟು ಬೆಲೆ ಬಾಳುತ್ತದೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಭದ್ರತೆ ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವದರ್ಜೆಯ ಗುಣಮಟ್ಟದ ಒಳಮೈಯನ್ನು ವಿನ್ಯಾಸಗೊಳಿಸಲಾಗಿದೆ.

ಬಸ್ಸಿನೊಳಗೆ ಗ್ಯಾಡ್ಜೆಟ್ ಸೇರಿದಂತೆ ವಿಶ್ವದರ್ಜಯ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಇದು ಬುಲೆಟ್ ಫ್ರೂಫ್ ಗಾಜುಗಳಿಂದ ಭದ್ರವಾಗಿದೆ.

10 ಚಕ್ರಗಳ ಮರ್ಸಿಡಿಸ್ ಬಸ್ಸನ್ನು ಪ್ರಮುಖವಾಗಿಯೂ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಒಂದು ಭಾಗವು ಮುಖ್ಯಮಂತ್ರಿ ಕಚೇರಿಗೆ ಸಮಾನವಾಗಿ ಸಿಎಂ ಅವರಿಗೆ ಕೆಲಸಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.

ಈ ಕಚೇರಿ ಪ್ರದೇಶದಲ್ಲಿ ಐದರಿಂದ ಆರು ಮಂದಿ ಕುಳಿತುಕೊಂಡು ಸಭೆಯನ್ನು ನಡೆಸಬಹುದಾಗಿದೆ.

ಬಸ್ಸಿನ ಉಳಿದ ಭಾಗವು ಅಡುಗೆ ಕೋಣೆ, ವಿಶ್ರಾಂತಿ ಕೊಠಡಿ ಮತ್ತು ವಾಶ್ ರೂಂನಿಂದ ಆವೃತ್ತವಾಗಿದೆ.

ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿಟ್ಟಿನಲ್ಲಿ ಓಪನ್ ಟಾಫ್ ರೂಫ್ ವ್ಯವಸ್ಥೆ ಮತ್ತು ಅತ್ಯಾಧುನಿಕ ಸೌಂಡ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ಅಖಿಲೇಶ್ ಅವರ ಮರ್ಸಿಡಿಸ್ ಬೆಂಝ್ ಬಸ್ಸಿನಲ್ಲಿ 4ಜಿ ಇಂಟರೆನೆಟ್ ಸೇವೆಯು ದಿನದ 24 ಗಂಟೆಯೂ ಲಭ್ಯವಾಗಲಿದ್ದು, ಟ್ವಿಟರ್ ನಲ್ಲಿ ಸಕ್ರಿಯವಾಗಿರಲು ನೆರವಾಗಲಿದೆ.

ವಿಕಾಸ ರಥ ಯಾತ್ರೆಯ ಬಸ್ಸಿನಲ್ಲಿದ್ದುಕೊಂಡೇ ವಿಡಿಯೋ ಕಾಲ್ ಮೂಲಕವೂ ಯಾರನ್ನೂ ಬೇಕಾದರೂ ಸಂಪರ್ಕಿಸಬಹುದಾಗಿದೆ.

ಬಸ್ಸಿನಲ್ಲಿ ಜೋಡಣೆಯಾಗಿರುವ ಎಲ್ ಇಡಿ ಸ್ಕೀನ್ ಮುಖಾಂತರ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯ ವಿಡಿಯೋ, ಫೋಟೋ ಗಳನ್ನು ಜನ ಸಾಮಾನ್ಯರಿಗೆ ತೋರಿಸಲು ನೆರವಾಗಲಿದೆ.

ಒಟ್ಟಿನಲ್ಲಿ ಪಕ್ಷದ ಆಂತರಿಕ ಕಲಹದ ನಡುವೆಯೂ ಏಕತೆಯನ್ನು ಸಾರುವಲ್ಲಿ ಸಮಾಜವಾದಿ ಪಕ್ಷ ಯಶಸ್ವಿಯಾಗಿತ್ತು. ಅಖಿಲೇಶ್ ಯಾದವ್ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಸಹ ವೇದಿಕೆ ಹಂಚಿಕೊಂಡಿರುವುದು ಬಹಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.


Click it and Unblock the Notifications








