Bengaluru-Mysuru Expressway: ರಾಂಗ್ ಸೈಡ್ ಡ್ರೈವಿಂಗ್, ತಪ್ಪಿದ ಅನಾಹುತ.. ವಿಡಿಯೋ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Benagaluru-Mysuru Expressway)ಯಲ್ಲಿ ಅತಿವೇಗ, ಅಜಾಗರೂಕ ಚಾಲನೆ ಸೇರಿದಂತೆ ವಿವಿಧ ಕಾರಣಗಳಿಗೆ ಒಂದಿಲ್ಲೊಂದು ಆಕ್ಸಿಡೆಂಟ್ ಸಂಭವಿಸುತ್ತಲೇ ಇರುತ್ತವೆ. ಪೊಲೀಸ್ ಇಲಾಖೆಯು ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ದಂಡಾಸ್ತ್ರ ಪ್ರಯೋಗಿಸಿದರು ವಾಹನ ಸವಾರರು ಬುದ್ದಿಯನ್ನು ಕಲಿಯುವುದೇ ಇಲ್ಲ.
ಕಳೆದ ಕೆಲವು ದಿನಗಳ ಹಿಂದೆ, ದಶಪಥ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದೇ ರೀತಿಯ ಇನ್ನೊಂದು ಘಟನೆ ನಿನ್ನೆ ನಡೆದಿದೆ ಎಂದು ಹೇಳಲಾಗಿದೆ. ಆ ವಿಡಿಯೋವನ್ನು 'ThirdEye' ಎಂಬ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

'ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್ ಸೈಡ್ ಡ್ರೈವಿಂಗ್ ನ ಮತ್ತೊಂದು ಘಟನೆ ಜರುಗಿದೆ. ಈ ವೇಳೆ, ಎದುರುಗಡೆಯಿಂದ ಏಕಾಏಕಿ ಬಂದ ಕಾರಿನಿಂದ ದೊಡ್ಡ ಮಟ್ಟದಲ್ಲಿ ಅಪಘಾತ ಸಂಭವಿಸಬೇಕಾಗಿತ್ತು. ಮತ್ತೊಂದು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ವೇಗದಲ್ಲಿದ್ದ ಕಾರಣ, ವಿರುದ್ಧ ದಿಕ್ಕಿನಲ್ಲಿ ಬಂದ ಕಾರಿನ ನಂಬರ್ ಪ್ಲೇಟ್ ಕಾಣಲಿಲ್ಲ. ಫಾಲೋವರ್ ಒಬ್ಬರು ಈ ವಿಡಿಯೋ ಕಳುಹಿಸಿದ್ದಾರೆ' ಎಂದು ಬರೆಯಲಾಗಿದೆ.
ಜೊತೆಗೆ ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಲಾಗಿದೆ. ಜುಲೈ 14ರಂದು ಕೂಡ ಎಕ್ಸ್‌ಪ್ರೆಸ್‌ವೇನಲ್ಲಿ ಕೆಎಸ್‌ಆರ್‌ಟಿಸಿ ಬಸ್ ವೊಂದು ರಾಂಗ್ ಸೈಡ್ ನಲ್ಲಿ ಮೈಸೂರಿನ ಕಡಿಗೆ ವೇಗವಾಗಿ ಹೋಗುವ ಮೂಲಕ ಬೆಂಗಳೂರಿನತ್ತ ತೆರಳುತ್ತಿದ್ದ ವಾಹನ ಸವಾರರಲ್ಲಿ ಭೀತಿ ಸೃಷ್ಟಿಸಿತ್ತು.
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಕಾಣಿಸಿಕೊಂಡ ಬಳಿಕ, ಬಿಡದಿ ಪೊಲೀಸರು, ಸ್ವ್ಯಯಂಪ್ರೇರಣೆಯಿಂದ ಕೇಸ್ ನಮೂದಿಸಿದ್ದರು. ಇನ್ನು, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಮನಗರ ಪೊಲೀಸರು ಶತ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಭಾಗವಾಗಿ, ಜುಲೈ 4ರಿಂದ ಸ್ಪೀಡ್ ರಾಡಾರ್ ನಿಯೋಜಿಸಿದ್ದು, ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ದಂಡ ವಿಧಿಸುವುದನ್ನು ಶುರು ಮಾಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ನಿಗದಿತ 100 kmph ವೇಗಮಿತಿ , ಸೀಟ್ ಬೆಲ್ಟ್, ಹೆಲ್ಮೆಟ್ ಹಾಕದಿರುವುದು ಸೇರಿದಂತೆ ಹಲವು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ಪೊಲೀಸರು, ಕಳೆದ 15 ದಿನಗಳಲ್ಲಿ 2340 ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಸುಮಾರು 16 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ.
ಮಾರ್ಚ್ 12ರಂದು ಉದ್ಘಾಟನೆಗೊಂಡ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಈವರೆಗೆ ನಡೆದ ನಾನಾ ಅಪಘಾತ ಪ್ರಕರಣಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು, ನಿಗದಿತ ವೇಗಮಿತಿಯಲ್ಲಿ ವಾಹನ ಓಡಿಸಬೇಕಿರುವುದು ಪ್ರತಿಯೊಬ್ಬ ಚಾಕಲರ ಜವಾಬ್ದಾರಿಯಾಗಿದ್ದು, ಆಗ ಮಾತ್ರ, ಅಪಘಾತವನ್ನು ತಪ್ಪಿಸಬಹುದು. ಇಲ್ಲಿ ಎಲ್ಲರ ಜೀವವು ಅಮೂಲ್ಯವೆಂಬುದನ್ನು ಅರಿಯಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications