ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ: ವಿಮಾನ ಹಾರುವ ಮುನ್ನ ಸಿಬ್ಬಂದಿ ಮಾಡಿದ ಕೆಲಸ ನೋಡಿ...
ವಿಮಾನ ಇನ್ನೇನು ಹಾರಲು ಕೆಲವೇ ನಿಮಿಷಗಳಿದ್ದಾಗ, ಸಿಬ್ಬಂದಿಯೊಬ್ಬರು ವಿಮಾನದ ರೆಕ್ಕೆಯ ಭಾಗದಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಸಮಸ್ಯೆಯನ್ನು ಟೇಪ್ ಹಾಕಿ ದುರಸ್ಥಿ ಮಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಮಾನ ಹಾನಿಯನ್ನು ಸರಿಪಡಿಸಲು ಟೇಪ್ ಬಳಸಿರುವ ದೃಶ್ಯಗಳನ್ನು ಅದೇ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಈ ವಿಮಾನ ಯಾನ ಸಂಸ್ಥೆಯನ್ನು ಸ್ಪಿರಿಟ್ ಏರ್‌ಲೈನ್ಸ್ ಎಂದು ಗುರುತಿಸಲಾಗಿದೆ. ಸಂಸ್ಥೆಯ ಉದ್ಯೋಗಿಯೊಬ್ಬರು ಟೇಕ್ ಆಫ್ ಮುನ್ನ ಟೇಪ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ವೀಡಿಯೊ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಜೊತೆಗೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊ ಸದ್ಯ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ನ್ಯಾಶ್ ವಿಲ್ಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿಮಾನ ಹಾರುವ ಮೊದಲು ಸಮಸ್ಯೆ ಕಾಣಿಸಿಕೊಂಡಿದ್ದು, ಏರ್‌ಲೈನ್ ಉದ್ಯೋಗಿಯೊಬ್ಬರು ವಿಮಾನದ ಎಡಭಾಗದ ರೆಕ್ಕೆಯಲ್ಲಿ ತ್ವರಿತವಾಗಿ ಸರಿಪಡಿಸಲು ಮುಂದಾದಾಗ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೇಳೆ ಒಂದಷ್ಟು ಮಂದಿ ಪ್ರಯಾಣಿಕರು ವಿಮಾನದ ಸಮಸ್ಯೆಯನ್ನು ಸರಿಪಡಿಸಲು ಟೇಪ್ ಬಳಸುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ವಿಡಿಯೋ ಮಾಡಿದಾತ ಕೂಡ "ಇದೇ ಕಾರಣಕ್ಕೆ ನಾನು ಸ್ಪಿರಿಟ್‌ನೊಂದಿಗೆ ಹಾರುವುದಿಲ್ಲ" ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಈತನಿಂದ ವೈರಲ್ ಆದ ವಿಡಿಯೋ ಹಲವರನ್ನು ಆಕ್ರೋಶಗೊಳಿಸಿದೆ. ವಿಡಿಯೋ ರೆಕಾರ್ಡ್ ಮಾಡಿದವರಂತೆಯೇ ವಿಡಿಯೋವನ್ನು ನೋಡಿದವರು ಕೂಡ ಪ್ರತಿಕ್ರಿಯಿಸಿದ್ದಾರೆ. ನಾವು ಇನ್ನೊಮ್ಮೆ ಈ ಏರ್‌ಲೈನ್ಸ್ ನಲ್ಲಿ ಪ್ರಯಾಣಿಸುವುದೇ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟ ಆಡುವುದಿಲ್ಲ. ವಿಮಾನ ಹಾರುವ ಮುನ್ನ ತುಂಬಾ ಜಾಗರೂಕರಾಗಿ ಎಲ್ಲವನ್ನು ಪರಿಶೀಲಿಸುತ್ತಾರೆ. ಇದೀಗ ವಿಡಿಯೋದಲ್ಲಿ ವ್ಯಕ್ತಿ ಅಂಟಿಸಿರುವ ಟೇಪ್ ಅನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳು ಬಳುಸುತ್ತವೆ ಎಂದು ವೈರಲ್ ಆಗಿರುವ ವಿಡಿಯೋಗೆ ವ್ಯಕ್ತಿಯೊಬ್ಬರು ಕಮೆಂಟ್ ಮೂಲಕ ತಿಳಿಸಿದ್ದಾರೆ.
ಆತನ ಪ್ರಕಾರ ಇದು ಡಕ್ಟ್ ಟೇಪ್ ಅಲ್ಲ ಬದಲಿಗೆ ಇದನ್ನು ಸ್ಪೀಡ್ ಟೇಪ್ ಎಂದು ಕರೆಯಲಾಗುತ್ತದೆ. ವಿಮಾನಗಳಲ್ಲಿ ಸಣ್ಣ ಪುಟ್ಟ ರಿಪೇರಿ ಮಾಡಲು ಈ ಸ್ಪೀಡ್ ಟೇಪ್ ಅನ್ನು ಬಳಸುತ್ತಾರೆ. ಪ್ರತಿಯೊಂದು ವಿಮಾನಯಾನ ಸಂಸ್ಥೆಯು ಇದನ್ನು ಬಳಸುತ್ತದೆ ಎಂದು ತಿಳಿಸಿದ್ದಾರೆ. ವಿಮಾನಗಳಲ್ಲಿ ತ್ವರಿತವಾಗಿ ರಿಪೇರಿಗಳನ್ನು ಸರಿಪಡಿಸಲು ಸ್ಪೀಡ್ ಟೇಪ್ ಅನ್ನು ಬಳಸಲಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದಿದ್ದಾರೆ.
ಸ್ಪೀಡ್ ಟೇಪ್ ಅನ್ನು ಅಂಟಿಸಿದಾಗ, ಅದು ಗಾಳಿಯಲ್ಲಿ ವೇಗವಾಗಿ ಚಲಿಸುವ ವಿಮಾನದ ರೆಕ್ಕೆಗೆ ಅಂಟಿಕೊಳ್ಳುತ್ತದೆ. ಇದು 65°F ನಿಂದ 600°F ವರೆಗಿನ ತಾಪಮಾನವನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಅತ್ಯಂತ ಶಕ್ತಿವಂತ ಸಿಲಿಕಾನ್, ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿದ ಬಟ್ಟೆಯ ಪದರವನ್ನು ಹೊಂದಿರುತ್ತದೆ. ಇದು ಡಕ್ಟ್ ಟೇಪ್‌ಗಿಂತ ದಪ್ಪವಾಗಿರುತ್ತದೆ ಎಂದು ಬಳಕೆದಾರ ವಿವರಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications