Odisha Train Tragedy: ಆ್ಯಂಬುಲೆನ್ಸ್‌ನಲ್ಲಿ 230 Km ತೆರಳಿದ ಅಪ್ಪ.. ಶವಾಗಾರದಲ್ಲಿದ್ದ ಮಗನನ್ನು ಬದುಕಿಸಿಕೊಂಡ!
ಭಾರತದ ರೈಲ್ವೆ ಇತಿಹಾಸದಲ್ಲಿ ಅತಿದೊಡ್ಡ ದುರಂತ ಶುಕ್ರವಾರ ನಡೆದು ಹೋಗಿದೆ. ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲು ನಡುವೆ ಡಿಕ್ಕಿ ಸಂಭವಿಸಿ, ಈ ದುರ್ಘಟನೆ ಜರುಗಿದ್ದು, ಅಪಾರ ಸಾವು, ನೋವಾಗಿದೆ. ಇದೀಗ, ಅದರ ಹಿಂದಿನ ಒಂದೊಂದೇ ದುಃಖದ ಕಥೆಗಳು ಹೊರಬರುತ್ತಿವೆ. ತಂದೆಯೊಬ್ಬ ತನ್ನ ಪುತ್ರನನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನವನ್ನು ಮೆಚ್ಚಲೇಬೇಕು.
ಪಶ್ಚಿಮ ಬಂಗಾಳದ ಹೌರಾದ ಹೆಲರಾಮ್ ಎಂಬುವವರೇ ಈ ಕಥೆಯ ಹೀರೋ.. ಅಲ್ಲಿ ಜೀವನೋಪಾಯಕ್ಕೆ ಅಂಗಡಿಯನ್ನು ನಡೆಸುತ್ತಿದ್ದಾರೆ. ತಮ್ಮ 24ರ ಹರೆಯದ ಪುತ್ರ ಬಿಸ್ವಜಿತ್ ಮಲಿಕ್ ಅವರನ್ನು ಶಾಲಿಮಾರ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಕೊರಮಂಡಲ್ ರೈಲು ಹತ್ತಿಸಿ, ಮನೆ ಬರುತ್ತಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಈ ರೈಲು ಅಪಘಾತವಾಗಿರುವ ಬಗ್ಗೆ ಟಿವಿಯಲ್ಲಿ ಸುದ್ದಿಯನ್ನು ನೋಡುತ್ತಾರೆ.

ತಕ್ಷಣ ಪುತ್ರ, ಬಿಸ್ವಜಿತ್ ಅವರ ಮೊಬೈಲ್ ಗೆ ಕರೆ ಮಾಡುತ್ತಾರೆ. ಫೋನ್ ಎತ್ತಿದ ಆತ 'ನನಗೆ ಗಂಭೀರ ಗಾಯಗಳಾಗಿವೆ. ನಾನು ಎಲ್ಲಿದ್ದೇನೆ ಎಂದು ತಿಳಿದಿಲ್ಲ' ಎಂದು ಹೇಳುತ್ತಾನೆ. ಅಲ್ಲಿಂದ ನೋಡಿ, ತಂದೆಯ ನಿಜವಾದ ಹೋರಾಟ ಆರಂಭವಾಗುತ್ತದೆ. ಹೌರಾದಲ್ಲೇ ಆ್ಯಂಬುಲೆನ್ಸ್‌ವೊಂದನ್ನು ಬಾಡಿಗೆ ಪಡೆದು, ಸಂಬಂಧಿಯೊಂದಿಗೆ ಘಟನೆ ನಡೆದ ಸ್ಥಳಕ್ಕೆ ಹೊರಡುತ್ತಾರೆ.
ಬರೋಬ್ಬರಿ 230 ಕಿಲೋಮೀಟರ್ ದೂರವನ್ನು ಆ್ಯಂಬುಲೆನ್ಸ್‌ನಲ್ಲಿ ಕ್ರಮಿಸಿ, ಅದೇ ರಾತ್ರಿಯೇ ದುರ್ಘಟನೆ ನಡೆದ ಸ್ಥಳವನ್ನು ತಲುಪಿ ಮಗನನ್ನು ಹುಡುಕಲು ಆರಂಭಿಸಿದ್ದಾರೆ. ಮೊದಲಿಗೆ ಗಾಯಾಳುಗಳನ್ನು ದಾಖಲು ಮಾಡಿದ್ದ ಆಸ್ಪತ್ರೆಯಲ್ಲಿ ಶೋಧಿಸಿಸುತ್ತಾರೆ. ಅಲ್ಲಿ ಮಗನ ಸುಳಿವು ಸಿಕ್ಕಿಲ್ಲ. ಅಲ್ಲಿದ್ದವರೂ ನಿಮ್ಮ ಪುತ್ರ ಮೃತಪಟ್ಟಿರಬಹುದು. ಬಹನಾಗಾದ ಪ್ರೌಢಶಾಲೆಯಲ್ಲಿ ಮಾಡಲಾಗಿರುವ ತಾತ್ಕಾಲಿಕ ಶವಗಾರದಲ್ಲಿ ಹುಡುಕುವಂತೆ ಸಲಹೆ ನೀಡಿದ್ದಾರೆ.

ಆದರೆ, ಆ ಶವಾಗಾರಕ್ಕೆ ನಾಗರಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೇಗೋ ಅನುಮತಿ ಪಡೆದ ಹೆಲರಾಮ್ ಮಗನನ್ನು ಪತ್ತೆ ಮಾಡಲು ಶುರು ಮಾಡಿದ್ದಾರೆ. ಅಲ್ಲಿನ ಕೋಣೆಯೊಂದರಲ್ಲಿ ಮಗನ ಕೈ ಕಂಡಿದೆ. ತಕ್ಷಣ ಅಲ್ಲಿಗೆ ಹೋಗಿ, ನೋಡಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಗೊತ್ತಾಗುತ್ತದೆ. ತಾವು ಹೌರಾದಿಂದ ತಂದಿದ್ದ ಆ್ಯಂಬುಲೆನ್ಸ್‌ನಲ್ಲಿಯೇ ಬಾಲಸೋರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಕಟಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ. ಆ ಬಳಿಕ, ಗಾಯಾಳು ಬಿಸ್ವಜಿತ್ ನನ್ನು ಕೋಲ್ಕತ್ತಾದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಆತನಿಗೆ ತೀವ್ರ ನಿಗಾ ಘಟಕದಲ್ಲಿ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೈಲು ಅಪಘಾತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಿಸ್ವಜಿತ್ ನನ್ನು ಬಹುಶಃ ವೈದ್ಯಕೀಯೇತರ ಸಿಬ್ಬಂದಿ ರಕ್ಷಣಾ ಕಾರ್ಯದ ವೇಳೆ, ಆತ ಮೃತಪಟ್ಟಿರಬಹುದು ಅಂದುಕೊಂಡು ಶವಾಗಾರಕ್ಕೆ ಸಾಗಿಸಿರಬಹುದು. ಆದರೆ, ಆತನ ತಂದೆ ಹೆಲರಾಮ್ ಅವರ ಸಮಯೋಚಿತ ಕಾರ್ಯದಿಂದ ಬಿಸ್ವಜಿತ್ ಬದುಕಿದ್ದಾನೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಂದೆಯ ಕೆಲಸಕ್ಕೆ ಶಹಭಾಷ್ ಎನ್ನುತ್ತಿದ್ದಾರೆ.
ಇನ್ನು, ಒಡಿಶಾದ ಬಾಲಸೋರ್‌ನಲ್ಲಿ ನಡೆದ ಈ ದುರ್ಘಟನೆಯಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿದೆ. 288 ಜನರು ಸಾವನ್ನಪ್ಪಿದ್ದು, 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ರೈಲು ಹಳಿ ಸರಿಪಡಿಸುವ ಕಾರ್ಯ ಭರದಿಂದ ನಡೆದಿದೆ.


Click it and Unblock the Notifications