ಪ್ರಯಾಣಿಕರೇ... ವಂದೇ ಭಾರತ್ ನೀವಂದುಕೊಂಡಂತಲ್ಲ! ಸಮಯಕ್ಕೆ ಅಧಿಕಾರಿ ಬಾರದಿದ್ದರೇ...
ವಂದೇ ಭಾರತ್ ರೈಲು ಸಂಪೂರ್ಣ ಆಧುನಿಕ ತಂತ್ರಜ್ಞಾನ ಹೊಂದಿರುವ ರೈಲು, ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಾಮಾನ್ಯ ರೈಲಿನಂತಲ್ಲದೇ ಹತ್ತುವಾಗ ಇಳಿಯುವಾಗ ತುಂಬಾ ಜಾಗೃತಿ ವಹಿಸಬೇಕು. ಇಲ್ಲದಿದ್ದರೇ ಇಂತಹ ಅನಾಹುತಗಳೇ ಆಗಲಿವೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಈ ಕುರಿತ ವಿಡಿಯೋವನ್ನು ಕೂಡ ನೀವು ಇಲ್ಲಿ ನೋಡಬಹುದು.
ವಿಷಯಕ್ಕೆ ಬಂದರೆ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕನೊಬ್ಬ ಕಾಲು ಜಾರಿ ರೈಲಿನ ಅಡಿಗೆ ಬೀಳುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಅಲ್ಲೇ ಇದ್ದ ರೈಲ್ವೆ ಪೊಲೀಸ್ ಅಧಿಕಾರಿ ಇದನ್ನು ಗಮನಿಸಿ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರೈಲ್ವೇ ಪೊಲೀಸರ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಹೌರಾ-ಪುರಿ ವಂದೇ ಭಾರತ್ ರೈಲು ವೇಳಾಪಟ್ಟಿಯಂತೆ ಹೌರಾ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ ಪ್ರಯಾಣಿಕರೊಬ್ಬರು ರೈಲಿನ ಹಿಂದೆ ಓಡುತ್ತಾ ಏರಲು ಹೋಗಿ ಹಳಿಗೆ ಬೀಳುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ವಂದೇ ಭಾರತ್ ಪ್ರಯಾಣಿಕರೇ ರೈಲಿನ ಕುರಿತು ನೀವು ತಿಳಿಯಬೇಕಾದ ಹಲವು ಸಂಗತಿಗಳಿವೆ. ಇವು ಸಾಮಾನ್ಯ ರೈಲುಗಳಂತಲ್ಲ ಎಂಬುದನ್ನು ಮೊದಲು ತಿಳಿಯಿರಿ.
ವಂದೇ ಭಾರತ್ ರೈಲುಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಅಂದರೆ ಮೆಟ್ರೋ ರೈಲುಗಳಂತೆಯೇ ರೈಲು ಹೊರಡುವ ಮುನ್ನವೇ ಬಾಗಿಲುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದನ್ನು ಎಲ್ಲರೂ ತಿಳಿದಿರಬೇಕು. ಒಮ್ಮೆ ಬಾಗಿಲುಗಳು ಮುಂಚಿಕೊಂಡರೆ ಯಾರೂ ಕೂಡ ಹತ್ತುವುದು-ಇಳಿಯುವುದನ್ನು ಮಾಡಬಾರದು.

ಒಮ್ಮೆ ಬಾಗಿಲು ಮುಚ್ಚಿಕೊಂಡ ನಂತರ ರೈಲು ಪ್ಲಾಟ್‌ಫಾರ್ಮ್‌ನಿಂದ ಚಲಿಸಲು ಪ್ರಾರಂಭಿಸುತ್ತದೆ. ಆದರೆ ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಆದ್ದರಿಂದಲೇ ವ್ಯಕ್ತಿಯೊಬ್ಬರು ರೈಲನ್ನು ಹಿಡಿಯಲು ಯತ್ನಿಸಿ ಚಲಿಸುತ್ತಿದ್ದ ರೈಲಿನ ಹಿಂದೆ ಓಡಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಆ ರೈಲ್ವೆ ಅಧಿಕಾರಿ ಸಮಯಕ್ಕೆ ರಕ್ಷಿಸದಿದ್ದರೇ ಆ ವ್ಯಕ್ತಿ ಜೀವ ಕಳೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ನಿಜಕ್ಕೆ ಆ ವ್ಯಕ್ತಿಗೆ ರೈಲು ಒಮ್ಮೆ ಚಲಿಸಲು ಮುಂದಾದರೆ ಬಾಗಿಲುಗಳು ತೆರೆಯುವುದಿಲ್ಲ ಎಂಬ ಅರಿವೇ ಇಲ್ಲ. ರೈಲಿನ ಹಿಂದೆ ಓಡುತ್ತಾ ಬಾಗಿಲನ್ನು ಹೇಗೋ ತಲುಪಿದ್ದಾರೆ, ಆದರೆ ಸ್ವಯಂಚಾಲಿತ ಬಾಗಿಲಾದ್ದರಿಂದ ಅವು ತೆರೆಯಲಿಲ್ಲ. ಇದೇ ಕಾರಣಕ್ಕೆ ಆತ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಹಿಂದೆ ಓಡಿಬಂದ ರೈಲ್ವೆ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆ ಆತನನ್ನು ಹಿಡಿದು ಹಿಂದಕ್ಕೆ ಎಳೆಯುವಂತೆ ಮಾಡಿದೆ.
ಈ ಹಿಂದೆಯೂ ಹೀಗೆ ಸಾಗುತ್ತಿರುವಾಗಲೇ ವಂದೇ ಭಾರತ್ ರೈಲು ಹತ್ತಲು ಯತ್ನಿಸಿದವರು ಅನೇಕರಿದ್ದಾರೆ. ರೈಲ್ವೆ ಟಿಟಿ ಕೂಡ ಹೀಗೆ ರೈಲನ್ನು ಹಿಡಿಯಲು ಓಡುತ್ತಾ ಹೋಗಿ ಕೆಳಗೆ ಬಿದ್ದಿರುವ ಉದಾಹರಣೆಗಳಿವೆ. ಹಲವರು ರೈಲ್ವೆ ಸಿಬ್ಬಂದಿಗೇ ಈ ಬಗ್ಗೆ ಇನ್ನೂ ತಿಳಿದಿಲ್ಲವಾದ್ದರಿಂದ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೈಲ್ವೇ ಆಡಳಿತವು ಕಾಲಕಾಲಕ್ಕೆ ಸ್ವಯಂಚಾಲಿತ ಬಾಗಿಲುಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications