ವಂದೇ ಭಾರತ್ ಸ್ಲೀಪರ್ ಕೋಚ್ ಸಿದ್ಧ: ವಿಮಾನದಂತಹ ಸೌಕರ್ಯ, ಫೋಟೋಗಳು ವೈರಲ್
2024 ರಲ್ಲಿ ಬರಲಿರುವ ವಂದೇ ಭಾರತ್ ಸ್ಲೀಪರ್ ಕೋಚ್ ರೈಲಿನ ಹೊಸ ಚಿತ್ರಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಅಲ್ಟ್ರಾ ಮಾಡರ್ನ್ ರೈಲಿನ ಸ್ಲೀಪರ್ ಆವೃತ್ತಿ ಶೀಘ್ರದಲ್ಲೇ ಬರಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ರೈಲಿನ ಒಳ ನೋಟದ ಗ್ರಾಫಿಕ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಟ್ವೀಟ್‌ನಲ್ಲಿ ಹೀಗಿತ್ತು, "ಕಾನ್ಸೆಪ್ಟ್ ರೈಲು- ವಂದೇ ಭಾರತ್ (ಸ್ಲೀಪರ್ ಆವೃತ್ತಿ). ಶೀಘ್ರದಲ್ಲೇ ಬರಲಿದೆ..... 2024 ರ ಆರಂಭದಲ್ಲಿ ಎಂದು ಬರೆದಿದ್ದಾರೆ. ಈಗಾಗಲೇ ವಂದೇ ಭಾರತ್ ರೈಲುಗಳಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದೀಗ ವಂದೇ ಭಾರತ್ ಸ್ಲೀಪರ್ ರೈಲುಗಳು ಭಾರತೀಯ ರೈಲ್ವೇಗೆ ಗಮನಾರ್ಹ ಸೇರ್ಪಡೆಯಾಗಲಿವೆ, ಏಕೆಂದರೆ ಪ್ರಯಾಣಿಕರಿಗೆ ರಾತ್ರಿಯಿಡೀ ಈ ಹೈಸ್ಪೀಡ್ ರೈಲುಗಳಲ್ಲಿ ದೂರದ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತವೆ. ಪ್ರತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ವೇಗವನ್ನು ಸಾಧಿಸಲು ವಿನ್ಯಾಸಗೊಳಿಸಲಾಗಿದೆ. 887 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಅಂದಾಜು ಸಾಮರ್ಥ್ಯದೊಂದಿಗೆ 16 ಬೋಗಿಗಳನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣುವ ಸ್ಥಳೀಯ ಅರೆ ಲಘು ವೇಗದ ರೈಲು, ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಒಟ್ಟು 75 ವಂದೇ ಭಾರತ್ ರೈಲುಗಳನ್ನು ಚೇರ್ ಕಾರ್ ಆವೃತ್ತಿಯಾಗಿ ಯೋಜಿಸಲಾಗಿದ್ದು, ಉಳಿದವುಗಳನ್ನು ಸ್ಲೀಪರ್ ಆವೃತ್ತಿಯಾಗಿ ಯೋಜಿಸಲಾಗಿದೆ.

ಭಾರತೀಯ ರೈಲ್ವೆಯು ಮೂರು ವಿಭಿನ್ನ ತಂತ್ರಜ್ಞಾನಗಳ 400 ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ತಯಾರಿಸಲು ಯೋಜಿಸಿದೆ. ಇದಕ್ಕಾಗಿ ಐಆರ್ ಮಾನವಶಕ್ತಿಯೊಂದಿಗೆ ಐಆರ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಗೆ ತಂತ್ರಜ್ಞಾನ ಪಾಲುದಾರರನ್ನು ಆಯ್ಕೆ ಮಾಡಲು ಟೆಂಡರ್‌ಗಳನ್ನು ತೆರೆದಿದೆ. ಮೇಲಿನವುಗಳ ಜೊತೆಗೆ, 2023-24ರ ಬಜೆಟ್ ಅಡಿಯಲ್ಲಿ 8000 ವಂದೇ ಭಾರತ್ ಕೋಚ್‌ಗಳನ್ನು ಸಹ ಪ್ರಸ್ತಾಪಿಸಲಾಗಿದೆ.
ಈ ರೈಲಿನ ಸಾಮರ್ಥ್ಯಕ್ಕೆ ತಕ್ಕಂತೆ ಹಳಿಗಳ ಅಭಿವೃದ್ಧಿಯಾಗಬೇಕಿದೆ. ಏಕೆಂದರೆ ಈ ರೈಲಿಗೆ ಬರೋಬ್ಬರಿ 180 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಕೂಡ ಇದೆ. ಇದಕ್ಕೆ ಉತ್ತಮ ಉದಹರಣೆಯೆಂದರೆ ಈ ಹಿಂದೆ ಟೆಸ್ಟಿಂಗ್ ವೇಳೆ ಕೋಟಾ-ಸವಾಯಿ ಮಾಧೋಪುರ್ ವಿಭಾಗದಲ್ಲಿ ರೈಲು ಗರಿಷ್ಠ 180 ಕಿ.ಮೀ ವೇಗವನ್ನು ಸಾಧಿಸಿತ್ತು. ಹಾಗಾಗಿ ಹಳಿಗಳ ಅಭಿವೃದ್ಧಿಯಾದಲ್ಲಿ ರೈಲುಗಳು ಇನ್ನೂ ವೇಗವಾಗಿ ಸಂಚರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡುತ್ತದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ರೈಲ್ವೆ ಹೇಳಿಕೊಂಡಿದೆ. ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15, 2019 ರಂದು ಚಾಲನೆ ನೀಡಿದ್ದರು.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗುತ್ತಿರುವ ಈ ರೈಲುಗಳು 'ಮೇಕ್-ಇನ್-ಇಂಡಿಯಾ' ಉಪಕ್ರಮದ ಸಂಕೇತವಾಗಿವೆ. ಅಲ್ಲದೇ ಭಾರತದ ಎಂಜಿನಿಯರಿಂಗ್ ಪರಾಕ್ರಮವನ್ನು ಪ್ರದರ್ಶಿಸುತ್ತವೆ. ಸ್ಥಳೀಯ ಸೆಮಿ-ಹೈ-ಸ್ಪೀಡ್ ರೈಲುಗಳನ್ನು ತಯಾರಿಸುವ ಯೋಜನೆಯು 2017 ರ ಮಧ್ಯದಲ್ಲಿ ಪ್ರಾರಂಭವಾಯಿತು. ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ ಜನವರಿ 2019 ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಯಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications