Vande Bharat ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮನಸೋತ ಪ್ರಯಾಣಿಕರು.. ಫುಲ್ ಹೌಸ್‌ಫುಲ್!
ಭಾರತದಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ನಡುವೆ ಈ ರೈಲಿನ ಮೊದಲ ಸಂಚಾರ ಶುರುವಾಗಿತ್ತು. ಆ ಬಳಿಕ ವಿವಿಧ ರಾಜ್ಯಗಳಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡಾಟವನ್ನು ಆರಂಭಿಸಿದ್ದವು. ಇದೀಗ, ಭೂಮಿಗೆ 310 ಸುತ್ತುಗಳನ್ನು ಹಾಕುವಷ್ಟು ದೂರವನ್ನು ಕ್ರಮಿಸಿವೆ ಎಂದು ವರದಿಯಾಗಿದೆ.
ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು 18,423 ಟ್ರಿಪ್‌ಗಳನ್ನು ಪೂರ್ಣಗೊಳಿಸಿವೆ. ಈ ರೈಲುಗಳ ಸೀಟುಗಳು ಶೇಕಡ 105.57% ಭರ್ತಿಯಾಗಿದ್ದು, 26 ರಿಂದ 45 ವರ್ಷ ವಯಸ್ಸಿನ ಶೇಕಡ 45.9% ಜನರು ಪ್ರಯಾಣಿಸಿದ್ದಾರೆ. 2024ರ ಮಾರ್ಚ್ 31ರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಒಟ್ಟು 1,24,87,540 ಕಿ.ಮೀ ದೂರದವರೆಗೂ ಓಡಾಟವನ್ನು ನಡೆಸಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಗರಿಷ್ಠ ವೇಗದಲ್ಲಿ ಸಂಚರಿಸುವುದಕ್ಕೆ ಹೆಸರುವಾಸಿಯಾಗಿವೆ. ಈ ರೈಲುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಕವಾಚ್ ವ್ಯವಸ್ಥೆಯನ್ನು ಹೊಂದಿವೆ. ಪ್ರಯಾಣಿಕರಿಗೂ ಅತ್ಯಾಧುನಿಕ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಸಂಪೂರ್ಣ ಎಸಿ (ಹವಾನಿಯಂತ್ರಿತ) ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಹೆಚ್ಚು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಹಾಗೂ ಅಗ್ನಿ ನಿರೋಧಕ ಸಾಧನ ಸೇರಿದಂತೆ ಅನೇಕ ಸೌಲಭ್ಯಗಳಿವೆ.
ಕರ್ನಾಟಕದ ವಿವಿಧ ಮಾರ್ಗಗಳಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ, ಚೆನ್ನೈ - ಬೆಂಗಳೂರು - ಮೈಸೂರು, ಕಾಚಿಗುಡ (ಹೈದರಾಬಾದ್) - ಯಶವಂತಪುರ, ಮಂಗಳೂರು - ಮಡಗಾಂವ್ ಹಾಗೂ ಕೊಯಮತ್ತೂರು - ಬೆಂಗಳೂರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಓಡಾಟವನ್ನು ಮಾಡುತ್ತಿವೆ.

ರೈಲ್ವೆ ಇಲಾಖೆಯು ಸಾರ್ವಜನಿಕರ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಂದೇ ಭಾರತ್ ಸ್ಲೀಪರ್‌ನ್ನು (Vande Bharat Sleeper) ಕೂಡ ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಈ ರೈಲು ಹಳಿಗೆ ಬರುವ ನಿರೀಕ್ಷೆಯಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಕಾ ಘಟಕದಲ್ಲಿ ವಂದೇ ಭಾರತ್ ಸ್ಲೀಪರ್‌ನ್ನು ಸಿದ್ಧಪಡಿಸಲಾಗುತ್ತಿದೆ.
ವಿಶ್ವದರ್ಜೆಯ ಸೌಕರ್ಯಗಳನ್ನು ಈ ರೈಲು ಹೊಂದಿರಲಿದ್ದು, ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದ್ದು, ಅದರಲ್ಲಿ 823 ಬರ್ತ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ವಂದೇ ಭಾರತ್ ಸ್ಲೀಪರ್ ಕೂಡ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಬಹುದು ಎನ್ನಲಾಗಿದೆ. ಜೊತೆಗೆ ಸ್ವಯಂ ಚಾಲಿತ ಬಾಗಿಲು ಹಾಗೂ ವಾಸನೆ ಮುಕ್ತ ಶೌಚಾಲಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ (Vande Metro) ಸಹ ಶೀಘ್ರದಲ್ಲಿಯೇ ಕಾರ್ಯಾಚರಣೆಗೆ ಇಳಿಯಲಿದೆ. ಈ ರೈಲು ಎರಡು ಪ್ರಮುಖ ನಗರಗಳನ್ನು ಬೆಸೆಯಲಿದ್ದು, ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications