ಫಾಸ್ಟ್ ಟ್ಯಾಗ್‍ಗಳಿಂದ ಹೆಚ್ಚಾಯ್ತು ಟೋಲ್ ಪ್ಲಾಜಾಗಳ ಕಾಯುವ ಅವಧಿ
ಟೋಲ್‍ಗಳಲ್ಲಿ ಶುಲ್ಕವನ್ನು ಪಾವತಿಸಲು ಫಾಸ್ಟ್ ಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು 2019ರ ಡಿಸೆಂಬರ್ 1ರಿಂದ ಫಾಸ್ಟ್ ಟ್ಯಾಗ್‍ಗಳು ಕಡ್ಡಾಯವೆಂದು 2019ರ ಅಕ್ಟೋಬರ್ ತಿಂಗಳಿನಲ್ಲಿ ತಿಳಿಸಿದ್ದರು.

ಫಾಸ್ಟ್ ಟ್ಯಾಗ್‍ಗಳನ್ನು ಅಳವಡಿಸಿಕೊಳ್ಳಲು 2019ರ ಡಿಸೆಂಬರ್ 1ರವರೆಗೆ ಗಡುವು ನೀಡಲಾಗಿತ್ತು. ನಂತರ ಈ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಲಾಯಿತು. ಕೊನೆಗೆ ಈ ವರ್ಷದ ಜನವರಿ 15ಕ್ಕೆ ಈ ಗಡುವನ್ನು ಅಂತ್ಯಗೊಳಿಸಲಾಯಿತು. ಟೋಲ್ ಪ್ಲಾಜಾಗಳಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಹಾಗೂ ಕಿ.ಮೀ ಉದ್ದದ ಸಾಲುಗಳನ್ನು ಕೊನೆಗೊಳಿಸುವ ಕಾರಣಕ್ಕಾಗಿ ಫಾಸ್ಟ್ ಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಯಿತು.

ಫಾಸ್ಟ್ ಟ್ಯಾಗ್‍ಗಳು ಆರ್‍ಎಫ್‍ಐಡಿ ಸ್ಟಿಕ್ಕರ್‍ಗಳಾಗಿವೆ. ಆರ್‍ಎಫ್‍ಐಡಿ ಎಂದರೆ ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಆಗಿದೆ. ಫಾಸ್ಟ್ ಟ್ಯಾಗ್‍ಗಳನ್ನು ವಾಹನಗಳ ಮುಂಭಾಗದಲ್ಲಿರುವ ಗಾಜುಗಳ ಮೇಲೆ ಅಂಟಿಸಿಕೊಂಡು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.

ಈ ಸ್ಟಿಕ್ಕರ್‍ಗಳನ್ನು ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ ಬಳಿ ತೆರಳಿದಾಗ ಅಲ್ಲಿರುವ ಸ್ಕ್ಯಾನರ್‍ಗಳು ಈ ಸ್ಟಿಕ್ಕರ್‍ಗಳನ್ನು ರೀಡ್ ಮಾಡುತ್ತವೆ. ನಂತರ ನಿಗದಿಪಡಿಸಿರುವ ಶುಲ್ಕವು ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಇದರಿಂದಾಗಿ ಶುಲ್ಕ ಪಾವತಿಸಲು ಕಾಯಬೇಕಾಗಿಲ್ಲ. ಫಾಸ್ಟ್ ಟ್ಯಾಗ್‍ಗಳಿಂದಾಗಿ ವಾಹನಗಳು ಸರಾಗವಾಗಿ ಚಲಿಸುವುದರ ಜೊತೆಗೆ ಪೇಪರ್‍ರಹಿತ ವಹಿವಾಟು ನಡೆಯುತ್ತದೆ. ಫಾಸ್ಟ್ ಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದ್ದರೂ ಜನರ ಗೋಳು ತಪ್ಪಿಲ್ಲ.

ಇವುಗಳನ್ನು ಅಳವಡಿಸಿಕೊಂಡ ನಂತರವೂ ಟೋಲ್ ಪ್ಲಾಜಾಗಳಲ್ಲಿ ಕಾಯುವುದು ತಪ್ಪುತ್ತಿಲ್ಲ ಎಂಬುದು ಜನರ ದೂರು. ಈ ದೂರು ಬಂದಿರುವುದನ್ನು ಕೇಂದ್ರ ಸರ್ಕಾರವು ದೃಢಪಡಿಸಿದೆ. ಇದನ್ನು ಸಂಸತ್ತಿನಲ್ಲಿಯೇ ಒಪ್ಪಿಕೊಂಡಿದೆ.

ಟೋಲ್ ಪ್ಲಾಜಾದಲ್ಲಿರುವ ಮಾಹಿತಿಗಳ ಪ್ರಕಾರ, ಟೋಲ್‍ಗಳಲ್ಲಿ ವಾಹನಗಳ ಕಾಯುವ ಅವಧಿಯು 29%ನಷ್ಟು ಹೆಚ್ಚಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಫಾಸ್ಟ್ ಟ್ಯಾಗ್ ಜಾರಿಯ ನಂತರ ಟೋಲ್ ಪ್ಲಾಜಾಗಳಲ್ಲಿನ ಕಾಯುವ ಅವಧಿಯು 60%ನಷ್ಟು ಹೆಚ್ಚಾಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿರವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಶಿವಸೇನೆಯ ಸಂಸತ್ ಸದಸ್ಯ ಸಂಜಯ್ ರಾವತ್‍ರವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ. ಭಾರತದಲ್ಲಿರುವ ಕೆಲವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಕಾಯುವ ಅವಧಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಫಾಸ್ಟ್ ಟ್ಯಾಗ್ ಹೊಂದಿರುವ ಕಾರುಗಳ ಲೇನ್‍ಗಳಲ್ಲಿನ ಅವಧಿಯು ಕಡಿಮೆಯಾಗಿದ್ದರೆ, ಹೈಬ್ರಿಡ್ ಲೇನ್‍ಗಳಲ್ಲಿನ ಕಾಯುವ ಅವಧಿಯು ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹೈಬ್ರಿಡ್ ಲೇನ್‍ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದವರು ಹಣವನ್ನು ಪಾವತಿಸುವ ಕಾರಣಕ್ಕೆ ತಡವಾಗುತ್ತಿದೆ.

ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಕಾಯುವ ಅವಧಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈಗ ಇದನ್ನು ಸ್ವತಃ ಕೇಂದ್ರ ಸರ್ಕಾರವೇ ಖಚಿತಪಡಿಸಿದೆ.

ಕೇಂದ್ರ ಟೋಲ್ ಪ್ಲಾಜಾ ಟ್ರಾಫಿಕ್ ಮಾನಿಟರಿಂಗ್ ಸಿಸ್ಟಂ ಪ್ರಕಾರ, ಪ್ರತಿದಿನ 60 ಲಕ್ಷಕ್ಕೂ ಹೆಚ್ಚು ವಾಹನಗಳು ಟೋಲ್ ಪ್ಲಾಜಾಗಳ ಮೂಲಕ ಚಲಿಸುತ್ತವೆ. ಇವುಗಳಿಂದ ಭಾರೀ ಪ್ರಮಾಣದ ದಟ್ಟಣೆ ಉಂಟಾಗುವ ಕಾರಣಕ್ಕೆ ಫಾಸ್ಟ್ ಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದೆ.


Click it and Unblock the Notifications