Vande Bharat: ಬಳ್ಳಾರಿ - ಬೆಂಗಳೂರು ನಡುವೆ ಶೀಘ್ರ ವಂದೇ ಭಾರತ್ ಎಕ್ಸ್‌ಪ್ರೆಸ್, ಸಿಹಿಸುದ್ದಿ?
ರಾಜ್ಯದಲ್ಲಿ ಶೀಘ್ರದಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚರಿಸಲಿದೆ. ಕೆಲವೇ ದಿನಗಳಲ್ಲಿ ಬಳ್ಳಾರಿ ಭಾಗದ ಜನರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಇದಕ್ಕಾಗಿ, ಸಿದ್ಧತೆಗಳು ಶುರುವಾಗುವ ಎಲ್ಲ ಲಕ್ಷಣಗಳಿವೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಬಳ್ಳಾರಿ - ಗುಂತಕಲ್ (Bellary - Guntakal) ಮಾರ್ಗವಾಗಿ ಹೊಸಪೇಟೆ - ಬೆಂಗಳೂರು (hospet - bangalore) ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ಪ್ರಾರಂಭಿಸುವ ಬಗ್ಗೆ ನೈರುತ್ಯ ರೈಲ್ವೆ (South Western Railway) ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದು, ಈ ಭಾಗದ ಜನರಿಗೆ ಖುಷಿ ತಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಅವರು, 'ವಂದೇ ಭಾರತ್' ಕಾರ್ಯಚರಣೆ ಶುರು ಮಾಡುವ ಕುರಿತಂತೆ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ ನಿರ್ದೇಶನ ನೀಡಿದೆ. ಈ ಭಾಗದಲ್ಲಿ ರೈಲುಗಳು 100 - 130 kmph ವೇಗದಲ್ಲಿ ಚಲಿಸಲು ಸಾಧ್ಯವಾಗುವಂತೆ ಹಳಿಗಳಿವೆ. ಬೆಂಗಳೂರು - ಹೊಸಪೇಟೆ ನಡುವೆ ಜೋಡಿ ಮಾರ್ಗವಿದ್ದು, ಸಂಪೂರ್ಣ ವಿದ್ಯುದೀಕರಣವಾಗಿದೆ ಎಂದು ಹೇಳಿದ್ದಾರೆ.
ಸದ್ಯ, ಬೆಂಗಳೂರು - ಹೊಸಪೇಟೆ ನಡುವೆ ಕಾರ್ಯಚರಣೆ ನಡೆಸುತ್ತಿರುವ ಇಂಟರ್ ಸಿಟಿ ಎಕ್ಸ್‌ಪ್ರೆಸ್ (Intercity Express), ಬೆಳಗ್ಗೆ 5 ಗಂಟೆಗೆ ಹೊರಟು ಮಾರ್ಗ ಮಧ್ಯೆ ಬರುವ 20ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ನಿಂತು, ಸಂಜೆ 4.25ಕ್ಕೆ ಹೊಸಪೇಟೆ ತಲುಪುತ್ತದೆ. ಅದೇ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಿದರೆ, ಪ್ರಯಾಣದ ಅವಧಿಯು ಮತ್ತಷ್ಟು ಕಡಿಮೆಯಾಗುತ್ತದೆ.
ಬೆಂಗಳೂರು - ಹೈದರಾಬಾದ್ (Bangalore - Hyderabad) ನಡುವೆಯೂ ಕೆಲವೇ ದಿನಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ, ಎಂದಿನಿಂದ ಕಾರ್ಯಚರಣೆ ಶುರು ಮಾಡಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇವರೆಡು ನಗರಗಳ ನಡುವೆ 618 ಕಿಲೋಮೀಟರ್ ಅಂತರವನ್ನು 7 - 8 ಗಂಟೆಗಳಲ್ಲಿ ವಂದೇ ಭಾರತ್ ಕ್ರಮಿಸಲಿದೆ ಎಂದು ಹೇಳಲಾಗಿದೆ.
ಶಿವಮೊಗ್ಗ - ಬೆಂಗಳೂರು (Shivamogga - Bengaluru) ಮಧ್ಯೆಯೂ ಶೀಘ್ರದಲ್ಲಿಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕಾಗಿ ಎಲ್ಲ ಸಿದ್ಧತೆಗಳು ಪ್ರಾರಂಭವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರು - ಬೆಂಗಳೂರು (Mangalore - Bangalore) ನಡುವೆಯೂ ಈ ರೈಲು ಓಡಾಡಬಹುದು ಎಂದು ಹೇಳಲಾಗಿದೆ.
ಪ್ರಸ್ತುತ, ಕರ್ನಾಟಕದಲ್ಲಿ ಎರಡು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಓಡಾಟ ನಡೆಸುವ ರೈಲು ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿ ಕಾರ್ಯಚರಣೆ ನಡೆಸುತ್ತಿದೆ. 7 ಗಂಟೆ ಪ್ರಯಾಣದ ಅವಧಿಯಿದೆ. ಇನ್ನೊಂದು, ರೈಲು ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಯಾವುದೇ ಅತ್ಯಾಧುನಿಕ ವಿಮಾನಕ್ಕೆ ಕಮ್ಮಿ ಇಲ್ಲದ ರೀತಿಯಲ್ಲಿ ಸೌಕರ್ಯವನ್ನು ಪಡೆದಿವೆ. ಇದರಲ್ಲಿ ಪ್ರತೇಕ ಎಂಜಿನ್ ಇಲ್ಲ. ಸಂಪೂರ್ಣ ಎಸಿಯಿರುವ ಈ ರೈಲಿನ ಸೀಟುಗಳು ಹೆಚ್ಚು ಆರಾಮದಾಯವಾಗಿವೆ. ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ, ವೈಫೈ, ಅಗ್ನಿ ಸುರಕ್ಷತಾ ಸಾಧನಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications