ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಿಸುವುದು ಹೇಗೆ? ಐತಿಹಾಸಿಕ ದೃಷ್ಯಗಳ ವೀಕ್ಷಣೆಗೆ ಹಲವು ಆಯ್ಕೆ
ಭಾರತದ ಹೆಮ್ಮೆಯ ಮಿಷನ್ ಇಸ್ರೋದ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದರೆ ಅದು ಭಾರತಕ್ಕೆ ಮಾತ್ರವಲ್ಲ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ದೊಡ್ಡ ಸಾಧನೆಯಾಗಲಿದೆ. ಏಕೆಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಇಳಿದ್ರೆ, ಈ ಸಾಧನೆ ಮಾಡಿದ ಮೊದಲ ದೇಶವಾಗಿ ಭಾರತ ಇತಿಹಾಸ ಸೃಷ್ಟಿಸಲಿದೆ.
ಭಾರತದ ಈ ಯಶಸ್ಸು ಇತರ ದೇಶಗಳ ಮುಂದಿನ ಮಿಷನ್‌ಗಳಲ್ಲಿ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನಗಳಿಗೆ ಉತ್ತೇಜನಕಾರಿಯಾಗಿದೆ. ಇಂದು ಚಂದ್ರಯಾನ-3 ವಿಕ್ರಮ್ ಲ್ಯಾಂಡರ್‌ಗೆ ಮಹತ್ವದ ದಿನ, 5 ಗಂಟೆ 44 ನಿಮಿಷಕ್ಕೆ ಗೊತ್ತುಪಡಿಸಿದ ಸ್ಥಳದಲ್ಲಿ ವಿಕ್ರಮ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತು ಇಸ್ರೋ ಟ್ವೀಟ್ ಮಾಡಿದ್ದು, ನಾವು ಲ್ಯಾಂಡರ್ ಅನ್ನು ಕ್ಷೇಮವಾಗಿ ಇಳಿಸಲು ಸಜ್ಜಾಗಿರುವುದಾಗಿ ತಿಳಿಸಿದೆ.
ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಅನ್ನು ಪ್ರಾರಂಭಿಸಲು ಎಲ್ಲಾ ಸಿದ್ಧವಾಗಿದೆ. 17:44 (5:44) ಗಂಟೆಯ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ALS ಆಜ್ಞೆಯನ್ನು ಸ್ವೀಕರಿಸಿದ ನಂತರ, LM ಚಾಲಿತ ಇಳಿಯುವಿಕೆಗಾಗಿ ಥ್ರೊಟಲ್ ಎಂಜಿನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಮಿಷನ್ ಕಾರ್ಯಾಚರಣೆಗಳ ತಂಡವು ಆಜ್ಞೆಗಳ ಅನುಕ್ರಮ ಕಾರ್ಯಗತಗೊಳಿಸುವಿಕೆಯನ್ನು ದೃಢೀಕರಿಸುತ್ತದೆ ಎಂದು ಟ್ವೀಟ್ ಮಾಡಿದೆ.
ಇಲ್ಲಿ ಲೈವ್ ವೀಕ್ಷಿಸಿ: ಚಂದ್ರನ ಮೇಲೆ ಲ್ಯಾಂಡಿಂಗ್‌ನ ಐತಿಹಾಸಿಕ ದೃಷ್ಯಗಳನ್ನು ನೀವು ಲೈವ್ ಆಗಿ ವೀಕ್ಷಿಸಲು ನಿಮಗೆ ಹಲವಾರು ಆಯ್ಕೆಗಳಿವೆ. ಚಂದ್ರಯಾನ-3 ಮೂನ್ ಲ್ಯಾಂಡಿಂಗ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಇಸ್ರೋದ ಈ ಲೈವ್ ಟೆಲಿಕಾಸ್ಟ್ ಆಗಸ್ಟ್ 23 ರಂದು (ಇಂದು) ಸಂಜೆ 5.27 ಕ್ಕೆ ಪ್ರಾರಂಭವಾಗುತ್ತದೆ. ಜೊತೆಗೆ ಡಿಡಿ ನ್ಯಾಷನಲ್ ಟಿವಿ ಚಾನೆಲ್‌ನಲ್ಲಿ ಸಹ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲೂ ನೇರ ಪ್ರಸಾರವನ್ನು ವೀಕ್ಷಿಸಬಹುದು. ನ್ಯಾಷನಲ್ ಜಿಯೋಗ್ರಾಫಿಕ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸಂಜೆ 4 ಗಂಟೆಗೆ ನೇರ ಪ್ರಸಾರ ಪ್ರಾರಂಭವಾಗಲಿದೆ.
ಭಾರತ ಬಲಿಷ್ಟ ದೇಶ: ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದು ಬಹುತೇಕ ಖಚಿತವಾಗಿದೆ. ಈ ದಕ್ಷಿಣ ಧ್ರುವ ಪ್ರದೇಶವು ಚಂದ್ರನ ಕಪ್ಪು ಭಾಗವಾಗಿದೆ. ಹೆಪ್ಪುಗಟ್ಟಿದ ನೀರು ಮತ್ತು ಅಮೂಲ್ಯ ಖನಿಜಗಳಿವೆ ಎಂದು ನಂಬಲಾಗಿದೆ. ಯಾವುದೇ ದೇಶವು ಕೂಡ ಇಲ್ಲಿಯವರೆಗೆ ಅಲ್ಲಿ ಲಗ್ಗೆಯಿಟ್ಟಿಲ್ಲ. ಈಗ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಮೂಲಕ ಇಡೀ ಜಗತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ ಎಂಬ ಸತ್ಯ ತಿಳಿಯಲಿದೆ.

ಸಾಕಷ್ಟು ಶ್ರಮವಿದೆ: 2019ರಲ್ಲಿ ಚಂದ್ರಯಾನ -2 ಕಡೆ ಕ್ಷಣದಲ್ಲಿ ವೈಫಲ್ಯವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ವಿಜ್ಞಾನಿಗಳು, ಚಂದ್ರನ ಮೇಲೆ ಗುರುತ್ವಾಕರ್ಷಣ ಶಕ್ತಿ ಕಡಿಮೆಯಿರುವುದರಿಂದ ಈ ಬಾರಿ, ಲ್ಯಾಂಡರ್‌ನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಚಂದ್ರಯಾನ 3 ಯೋಜನೆಗೆ ರೂ.630 ಕೋಟಿಯನ್ನು ಇಸ್ರೋ ವ್ಯಯಿಸಿದೆ. ಚಂದ್ರಯಾನ 2ಕ್ಕೆ ರೂ.978 ಕೋಟಿ ಖರ್ಚು ಮಾಡಲಾಗಿತ್ತು.
ಜುಲೈ 14ರಂದು, ಚಂದ್ರಯಾನ -3 ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಲ್ಯಾಂಡರ್ ಮತ್ತು ರೋವರ್ ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡುವಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಅಂದು, ಮಧ್ಯಾಹ್ನ 2:35ರ ಸುಮಾರಿಗೆ ನಭಕ್ಕೆ ಹಾರಿದ್ದ ಲ್ಯಾಂಡರ್ ಮತ್ತು ರೋವರ್, ಬರೋಬ್ಬರಿ 40 ದಿನದ ಬಳಿಕ ಈಗ ಲ್ಯಾಂಡ್ ಆಗಲಿದೆ.


Click it and Unblock the Notifications