Vande Bharat Express: ಕರ್ನಾಟಕದಲ್ಲಿ ಸಂಚರಿಸುವ ಈ ರೈಲುಗಳ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳಿವು
ದೇಶದ ನಾನಾ ಭಾಗಗಳಂತೆ ಕರ್ನಾಟಕದಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ ಹೈ-ಸ್ವೀಡ್ ರೈಲಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯ, ರಾಜ್ಯದ ವಿವಿಧೆಡೆಗಳಲ್ಲಿಯೂ ಈ ರೈಲುಗಳು ಓಡಾಟವನ್ನು ನಡೆಸುತ್ತಿದ್ದು, ವೇಳಾಪಟ್ಟಿ ಹಾಗೂ ನಿಲುಗಡೆ ನಿಲ್ದಾಣದ ಬಗ್ಗೆ ಇಲ್ಲಿದೆ ಮಾಹಿತಿ.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 2022ರಲ್ಲಿ ಮೈಸೂರು - ಚೆನ್ನೈ ನಡುವೆ ಸಂಚಾರವನ್ನು ಆರಂಭಿಸಿತ್ತು. ಚೆನ್ನೈ ಸೆಂಟ್ರಲ್‌ನಿಂದ ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 5.50ಕ್ಕೆ ಹೊರಡುವ ಈ ರೈಲು, ಮಧ್ಯಾಹ್ನ 12.20ಕ್ಕೆ ಮೈಸೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 1.05ಕ್ಕೆ ಸಂಚಾರವನ್ನು ಪ್ರಾರಂಭಿಸಿ, ರಾತ್ರಿ 7.20ಕ್ಕೆ ಚೆನ್ನೈ ಸೆಂಟ್ರಲ್‌ಗೆ ತೆರಳುತ್ತದೆ. ಮಾರ್ಗ ಮಧ್ಯೆ ಕಟಪಾಡಿ ಹಾಗೂ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ.

ಏಪ್ರಿಲ್ 5 ರಿಂದ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವಾಗಿ ಮತ್ತೊಂದು ವಂದೇ ಭಾರತ್ ರೈಲು ಓಡಾಟವನ್ನು ಪ್ರಾರಂಭಿಸಿದೆ. ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ಈ ರೈಲು, ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೆಆರ್ ಪುರಂ, ಕಟಪಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗಿ ಮಧ್ಯಾಹ್ನ 12.25ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಅಲ್ಲಿಂದ ಸಂಜೆ 5 ಗಂಟೆಗೆ ಸಂಚಾರವನ್ನು ಆರಂಭಿಸಿ, ರಾತ್ರಿ 11.20ಕ್ಕೆ ಮೈಸೂರಿಗೆ ಬರುತ್ತದೆ. ಇದು ಕೂಡ ಬುಧವಾರದಂದು ಕಾರ್ಯಾಚರಣೆಯನ್ನು ನಡೆಸುವುದಿಲ್ಲ.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿಯೂ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 5.45ಕ್ಕೆ ಹೊರಡುವ ಈ ರೈಲು, 12.10ರ ಸುಮಾರಿಗೆ ಧಾರವಾಡವನ್ನು ತಲುಪುತ್ತದೆ. ಮಾರ್ಗ ಮಧ್ಯೆ ದಾವಣಗೆರೆ ಹಾಗೂ ಹುಬ್ಬಳ್ಳಿ ನಿಲ್ದಾಣದಲ್ಲಿ ನಿಲ್ಲುತ್ತದೆ. ಧಾರವಾಡದಿಂದ 1.15ಕ್ಕೆ ಓಡಾಟವನ್ನು ಶುರು ಮಾಡಿ, ರಾತ್ರಿ 7.45ರ ಸುಮಾರಿಗೆ ಬೆಂಗಳೂರು ತಲುಪುತ್ತದೆ.

ಕಲಬುರಗಿ ಹಾಗೂ ಬೆಂಗಳೂರು ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ಮಾಡುತ್ತಿದೆ. ಪ್ರತಿದಿನ ಬೆಳಗ್ಗೆ 5:15ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 2ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2:40ಕ್ಕೆ ಸಂಚಾರವನ್ನು ಆರಂಭಿಸಿ ರಾತ್ರಿ 11:30ಕ್ಕೆ ಕಲಬುರಗಿಯನ್ನು ತಲುಪುತ್ತದೆ. ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್ & ರಾಯಚೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಿರುತ್ತದೆ. ಶುಕ್ರವಾರದಂದು ಓಡಾಟ ನಡೆಸುವುದಿಲ್ಲ.
ಕಾಚಿಗುಡ (ಹೈದರಾಬಾದ್) ಮತ್ತು ಯಶವಂತಪುರ (ಬೆಂಗಳೂರು) ಮಧ್ಯೆಯೂ ವಂದೇ ಭಾರತ್ ಓಡಾಟವನ್ನು ನಡೆಸುತ್ತಿದೆ. ಬುಧವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 5.45ಕ್ಕೆ ಸಂಚಾರವನ್ನು ಆರಂಭಿಸುವ ಈ ರೈಲು, ಮಧ್ಯಾಹ್ನ 2ಕ್ಕೆ ಯಶವಂತಪುರಕ್ಕೆ ಬರುತ್ತದೆ. ಇಲ್ಲಿಂದ 2.45ಕ್ಕೆ ಓಡಾಟವನ್ನು ಶುರು ಮಾಡಲಿದ್ದು, ರಾತ್ರಿ 11.8ರ ಸುಮಾರಿಗೆ ಕಾಚಿಗುಡವನ್ನು ತೆರಳುತ್ತದೆ. ಮೆಹಬೂಬ್ ನಗರ, ಕರ್ನುಲ್, ಅನಂತಪುರ ಹಾಗೂ ಧರ್ಮಾವರಂ ನಿಲ್ದಾಣದಲ್ಲಿ ನಿಲ್ಲುತ್ತದೆ.

ಕೊಯಮತ್ತೂರು ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ನಡೆಸುತ್ತಿದೆ. ಗುರುವಾರ ಬಿಟ್ಟು, ಪ್ರತಿದಿನ ಬೆಳಗ್ಗೆ 7.25ಕ್ಕೆ ಕೊಯಮತ್ತೂರಿನಿಂದ ಹೊರಡುವ ಈ ರೈಲು, ಮಧ್ಯಾಹ್ನ 1.50ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2.20ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 8.45ರ ಸುಮಾರಿಗೆ ಕೊಯಮತ್ತೂರು ಜಂಕ್ಷನ್ ತಲುಪುತ್ತದೆ. ತಿರುಪ್ಪೂರು, ಈರೋಡ್, ಸೇಲಂ, ಧರ್ಮಪುರಿ, ಹೊಸೂರು ನಿಲ್ದಾಣದಲ್ಲಿ ನಿಲ್ಲುತ್ತದೆ.
ಮಂಗಳೂರು - ಮಡಗಾಂವ್ (ಗೋವಾ) ಮಧ್ಯೆಯೂ ವಂದೇ ಭಾರತ್ ರೈಲು ಓಡಾಟವನ್ನು ನಡೆಸುತ್ತಿದೆ. ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಕಾರ್ಯಚರಣೆಯನ್ನು ಆರಂಭಿಸುವ ಈ ರೈಲು, ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪುತ್ತದೆ. ಇಲ್ಲಿಂದ ಸಂಜೆ 6.10ಕ್ಕೆ ಸಂಚಾರವನ್ನು ಶುರು ಮಾಡಲಿದ್ದು, ರಾತ್ರಿ 10.45ರ ಸುಮಾರಿಗೆ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಕಾರವಾರ ಹಾಗೂ ಉಡುಪಿಯಲ್ಲಿ ನಿಲುಗಡೆಯಾಗಲಿದ್ದು, ಗುರುವಾರ ಓಡಾಟವನ್ನು ನಡೆಸುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications