ವಿಡಿಯೋ! ಉಚಿತ ಬಸ್ ಪ್ರಯಾಣದ ಮಹಿಳೆಯರ ಮಧ್ಯೆ ಮಾರಾಮರಿ: ಬಿಡಿಸಲು ಬಂದ ಯುವಕನಿಗೂ ಗೂಸಾ
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ ಬಂದಿದ್ದೇ ಬಂದಿದ್ದು. ಯಾವ ಬಸ್ ನೋಡಿದರೂ ನೂಕು ನುಗ್ಗಲಲ್ಲೇ ಸಾಗುವಂತಾಗಿದೆ. ಎಲ್ಲಾ ಬಸ್‌ಗಳಲ್ಲೂ ಮಹಿಳೆಯರು ತುಂಬಿಕೊಳ್ಳುತ್ತಿದ್ದು ಬಸ್ ಒಳಗೆ ಕಾಲಿಡಲೂ ಸಾಧ್ಯವಿಲ್ಲ ಎನ್ನುವಂತಾಗಿದೆ. ಹಲವು ಬಸ್‌ಗಳಲ್ಲಿ ಸೀಟ್‌ಗಾಗಿ ಜಗಳವೂ ನಡೆಯುತ್ತಿದೆ.
ಇದೀಗ ರಾಜ್ಯದ ಸಾಂಸ್ಕ್ರತಿಕ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಬಸ್ ಪ್ರಯಾಣದ ವೇಳೆ ಸೀಟ್‌ಗಾಗಿ ಮಹಿಳೆಯರೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ನೋಡಲು ತಮಾಷೆಯಾಗಿದ್ದರೂ, ಉಚಿತ ಬಸ್ ಪ್ರಯಾಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ನಿಜಕ್ಕೂ ಕುಳಿತು ಚಿಂತಿಸಬೇಕಾದಂತಹ ಘಟನೆಗಳು ನಡೆಯುತ್ತಿದೆ.

ಮೈಸೂರಿನ ಸರ್ಕಾರಿ ಸಿಟಿ ಬಸ್‌ನಲ್ಲಿ ಘಟನೆ ನಡೆದಿದ್ದು, ಸೀಟ್‌ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಮಹಿಳೆಯರು ಸೀಟ್‌ಗಾಗಿ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇನ್ನು ವರದಿಗಳ ಪ್ರಕಾರ ಮೈಸೂರು ಬಸ್‌ಸ್ಟ್ಯಾಂಡ್‌ನಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್‌ನಲ್ಲಿ ಘಟನೆ ಸಂಭವಿಸಿದೆ. ಬಸ್ ನಿಂತಿದ್ದ ವೇಲೆ ಮಹಿಳೆಯೊಬ್ಬಳು ಬಸ್‌ನ ಹೊರಗಿನಿಂದ ತನ್ನ ದುಪ್ಪಟ್ಟಾವನ್ನು ಕಿಟಕಿ ಮೂಲಕ ಹಾಕಿ ಎಲ್ಲರೂ ಮಾಡುವ ರೀತಿಯಲ್ಲಿ ತನ್ನ ಸೀಟ್ ಅನ್ನು ರಿಸರ್ವ್ ಮಾಡಿಕೊಂಡಿದ್ದಾಳೆ.
ನಂತರ ಮಹಿಳೆ ನೂಕು ನುಗ್ಗಲು ದಾಟಿ ಬಸ್ ಒಳಗೆ ತನ್ನ ಸೀಟ್ ಬಳಿ ಬಂದು ಕುಳಿತಾಗ ಆ ಸೀಟ್‌ನಲ್ಲಿ ಬೇರೆ ಮಹಿಳೆಯೊಬ್ಬಳು ಕೂತಿದ್ದೇ ಜಗಳಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇನ್ನು ಈ ಇಬ್ಬರು ಮಹಿಳೆಯರೊಂದಿಗೆ ಬಂದಿದ್ದ ಇತರ ಮಹಿಳೆಯರು ತನ್ನ ಗೆಳತಿಯರಿಗೆ ಬೆಂಬಲ ನೀಡಲು ಹೋಗಿ ಕೊನೆಗೆ ಅದು ಬಸ್ ಒಳಗೆ ಗಲಭೆ ಎಬ್ಬಿಸುವಲ್ಲಿ ಯಶಸ್ವಿಯಾಗಿದೆ
ಜಗಳ ಬಿಡಿಸಲು ಬಂದ ಯುವಕನಿಗೂ ಗೂಸಾ: ಇನ್ನು ಇದೇ ವೇಳೆ ಮಹಿಳೆಯರ ಗುಂಪು ಬಸ್‌ನಲ್ಲಿ ಜಗಳವಾಡುತ್ತಿರುವುದನ್ನು ಕಂಡು ರೋಸಿ ಹೋದ ಯುವಕನೊಬ್ಬ ಮಹಿಳೆಯರ ಜಗಳವನ್ನು ಬಿಡಿಸಲು ಮಧ್ಯ ಪ್ರವೇಶಿಸಿದ್ದಾನೆ. ಜಗಳವಾಡುತ್ತಿರುವ ನಮ್ಮ ಮಧ್ಯೆ ಮೂಗು ತೂರಿಸಲು ಇವನಾರು ಎಂದು ಮಹಿಳೆಯರು ಆ ಯುವಕನಿಗೂ ಗೂಸಾ ನೀಡಿದ್ದಾರೆ.
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಈ ರೀತಿಯ ಘಟನೆಗಳನ್ನು ತಡೆಯಲು ಸರ್ಕಾರ ರಿಸರ್ವೇಷನ್ ನಂತಹ ನಿಯಮಗಳನ್ನು ತರುವಂತಹ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಜೊತೆಗೆ ಸಾರಿಗೆ ಪರಿಣಿತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಈ ಉಚಿತ ಪ್ರಯಾಣ ನಿಲ್ಲಿಸುತ್ತಾರೇನೋ ಎಂಬ ಭಯದಿಂದ ಜನರು ಹೀಗೆ ಪ್ರಯಾಣಿಸುತ್ತಿದ್ದಾರೆ. ನಮ್ಮ ಸರ್ಕಾರ ಇರುವವರೆಗೂ ನಾವು ಈ ಯೋಜನೆಯನ್ನು ಕೊಂಡೊಯ್ಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications