Vande Bharat Metro: ಈ ನಗರಗಳ ನಡುವೆ ವಂದೇ ಭಾರತ್ ಮೆಟ್ರೋ.. ಕೇವಲ 1.5 ಗಂಟೆ ಪ್ರಯಾಣ!
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ - ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ವಂದೇ ಭಾರತ್ ಮೆಟ್ರೋ (Vande Bharat Metro) ಕೂಡ ಹಳಿಗೆ ಬರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ದೂರದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸುವುದರೊಂದಿಗೆ ಹತ್ತಿರದ ನಗರಗಳನ್ನು ಬೆಸೆಯಲು ಈ ವಂದೇ ಭಾರತ್ ಮೆಟ್ರೋಗಳನ್ನು ಕಾರ್ಯಾಚರಣೆಗೆ ಅಣಿಗೊಳಿಸಲಾಗುತ್ತಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ಸಹ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಮುಂಬರುವ ಒಂದೆರೆಡು ತಿಂಗಳಲ್ಲಿ ನೂತನ ವಂದೇ ಮೆಟ್ರೋ ದೆಹಲಿ ಹಾಗೂ ಆಗ್ರಾ ನಡುವೆ ಸಂಚಾರ ನಡೆಸಲಿದೆ ಎಂದು ತಿಳಿದುಬಂದಿದೆ.

ಹೊಸ ವಂದೇ ಭಾರತ್ ಮೆಟ್ರೋ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಓಡಾಟವನ್ನು ನಡೆಸಲಿದ್ದು, ಇವೆರೆಡು ನಗರಗಳ ಮಧ್ಯೆಯಿರುವ 200 ಕಿಲೋಮೀಟರ್ ಅಂತರವನ್ನು ಕೇವಲ 1.5 ಗಂಟೆಯಲ್ಲಿ ತಲುಪಲಿದೆ ಎಂದು ಹೇಳಲಾಗಿದೆ. ಈ ರೈಲು ಬೆಳಗ್ಗೆಯೇ ದೆಹಲಿಯಿಂದ ಆಗ್ರಾಗೆ ಸಂಚಾರವನ್ನು ಪ್ರಾರಂಭಿಸಲಿದ್ದು, ದಿನನಿತ್ಯ ಕಚೇರಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಮೆಟ್ರೋ ರೈಲನ್ನು ತಯಾರಿಸಲಾಗುತ್ತಿದೆ. ಜುಲೈನಲ್ಲಿ ಈ ರೈಲು ಪ್ರಾಯೋಗಿಕ ಸಂಚಾರವನ್ನು ನಡೆಸಬಹುದು. ಪ್ರಸ್ತುತ 50 ರೈಲುಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂಬರುವ ತಿಂಗಳಲ್ಲಿ 400 ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ ಎಂದು ಈ ಹಿಂದೆ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ನವೀನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ವಂದೇ ಭಾರತ್ ಮೆಟ್ರೋ ರೈಲುಗಳು, 100 - 250 ಕಿಲೋಮಿಟರ್ ವ್ಯಾಪ್ತಿಯೊಳಗೆ ಕಾರ್ಯಾಚರಣೆಯನ್ನು ಮಾಡಲಿವೆ. 12 ಬೋಗಿ (ಕೋಚ್)ಗಳನ್ನು ಹೊಂದಿರಲಿದ್ದು, ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ 16 ಕೋಚ್‌ಗಳವೆರೆಗೂ ಹೆಚ್ಚಿಸಬಹುದು. ದೇಶಾದ್ಯಂತ 124 ಪ್ರಮುಖ ನಗರಗಳನ್ನು ವಂದೇ ಮೆಟ್ರೋ ಸಂಪರ್ಕಿಸಲಿದ್ದು, ಆಗ್ರಾ - ಮಥುರಾ ಮತ್ತು ತಿರುಪತಿ - ಚೆನ್ನೈ ಮಾರ್ಗದಲ್ಲಿಯೂ ಓಡಾಟವನ್ನು ಮಾಡಲಿದೆ ಎನ್ನಲಾಗಿದೆ.
ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಭಾರತ್ ಮೆಟ್ರೋ ರೈಲುಗಳ ಕೋಚ್‌ವೊಂದರಲ್ಲಿ ಸರಿ ಸುಮಾರು 250 ಮಂದಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಫೇರ್ & ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ (ಅಗ್ಗಿ ಪತ್ತೆ ವ್ಯವಸ್ಥೆ) ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಆಟೋಮೆಟಿಕ್ ಡೋರ್ (ಸ್ವಯಂ ಚಾಲಿತ ಬಾಗಿಲು) ಮತ್ತು ಆರಾಮದಾಯಕ ಆಸನಗಳನ್ನು ಕೂಡ ಪಡೆದಿರಲಿದೆ.
ಭಾರತೀಯ ರೈಲ್ವೆ ಇಲಾಖೆಯು ವಂದೇ ಭಾರತ್ ಮೆಟ್ರೋ ರೈಲಿನೊಂದಿಗೆ ವಂದೇ ಭಾರತ್ ಸ್ಲೀಪರ್‌ನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಇದು ದೂರದ ಪ್ರಯಾಣಕ್ಕೆ ಹೆಚ್ಚು ಉಪಯುತ್ತವಾಗಿದ್ದು, ವಿಮಾನದಂತಹ ಸೌಕರ್ಯವನ್ನು ಒಳಗೊಂಡಿರಲಿದೆ. ಒಟ್ಟು 823 ಬರ್ತ್‌ಗಳನ್ನು ಹೊಂದಿರಲಿದ್ದು, ಜನಸಾಮಾನ್ಯರು ಸುಖಕರವಾಗಿ ನಿದ್ರಿಸುತ್ತಾ ಪ್ರಯಾಣಿಸಬಹುದು. ಸುರಕ್ಷತೆಗಾಗಿ ಸ್ವಯಂ ಚಾಲಿತ ಬಾಗಿಲು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿರಲಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








