ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಪಕ್ಕದ ರಾಜ್ಯದ ಐಶ್ವರ್ಯಗೆ ಆಹ್ವಾನ: ಯಾರಿವರು?
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಭಾನುವಾರ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ದೇಶದ ನಾನಾ ಭಾಗಗಳಿಂದ 8,000 ವಿಶೇಷ ಆಹ್ವಾನಿತರು ಭಾಗವಹಿಸುತ್ತಿದ್ದು, ದಕ್ಷಿಣ ರೈಲ್ವೆ (Southern Railway) ಚೆನ್ನೈ ವಿಭಾಗದ ಹಿರಿಯ ಸಹಾಯಕ ಲೋಕೋ ಪೈಲಟ್ ಐಶ್ವರ್ಯ ಎಸ್ ಮೆನನ್ ಅವರು ಕೂಡ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ವಂದೇ ಭಾರತ್ ರೈಲಿನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2 ಲಕ್ಷಕ್ಕೂ ಹೆಚ್ಚು ಗಂಟೆಗಳ ಕಾಲ ರೈಲನ್ನು ಓಡಿಸುವ ದಾಖಲೆಯನ್ನು ಹೊಂದಿದ್ದಾರೆ.
ಐಶ್ವರ್ಯ ಎಸ್ ಮೆನನ್ ಅವರು, ಚೆನ್ನೈ-ವಿಜಯವಾಡ ಮತ್ತು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಚಾಲನೆ ಮಾಡಿದ್ದಾರೆ. ಈ ಹಿಂದೆ ಜನ ಶತಾಬ್ದಿ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಆಗಿಯೂ ಕೆಲಸ ಮಾಡಿರುವ ಅನುಭವನನ್ನು ಹೊಂದಿದ್ದಾರೆ. ಅವರ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೂ ಪುರಸ್ಕಾರವನ್ನು ಪಡೆದಿದ್ದಾರೆ.

ದಕ್ಷಿಣ ರೈಲ್ವೆಯ ಐಶ್ವರ್ಯ ಮೆನನ್ ಮಾತ್ರವಲ್ಲದೆ, ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಸುರೇಖಾ ಯಾದವ್ ಸಹ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಿಂದ ಸೋಲಾಪುರ ಮಾರ್ಗವಾಗಿ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಚಾಲಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದು, ಮೋದಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ 10 ಲೋಕೋ ಪೈಲಟ್‌ಗಳಲ್ಲಿ ಒಬ್ಬರಾಗಿದ್ದಾರೆ.
ಸುರೇಖಾ ಯಾದವ್ ಅವರು 1988ರಲ್ಲಿ ದೇಶದ ಮೊದಲ ಮಹಿಳಾ ಲೋಕೋ ಪೈಲಟ್ ಆಗಿ ಸೇವೆಗೆ ಸೇರ್ಪಡೆಗೊಂಡಿದ್ದರು. ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಕೂಡ ಅವರೇ ಆಗಿದ್ದಾರೆ. ಕೇಂದ್ರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ ಹಲವು ಕಾರ್ಮಿಕರನ್ನು ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ 7:15ಕ್ಕೆ ಪ್ರಧಾನಿ ಹಾಗೂ ನೂತನ ಕೇಂದ್ರ ಸಚಿವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. ಈ ಸಮಾರಂಭಕ್ಕೆ ನೆರೆಯ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದ್ದು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಖಚಿತಪಡಿಸಿದ್ದಾರೆ.
ರೈಲ್ವೆ ಇಲಾಖೆಯನ್ನು ಅತ್ಯಾಧುನಿಕರಣಗೊಳಿಸುವ ಭಾಗವಾಗಿ 2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ನಡುವೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ಬಿಡಲಾಗಿತ್ತು. ಆ ನಂತರ ವಿವಿಧ ರಾಜ್ಯಗಳಲ್ಲಿಯೂ ಈ ರೈಲುಗಳು ಓಡಾಟವನ್ನು ಆರಂಭಿಸಿದ್ದವು. 2024ರ ಮಾರ್ಚ್ 31ರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಒಟ್ಟು 1,24,87,540 ಕಿ.ಮೀ ದೂರದವರೆಗೂ ಕಾರ್ಯಾಚರಣೆಯನ್ನು ನಡೆಸಿವೆ.

ಈ ರೈಲುಗಳು ಗರಿಷ್ಠ ವೇಗದಲ್ಲಿ ಸಂಚರಿಸುವುದಕ್ಕೆ ಹೆಸರುವಾಸಿಯಾಗಿವೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಕವಾಚ್ ವ್ಯವಸ್ಥೆಯನ್ನು ಹೊಂದಿವೆ. ಇವುಗಳಲ್ಲಿ ಪ್ರಯಾಣಿಕರಿಗೂ ಅತ್ಯಾಧುನಿಕ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಹೆಚ್ಚು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಮತ್ತು ಅಗ್ನಿ ನಿರೋಧಕ ಸಾಧನ ಒಳಗೊಂಡಂತೆ ವಿವಿಧ ಸೌಲಭ್ಯಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications